ಸಾರಾಂಶ
ಕೆಆರ್‌ಎಸ್‌ನಿಂದ ಮೊದಲು ಕೊನೆ ಭಾಗಕ್ಕೇ ಪೊಲೀಸರ ರಕ್ಷಣೆಯೊಂದಿಗೆ ನೀರು ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿಳಿಸಿದ್ದರು. ಆದರೂ ಸಹ ಕೊನೆ ಭಾಗಕ್ಕೆ 25 ದಿನಗಳು ಕಳೆದರು ನೀರು ಬಂದಿಲ್ಲ.
ಮಂಡ್ಯ : ಕೃಷ್ಣರಾಜಸಾಗರ ಜಲಾಶಯದಿಂದ ಜು.10ರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು, 25 ದಿನಗಳು ಕಳೆದರು ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ಇದುವರೆಗೂ ನೀರು ತಲುಪಿಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ರೈತರು ಬರದಿಂದ ತತ್ತರಿಸಿದ್ದರು. ಯಾವುದೇ ಬೆಳೆಗಳು ಕೈಸೆರಿಲ್ಲ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆ ಆಗಿಲ್ಲ. ಆದರೆ, ಕೆಆರ್‌ಎಸ್ ಭರ್ತಿಯಾಗಿದೆ. ತಮಿಳುನಾಡಿಗೆ ಸಾಕಷ್ಟು ನೀರು ಹರಿದಿದೆ. ಆದರೆ, ಕಡೆ ಭಾಗಕ್ಕೆ ನೀರು ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿ ರೈತರನ್ನು ಸಂಕಷ್ಠಕ್ಕೆ ದೂಡುತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.
ಕೆಆರ್‌ಎಸ್‌ನಿಂದ ಮೊದಲು ಕೊನೆ ಭಾಗಕ್ಕೇ ಪೊಲೀಸರ ರಕ್ಷಣೆಯೊಂದಿಗೆ ನೀರು ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿಳಿಸಿದ್ದರು. ಆದರೂ ಸಹ ಕೊನೆ ಭಾಗಕ್ಕೆ 25 ದಿನಗಳು ಕಳೆದರು ನೀರು ಬಂದಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದ್ದಾರೆ.
ನೀರು ಕಡೇ ಭಾಗಕ್ಕೆ ತಲುಪದೆ ಇರುವುದರಿಂದ ಭೂಮಿ ಹದಗೊಳಿಸುವಿಕೆ, ಒಟ್ಟಲು ಬಿಡಲು ತೊಂದರೆ ಆಗಿದೆ. ನೀರಿನ ಅವಶ್ಯಕತೆ ಇದ್ದು ಕೂಡಲೇ ನೀರು ಹರಿಸಬೇಕು ಎಂದರು.
ಜಲಾಶಯದ ಭರ್ತಿ ಆಗಿದ್ದರೂ ಕೆಆರ್‌ಎಸ್ ಅಣೆಕಟ್ಟಿನಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವುದಾಗಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಪ್ರಕಟಣೆ ಹೊರಡಿಸಿ ಸರ್ಕಾರಕ್ಕೂ ಇರಿಸು ಮುರಿಸು ಮಾಡುತಿದ್ದು ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು.
ಕೇರಳ ಮತ್ತು ಕೊಡಗಿನಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಕನ್ನಂಬಾಡಿಗೆ 1 ಲಕ್ಷಕ್ಕೂ ಅಧಿಕ ನೀರು ಹರಿದು ಬರುತಿದ್ದು ಅಣೆಕಟ್ಟೆ ಭರ್ತಿಯಾಗಿ ಹಲವು ದಿನಗಳು ಕಳೆದರು ಸಹ ಕೆರೆ-ಕಟ್ಟೆಗಳೂ ಭರ್ತಿಯಾಗಿಲ್ಲ. ಮೊದಲು ಕಾಲುವೆಗೆ ನೀರು ಹರಿಸಿ, ಕೆರೆಕಟ್ಟೆಗಳನ್ನು ತುಂಬಿಸಲಿ. ನಂತರ ಕಟ್ಟುಪದ್ಧತಿ ಬಗ್ಗೆ ಮಾತನಾಡಲಿ. ಬೇಜವಾಬ್ದಾರಿ ಆಗಿ ಹೇಳಿರುವ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರನ್ನು ಅಮಾನತ್ತುಪಡಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮಳೆ ಇಲ್ಲದೇ ಕನ್ನಂಬಾಡಿಯಲ್ಲೂ ನೀರಿಲ್ಲದೇ ಬರ ಆವರಿಸಿತ್ತು ಈ ಬಾರಿ ವರುಣನ ಕೃಪೆಯಿಂದ ಕೆಆರ್‌ಎಸ್ ಭರ್ತಿಯಾಗಿದ್ದು ಒಳ ಹರಿವು ದಿನ ಹೆಚ್ಚಳವಾಗುತಿದ್ದರೂ ಸಹ ನದಿಗೆ ನೀರು ಬಿಡುತ್ತಿರುವ ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.