ಅನಧಿಕೃತವಾಗಿ ಪ್ರಾಣಿವಧೆ, ಅನುಮತಿ ಇಲ್ಲದೆ ಮಾಂಸ ಸಾಗಾಣಿಕೆ ಇಲ್ಲ

| Published : Jun 06 2025, 01:44 AM IST / Updated: Jun 06 2025, 01:45 AM IST

ಅನಧಿಕೃತವಾಗಿ ಪ್ರಾಣಿವಧೆ, ಅನುಮತಿ ಇಲ್ಲದೆ ಮಾಂಸ ಸಾಗಾಣಿಕೆ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಮಹಾನಗರ, ಎಲ್ಲ ನಗರ ಪಟ್ಟಣಗಳ ಹಾಗೂ ಇತರ ಪ್ರದೇಶಗಳಲ್ಲಿ ಅಧಿನಿಯಮ ಉಲ್ಲಂಘನೆ ಆಗದಂತೆ ಮುಂಜಾಗ್ರತೆ ವಹಿಸಲು ಪ್ರತಿ ತಾಲೂಕಿಗೆ ಆಯಾ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿಗಳನ್ನು ರಚಿಸಿ, ಆದೇಶಿಸಲಾಗಿದೆ. ಪ್ರತಿ ಸಮಿತಿಯು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿನ ಪ್ರಾಣಿ ವಧಾಲಯಗಳ ಬಗ್ಗೆ ಮಾಹಿತಿ ಪಡೆದು, ಪರಿಶೀಲಿಸಬೇಕು.

ಧಾರವಾಡ: ಬರುವ ಜೂ. 7 ರಂದು ಬಕ್ರಿದ್ ಹಬ್ಬವನ್ನು ಶಾಂತಿಯುತವಾಗಿ ಸಾರ್ವಜನಿಕರು ಆಚರಿಸಬೇಕು. ಕರ್ನಾಟಕ ಜಾನುವಾರು ಹತ್ಯೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ಪ್ರಕಾರ ನೋಂದಾಯಿತ ವಧಾಗಾರದಲ್ಲಿ ಮಾತ್ರ ಅನುಮತಿ ಇರುವ ಪ್ರಾಣಿಗಳನ್ನು ವಧೆ ಮಾಡಲು ಅವಕಾಶವಿದೆ. ಅನಧಿಕೃತ ಪ್ರಾಣಿ ವಧೆ ಹಾಗೂ ಮಾಂಸ ಸಾಗಾಣಿಕೆ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 13 ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಮಾತ್ರ ವಧೆ ಮಾಡಲು ಅವಕಾಶವಿದೆ. ಎತ್ತು, ಆಕಳು ಮತ್ತು ಕರು ಇವುಗಳನ್ನು ವಧೆ ಮಾಡಲು ಅವಕಾಶವಿಲ್ಲ. ಜೂ. 7 ರಂದು ಜರಗುವ ಹಬ್ಬದ ಹಿನ್ನಲೆಯಲ್ಲಿ ಪ್ರಾಣಿ ವಧೆ ಕುರಿತು ಸರಿಯಾದ ಜಾಗೃತಿ ಮೂಡಿಸಬೇಕು. ಅವಳಿ ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದ ನಗರ ಪಟ್ಟಣಗಳಲ್ಲಿ ಅನಧಿಕೃತವಾಗಿ ಯಾವುದೇ ವಧಾಲಯ ತೆರೆಯದಂತೆ ಮುಂಜಾಗ್ರತೆ ವಹಿಸಬೇಕು ಎಂಬ ಸಲಹೆ ನೀಡಿದರು.

ಟಾಸ್ಕ್ ಪೋರ್ಸ್ ರಚಿಸಿ ಆದೇಶ: ಜಿಲ್ಲೆಯ ಮಹಾನಗರ, ಎಲ್ಲ ನಗರ ಪಟ್ಟಣಗಳ ಹಾಗೂ ಇತರ ಪ್ರದೇಶಗಳಲ್ಲಿ ಅಧಿನಿಯಮ ಉಲ್ಲಂಘನೆ ಆಗದಂತೆ ಮುಂಜಾಗ್ರತೆ ವಹಿಸಲು ಪ್ರತಿ ತಾಲೂಕಿಗೆ ಆಯಾ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿಗಳನ್ನು ರಚಿಸಿ, ಆದೇಶಿಸಲಾಗಿದೆ. ಪ್ರತಿ ಸಮಿತಿಯು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿನ ಪ್ರಾಣಿ ವಧಾಲಯಗಳ ಬಗ್ಗೆ ಮಾಹಿತಿ ಪಡೆದು, ಪರಿಶೀಲಿಸಬೇಕು. ನೋಂದಣಿಯಾಗದೇ ಅನಧಿಕೃತವಾಗಿ ಪ್ರಾಣಿ ವಧಾಲಯ ಆರಂಭಿಸಿದಲ್ಲಿ ತಕ್ಷಣ ಸೀಜ್ ಮಾಡಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಇನ್ನು, ಬಿಡಾಡಿ ದನಗಳು ಇದ್ದಲ್ಲಿ, ಅವುಗಳನ್ನು ರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಬೇಕು. ಈ ಕುರಿತು ಸಂಬಂಧಿಸಿದವರು ಅಗತ್ಯ ದಾಖಲೆಗಳನ್ನು, ಫೋಟೊ, ವಿಡಿಯೋಗಳನ್ನು ಮಾಡಬೇಕು. ಮಾಲೀಕರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳದೇ ಬೀದಿಗೆ ಬಿಟ್ಟಿದ್ದಲ್ಲಿ ಅಂತಹ ಜಾನುವಾರುಗಳನ್ನು ವಶಕ್ಕೆ ಪಡೆದು, ಗೋಶಾಲೆಗೆ ಕಳುಹಿಸಬೇಕು ಮತ್ತು ಅಂತಹ ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಲು ಸಹ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಒಂದು ಸರ್ಕಾರಿ ಹಾಗೂ ಹತ್ತು ಖಾಸಗಿ ಗೋಶಾಲೆಗಳಿದ್ದು, ರಕ್ಷಿಸಿದ ಜಾನುವಾರುಗಳನ್ನು ಕಳುಹಿಸಬಹುದು. ಮಹಾನಗರ ಪಾಲಿಕೆ ಅಥವಾ ನಗರ ಸ್ಥಳೀಯ ಸಂಸ್ಥೆಗಳು ಜಾನುವಾರುಗಳ ಸಾಗಾಣಿಕೆಗೆ ವಾಹನ ವ್ಯವಸ್ಥೆಯನ್ನು ಮಾಡಬೇಕು. ಪೊಲೀಸ್ ಅಧಿಕಾರಿಗಳು ತಪ್ಪಿಸ್ಥರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಸೂಕ್ತ ಕ್ರಮಕೈಗೊಳ್ಳಬೇಕು. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮವಹಿಸಬೇಕು. ಈ ಎಲ್ಲ ಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳಲು ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರಾಗಿರುವ ತಹಸೀಲ್ದಾರರು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿದರು.

ಮಹಾನಗರ ಹಾಗೂ ನಗರ ಪಟ್ಟಣಗಳ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಲೀಕರಿದ್ದು ಬಿಟ್ಟಿರುವ ಹಾಗೂ ಮಾಲೀಕರಿಲ್ಲದ ಜಾನುವಾರುಗಳು ಕಂಡು ಬಂದಲ್ಲಿ ಅವುಗಳನ್ನು ಟೊಯಿಂಗ್ ಮಾಡುವ ಮೂಲಕ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಬೇಕು. ಈ ಕಾರ್ಯವನ್ನು ಶೀಘ್ರದಲ್ಲಿ ಆರಂಭಿಸಬೇಕೆಂದರು.

ಸಭೆಯಲ್ಲಿ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಹಾಗೂ ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾಂವಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಲಿಂಗರಾಜ ಬಿ.ಎಸ್, ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಅಜೀಜ್ ದೇಸಾಯಿ, ಎಸಿಪಿ ಪ್ರಶಾಂತ ಸಿದ್ದನಗೌಡರ, ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಮತ್ತಿತರರು ಇದ್ದರು.