ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸದ್ಯಕ್ಕಿಲ್ಲ

| Published : Jul 11 2025, 11:48 PM IST

ಸಾರಾಂಶ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಾನು ಶಾಸಕಳಾಗಿದ್ದಾಗ ಸತತ ಪ್ರಯತ್ನ ನಡೆಸಿದ್ದೆ.

ಕಾರವಾರ: ಬಹುಕಾಲದಿಂದ ಜನತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಮಂಡಿಸುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಾಧ್ಯವಿಲ್ಲ ಎಂದು ಪ್ರಸ್ತಾವನೆ ಮುಂದೂಡಿ, ಬಿಜೆಪಿ ಸರ್ಕಾರ ಕೊಟ್ಟಿದ್ದನ್ನು ಕಸಿದುಕೊಳ್ಳುವ ಮೂಲಕ ಇಲ್ಲಿನ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕಿಡಿಕಾರಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಾನು ಶಾಸಕಳಾಗಿದ್ದಾಗ ಸತತ ಪ್ರಯತ್ನ ನಡೆಸಿದ್ದೆ. ಇತರರೂ ಬೇಡಿಕೆ ಮಂಡಿಸಿದಾಗ, ಸಾರ್ವಜನಿಕರ ಆಗ್ರಹವೂ ಇದ್ದುದರಿಂದ ಅಂದಿನ ಬಿಜೆಪಿ ಸರ್ಕಾರ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜೊತೆಗೆ ಕಾರವಾರದ ಕ್ರಿಮ್ಸ್ ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿತ್ತು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆಸ್ಪತ್ರೆ ನಿರ್ಮಿಸುವ ಬಿಜೆಪಿ ಸರ್ಕಾರದ ಜನೋಪಕಾರಿ ಕ್ರಮವನ್ನು ಕೈಬಿಟ್ಟಿತು. ನಂತರ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಭರವಸೆ ನೀಡಿದರು. ಆದರೆ ಸರ್ಕಾರ ಬಂದು ಎರಡು ವರ್ಷ ಮುಗಿದರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿಟ್ಟಿನಲ್ಲಿ ಗಂಭೀರವಾಗಿ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕ್ರಿಮ್ಸ್ ಆವರಣದಲ್ಲಿ 300 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ₹210 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ಕೋರಿ ಸಲ್ಲಿಸಿದ ಪ್ರಸ್ತಾವನೆಯನ್ನೂ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ ಎಂದರು.

ಜಿಲ್ಲೆಯ ಜನತೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಅದೆಷ್ಟೋ ವರ್ಷಗಳಿಂದ ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ. ಹೃದಯ ತೊಂದರೆ, ನರರೋಗ, ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ಹೆಚ್ಚಿನ ಆಸ್ಪತ್ರೆ ಸೌಲಭ್ಯಕ್ಕಾಗಿ ದೂರದ ಉಡುಪಿ, ಮಂಗಳೂರು, ಹುಬ್ಬಳ್ಳಿ ಹಾಗೂ ನೆರೆಯ ರಾಜ್ಯ ಗೋವಾ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇದೆ. ಹಲವು ಸಂದರ್ಭಗಳಲ್ಲಿ ಮಾರ್ಗಮದ್ಯದಲ್ಲಿಯೇ ಮೃತಪಟ್ಟ ಉದಾಹರಣೆಗಳೂ ಇವೆ ಎಂದರು.

ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯತೆ ಇರುವುದನ್ನು ಮನಗಂಡು ಹಿಂದೆ ನಾನು ಶಾಸಕಳಾಗಿ ಆಯ್ಕೆಯಾದ ನಂತರ ಆಸ್ಪತ್ರೆ ನಿರ್ಮಾಣದ ಕುರಿತು ಸರ್ಕಾರದ ಗಮನ ಸೆಳೆದ ಫಲವಾಗಿ 450 ಹಾಸಿಗೆಗಳ ಹಾಗೂ ಕೆಲವು ಮೂಲಭೂತ ಸೌಕರ್ಯಗಳೊಂದಿಗೆ (ಟ್ರಾಮಾ, ಕ್ಯಾನ್ಸರ್ ಆಸ್ಪತ್ರೆ ಹಾಗೂ ಇತ್ಯಾದಿ ಸೌಲಭ್ಯ) 4 ಮಹಡಿಯ 2.59 ಲಕ್ಷ ಚದರ ಅಡಿಯ ವಿಸ್ತೀರ್ಣದ ಕಟ್ಟಡಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹160 ಕೋಟಿ ಬಿಡುಗಡೆ ಮಾಡಿದ್ದು, ಈಗಾಗಲೇ ಕೆಲಸ ಮುಕ್ತಾಯಗೊಂಡು ಸುಸಜ್ಜಿತವಾಗಿ ತಲೆ ಎತ್ತಿದೆ. ನೂತನ ಕಟ್ಟಡಕ್ಕೆ ಆಸ್ಪತ್ರೆಯ ಸ್ಥಳಾಂತರ ಯಾವಾಗ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ ಎಂದರು.

ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ಹೃದ್ರೋಗ ತಜ್ಞರು, ನರರೋಗ ತಜ್ಞರು, ಯುರೋಲಾಜಿಸ್ಟ್ ಸೇರಿದಂತೆ 7 ತಜ್ಞ ವೈದ್ಯರ ಹುದ್ದೆಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾಗಿತ್ತು. ಆ ಹುದ್ದೆಗೆ ನೇಮಕಾತಿ ಮಾಡಲೂ ಕಾಂಗ್ರೆಸ್ ಸರ್ಕಾರ ಮುಂದಾಗಿಲ್ಲ. ಇದು ಕಾಂಗ್ರೆಸ್ ಸರ್ಕಾರ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಜನತೆಗೆ ಮಾಡಿದ ದ್ರೋಹವಾಗಿದೆ. ಎಂಆರ್‌ಐ ಯಂತ್ರ ಮಂಜೂರಾಗಿತ್ತು. ಅದು ಕೂಡ ಬಂದಿಲ್ಲ. ಜನರ ಜೀವಕ್ಕೆ ಗ್ಯಾರಂಟಿ ಕೊಡದೆ ಬೇರೆ ಎಲ್ಲ ಗ್ಯಾರಂಟಿಯನ್ನು ಅರಬರೆಯಾಗಿ ಕೊಟ್ಟರೆ ಯಾವ ಪ್ರಯೋಜನ ಎಂದು ರೂಪಾಲಿ ಎಸ್.ನಾಯ್ಕ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎರಡು ಆಸ್ಪತ್ರೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಕಾರವಾರದಲ್ಲಿ ಒಂದು ಆಸ್ಪತ್ರೆ ಮಾಡಲೂ ಶಾಸಕರಿಗೆ ಸಾಧ್ಯವಾಗಲಿಲ್ಲ. ಜನರ ಜೀವಕ್ಕೆ ಬೆಲೆಯೇ ಇಲ್ಲವೆ ಎಂದು ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.