ಸಾರಾಂಶ
ಏ, ಕರಿ ಟೋಪಿ ಎಂಎಲ್ಎ ಬಾ ಇಲ್ಲಿ ಎಂದು ಉದ್ಧಟತನದಿಂದ ಕೂಗಿದ್ದವರು ಜನವರಿಯಲ್ಲಿ ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ: ಮಸಾಲಾ ಜಯರಾಂ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಏ, ಕರಿ ಟೋಪಿ ಎಂಎಲ್ಎ ಬಾ ಇಲ್ಲಿ ಎಂದು ಉದ್ಧಟತನದಿಂದ ಕೂಗಿದ್ದವರು ಜನವರಿಯಲ್ಲಿ ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ. ಆಗ ಎಷ್ಟು ಜನ ಕಾಂಗ್ರೆಸ್ ನವರು ಕರಿ ಟೋಪಿ, ಖಾಕಿ ಪ್ಯಾಂಟ್ ಸೇರಿ ಗಣವೇಷ ಹಾಕ್ತಾರೋ ಗೊತ್ತಿಲ್ಲ ಎಂದು ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಅಚ್ಚರಿಯ ಹೇಳಿಕೆ ನೀಡಿದರು.ತಾಲೂಕಿನ ಚಿಕ್ಕೋನಹಳ್ಳಿ ಬಳಿ ಇರುವ ತಮ್ಮ ಫಾರಂ ಹೌಸ್ ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಬಹಳ ಉದ್ಧಟತನದಿಂದ ಬಿಜೆಪಿ ಶಾಸಕ ಮುನಿರತ್ನಂ ವಿರುದ್ಧ ಮಾತನಾಡಿದ್ದಾರೆ ಅದು ಖಂಡನೀಯ. ಈಗ ನಡೆಯುತ್ತಿರುವ ಮುಖ್ಯಮಂತ್ರಿ ರೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಸಹ ಮಂಚೂಣಿಯಲ್ಲಿದ್ದಾರೆ. ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗದೇ ಹೋದರೆ ಅವರು ಬಿಜೆಪಿಯತ್ತ ಮುಖ ಮಾಡಿದರೂ ಆಶ್ಚರ್ಯವಿಲ್ಲ ಎಂದರು.ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ದೇಶದಲ್ಲಿರುವ ಹಲವಾರು ಜನನಾಯಕರು ಆರ್ ಎಸ್ ಎಸ್ ನ ಕಾರ್ಯಕ್ರಮವನ್ನು ಮತ್ತು ಅದರ ದೇಶ ಸೇವೆಯನ್ನು ಕಣ್ಣಾರೆ ಕಂಡಿದ್ದಾರೆ. ಎಷ್ಟೋ ಮುಖಂಡರು ಆರ್ ಎಸ್ ಎಸ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದಾರೆ. ಅವರಿಗೆ ಆರ್ ಎಸ್ ಎಸ್ ಎಂದರೆ ಏನು ಅಂತ ಗೊತ್ತಿದೆ. ಆದರೆ ಪ್ರಿಯಾಂಕ ಖರ್ಗೆಯಂತಹ ರಾಜಕಾರಣಿಗಳಿಗೆ ಆರ್ ಎಸ್ ಎಸ್ ನ್ನು ದೂಷಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಏನು ತಿಳಿಯದೇ ಬಾಯಿಗೆ ಬಂದಂತೆ ಮಾತನಾಡುವುದು ಪ್ರಿಯಾಂಕ ಖರ್ಗೆಗೆ ತರವಲ್ಲ. ಮುಂದಿನ ಚುನಾವಣೆಯಲ್ಲಿ , ಆರ್ ಎಸ್ ಎಸ್ ಅಂದರೆ ಏನು ಎಂಬುದನ್ನು ತೋರಿಸಲಿದೆ. ಸಂಘಟನೆ ಇರುವುದರಿಂದಲೇ ದೇಶದಲ್ಲಿ ಹಿಂದೂಗಳು ಇಂದಿಗೂ ಉಸಿರಾಡಿಕೊಂಡಿರುವುದು.ಇಲ್ಲದಿದ್ದರೆ ಹಿಂದೂಗಳ ಮಾರಣ ಹೋಮ ಆಗುತ್ತಿತ್ತು ಎಂದು ಮಸಾಲಾ ಜಯರಾಮ್ ಹೇಳಿದರು. ಪ್ರಿಯಾಂಕ ಖರ್ಗೆಯವರೇ ಒಂದೆರೆಡು ವರ್ಷ ನೀವು ಪಾಕಿಸ್ತಾನಕ್ಕೋ, ಅಥವಾ ಬಾಂಗ್ಲಾಕ್ಕೋ ಹೋಗಿ ವಾಸ ಮಾಡಿ ನೋಡಿ. ಅಲ್ಲಿ ಹಿಂದೂಗಳಿಗೆ ಆಗುತ್ತಿರುವ ಕಿರುಕುಳ ನೋಡಿ ಬನ್ನಿ. ಆಗ ತಿಳಿಯುತ್ತೆ ಭಾರತದಲ್ಲಿ ಹಿಂದುಗಳೆಷ್ಟು ಸುರಕ್ಷಿತರು ಎಂದು. ಭಾರತವೊಂದೇ ಹಿಂದೂಗಳಿಗಾಗಿ ಇರುವ ರಾಷ್ಟ್ರ. ನಾವಿದನ್ನು ಕಾಪಾಡಿಕೊಂಡರೆ ಮಾತ್ರ ನಮ್ಮ ಪೀಳಿಗೆ ಈ ದೇಶದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಮಂಡಲ ಬಿಜೆಪಿ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ, ಸದಸ್ಯ ಪ್ರಭಾಕರ್, ಚಿದಾನಂದ್, ಆಶಾ ರಾಜಶೇಖರ್, ಹಿರಿಯ ಮುಖಂಡರಾದ ಅರಳೀಕೆರೆ ಶಿವಯ್ಯ, ವಕೀಲ ಮುದ್ದೇಗೌಡ, ಕಡೇಹಳ್ಳಿ ಸಿದ್ದೇಗೌಡ, ಬಾಣಸಂದ್ರ ಸೋಮಶೇಖರ್, ಅನಿತಾ ನಂಜುಂಡಯ್ಯ. ಚೂಡಾರತ್ನ, ಶೋಭಾ, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಪ್ರಸಾದ್, ಸೋಮೇನಹಳ್ಳಿ ಜಗದೀಶ್, ಮಾವಿನಕೆರೆ ಮಂಜಣ್ಣ, ನವೀನ್ ಬಾಬು, ಅಶ್ವಿನ್, ಬುಗುಡನಹಳ್ಳಿ ಕೃಷ್ಣಮೂರ್ತಿ, ಆರ್ ಎಸ್ ಎಸ್ ನ ಮುಖಂಡರಾದ ವೇದಮೂರ್ತಿ, ಸಂದೀಪ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.