ಆರೋಗ್ಯ ಸೇವೆ ಎಂದರೆ ಕೇವಲ ಆಸ್ಪತ್ರೆ ನಿರ್ಮಿಸಿ ವೈದ್ಯಕೀಯ ಚಿಕಿತ್ಸೆ ನೀಡುವುದಷ್ಟೇ ಅಲ್ಲ; ರೋಗಿಗಳು ಸುಲಭವಾಗಿ ಆಸ್ಪತ್ರೆಗೆ ತಲುಪುವ ವ್ಯವಸ್ಥೆಯೂ ಅದರ ಭಾಗವಾಗಬೇಕು.

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಗೊಂಡಿರುವುದು ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಆಸ್ಪತ್ರೆಗೆ ತಲುಪಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಬಡ ರೋಗಿಗಳಿಗೆ ಹೊಸ ಸಂಕಷ್ಟ ತಂದಿದೆ.

ಬಸ್‌ ನಿಲ್ದಾಣದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಆಸ್ಪತ್ರೆಗೆ ನೇರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು, ಮಕ್ಕಳು ಹಾಗೂ ವೃದ್ಧರು ಬಸ್‌ನಿಂದ ಇಳಿದ ಬಳಿಕ ಆಟೋ ಸೇರಿದಂತೆ ಬಾಡಿಗೆ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಚಿಕಿತ್ಸೆ ಉಚಿತವಾಗಿ ದೊರೆಯುತ್ತಿದ್ದರೂ ಆಸ್ಪತ್ರೆಗೆ ಹೋಗಿ ಬರಲು ತಗಲುವ ಸಾರಿಗೆ ವೆಚ್ಚ ಬಡ ಕುಟುಂಬಗಳಿಗೆ ಹೆಚ್ಚುವರಿ ಹೊರೆಯಾಗಿದೆ.

ಸ್ವಂತ ವಾಹನ ಇದ್ದವರಿಗಷ್ಟೇ ಸುಲಭ:

ಸ್ವಂತ ವಾಹನ ಹೊಂದಿರುವವರಿಗೆ ಕಷ್ಟವಿಲ್ಲ. ಆದರೆ ದೂರದ ಗ್ರಾಮಗಳಿಂದ ಬಸ್‌ನಲ್ಲಿ ಬರುವವರು ಬಸ್‌ ನಿಲ್ದಾಣದಿಂದ ಆಸ್ಪತ್ರೆ ತಲುಪಲು ಮತ್ತೆ ಆಟೋ ಹಿಡಿಯಬೇಕಾಗಿದೆ. ಆಸ್ಪತ್ರೆಯ ಸಮಯಕ್ಕೆ ಅನುಗುಣವಾಗಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಕೆಲವು ನಿಗದಿತ ಬಸ್‌ ಟ್ರಿಪ್‌ ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಆಸ್ಪತ್ರೆಗೆ ಬಸ್‌ ಸೇವೆ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸುಮಾರು ಒಂದು ತಿಂಗಳಾದರೂ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಘಟಕ ಮುತ್ತುರಾಜ ಕಟ್ಟಿಮನಿ ಆರೋಪಿಸಿದ್ದಾರೆ.

ಚಿಕಿತ್ಸೆಯ ಜತೆಗೆ ಸಾರಿಗೆ ಬೇಕು: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾಗಿರುವುದು ಸ್ವಾಗತಾರ್ಹ. ಆದರೆ ಆರೋಗ್ಯ ಸೇವೆ ಎಂದರೆ ಕೇವಲ ಆಸ್ಪತ್ರೆ ನಿರ್ಮಿಸಿ ವೈದ್ಯಕೀಯ ಚಿಕಿತ್ಸೆ ನೀಡುವುದಷ್ಟೇ ಅಲ್ಲ; ರೋಗಿಗಳು ಸುಲಭವಾಗಿ ಆಸ್ಪತ್ರೆಗೆ ತಲುಪುವ ವ್ಯವಸ್ಥೆಯೂ ಅದರ ಭಾಗವಾಗಬೇಕು. ರೈಲ್ವೆ ನಿಲ್ದಾಣಕ್ಕೆ ಬಸ್‌ ಸೇವೆ ಕಲ್ಪಿಸಿರುವ ಮಾದರಿಯಲ್ಲಿ ತಾಯಿ–ಮಕ್ಕಳ ಆಸ್ಪತ್ರೆಗೆ ಕೂಡ ನಿಯಮಿತ ಬಸ್‌ ಸಂಚಾರ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರೋಗಿಗಳ ಅಳಲು: ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿರುವುದು ಸಂತೋಷದ ವಿಷಯ. ಆದರೆ ಬಸ್‌ ನಿಲ್ದಾಣದಿಂದ ಆಸ್ಪತ್ರೆಗೆ ಬರಲು ಪ್ರತಿ ಬಾರಿ ಆಟೋ ಹಿಡಿಯಬೇಕಾಗಿದೆ. ಪ್ರಯಾಣದ ಖರ್ಚೆ ಬಡ ಕುಟುಂಬಗಳಿಗೆ ಹೊರೆಯಾಗುತ್ತಿದೆ. ಆಸ್ಪತ್ರೆಯ ಸಮಯಕ್ಕೆ ಅನುಗುಣವಾಗಿ ಬಸ್‌ ಓಡಿಸಿದರೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾರಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆಸ್ಪತ್ರೆ ವರೆಗೆ ಬಸ್‌ ಸಂಚಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ಸಮಯ ನಿಗದಿಪಡಿಸಿ ಬಸ್‌ ಸೇವೆ ಆರಂಭಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.

ಕುಷ್ಟಗಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಪಟ್ಟಣದ ಬಸ್‌ ನಿಲ್ದಾಣದಿಂದ ದೂರುವಾಗುತ್ತಿದ್ದು, ಸಾರಿಗೆ ಇಲಾಖೆಯ ಅಧಿಕಾರಿ ಹಾಗೂ ಸ್ಥಳೀಯ ಶಾಸಕರು ಗಮನಹರಿಸಿ ಸಾರಿಗೆ ಸೌಲಭ್ಯ ಕಲ್ಪಿಸಿಕೊಟ್ಟರೆ ಬಡವರಿಗೆ ಅನೂಕೂಲಕರವಾಗಲಿದೆ ಎಂಧು ಕುಷ್ಟಗಿ ಇನ್ನರ್‌ವೀಲ್‌ ಕ್ಲಬ್‌ ಮಾಜಿ ಅಧ್ಯಕ್ಷೆ ಶಾರದಾ ಶೆಟ್ಟರ್‌ ತಿಳಿಸಿದ್ದಾರೆ.