ನೆರೆಯ ಕೇರಳ ರಾಜ್ಯದಿಂದ ಪ್ರವಾಸಿಗಳನ್ನು ಜಿಲ್ಲೆಗೆ ಕರೆದುಕೊಂಡು ಬರುತ್ತಿರುವ ನೂರಾರು ಸಂಖ್ಯೆಯ ಖಾಸಗಿ ಸಂಸ್ಥೆಗಳ ಬಸ್ ಗಳು ಸಂಚರಿಸುವ ವೇಳೆ ಭಾರಿ ಪ್ರಮಾಣದ ಮ್ಯೂಸಿಕ್ ಡಿಜೆ ಸೌಂಡ್ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಬಗ್ಗೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಕುಶಾಲನಗರ ಗಡಿಭಾಗದಲ್ಲಿ ರಾತ್ರಿ ಕೆಲವು ಬಸ್ ಗಳನ್ನು ತಡೆದು ಪ್ರತಿಭಟಿಸಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ನಡೆದಿದೆ.
ಕುಶಾಲನಗರ ; ನೆರೆಯ ಕೇರಳ ರಾಜ್ಯದಿಂದ ಪ್ರವಾಸಿಗಳನ್ನು ಜಿಲ್ಲೆಗೆ ಕರೆದುಕೊಂಡು ಬರುತ್ತಿರುವ ನೂರಾರು ಸಂಖ್ಯೆಯ ಖಾಸಗಿ ಸಂಸ್ಥೆಗಳ ಬಸ್ ಗಳು ಸಂಚರಿಸುವ ವೇಳೆ ಭಾರಿ ಪ್ರಮಾಣದ ಮ್ಯೂಸಿಕ್ ಡಿಜೆ ಸೌಂಡ್ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಬಗ್ಗೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಕುಶಾಲನಗರ ಗಡಿಭಾಗದಲ್ಲಿ ರಾತ್ರಿ ಕೆಲವು ಬಸ್ ಗಳನ್ನು ತಡೆದು ಪ್ರತಿಭಟಿಸಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ನಡೆದಿದೆ.
ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಯ ಗೋಣಿಕೊಪ್ಪ ಮಡಿಕೇರಿ ಕುಶಾಲನಗರ, ಕೊಪ್ಪ ಆವರ್ತಿ ಭಾಗಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಸ್ ಗಳು ದಿನನಿತ್ಯ 100ಕ್ಕೂ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದು ಈ ವಾಹನಗಳು ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವ ಸಂದರ್ಭ ಅಧಿಕ ಶಬ್ದದೊಂದಿಗೆ ವಾಹನಗಳಲ್ಲಿ ಡಿಜೆ ಸಂಗೀತ ಬಳಸುತ್ತಿರುವುದು ಇದರಿಂದ ಈ ಭಾಗದ ನಾಗರಿಕರಿಗೆ ಸಮಸ್ಯೆ ಉಂಟಾಗಿದೆ ಎಂದು ದೂರಿದ್ದಾರೆ.ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಗಳ ಕಾಲ ನಿಯಮಬಾಹಿರವಾಗಿ ಈ ಬಸ್ಸುಗಳಲ್ಲಿ ಡಿಜೆ ಅಳವಡಿಸುವುದರೊಂದಿಗೆ ಮಕ್ಕಳು ವೃದ್ದರಿಗೆ ಹಾಗೂ ರಸ್ತೆ ಬದಿಯಲ್ಲಿರುವ ಆಸ್ಪತ್ರೆಗಳ ರೋಗಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಬಸ್ಸುಗಳಲ್ಲಿ ಮಿತಿಮೀರಿದ ಬಣ್ಣದ ಲೈಟ್ಗಳನ್ನು ಅಳವಡಿಸುತ್ತಿದ್ದು ರಸ್ತೆಯಲ್ಲಿ ತೆರಳುವ ದ್ವಿಚಕ್ರ ವಾಹನಗಳ ಸವಾರರಿಗೆ ಇದರಿಂದ ಚಾಲನೆಗೆ ಆಡಚಣೆ ಮೂಲಕ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ ಎಂದು ಸ್ಥಳೀಯ ಸಮಾಜ ಸೇವಕರಾದ ಅರುಣ್ ಮತ್ತು ದೇವರಾಜ್ ದೂರಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರದ ಪ್ರವಾಸಿ ಕೇಂದ್ರಗಳಲ್ಲಿ ತೆರಳಿದ ನಂತರ ಕೊಪ್ಪ ಮಾರ್ಗವಾಗಿ ಆವರ್ತಿ ಗ್ರಾಮದಲ್ಲಿರುವ ಡಿ ಜೆ ಸಂಗೀತ ಕೇಂದ್ರವೊಂದಕ್ಕೆ ಸಂಜೆ 6 ಗಂಟೆಯಿಂದ ಸುಮಾರು ನೂರಕ್ಕೂ ಅಧಿಕ ಬಸ್ಸುಗಳು ಪ್ರವಾಸಿಗರನ್ನು ಒಯ್ಯುತ್ತಿದ್ದು ತಡರಾತ್ರಿ ತನಕ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಕುಶಾಲನಗರ ಸಮೀಪದ ಆವರ್ತಿ ಗ್ರಾಮದ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಭಾರಿ ಪ್ರಮಾಣದ ಸದ್ದು ಗದ್ದಲಗಳೊಂದಿಗೆ ಡಿಜೆ ಸಂಗೀತ ಹಾಕುತ್ತಿದ್ದು ಸುತ್ತಮುತ್ತಲ ನಾಗರಿಕರು ಇದರಿಂದ ಹೈರಾಣ ಆಗಿ ಮನೆಗಳನ್ನು ತ್ಯಜಿಸುವ ಪರಿಸ್ಥಿತಿ ಎದುರಾಗಿದೆ.ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಠಾಣೆ ಪೊಲೀಸರಿಗೆ ಹಲವು ಸಾರಿ ದೂರಿದ್ದು ಪ್ರಯೋಜನವಾಗುತ್ತಿಲ್ಲ ಎಂದು ಈ ಭಾಗದ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಇಂತಹ ವಾಹನಗಳಿಗೆ ತಡೆಯೊಡ್ಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಶುಕ್ರವಾರ ಸಂಜೆ ಸ್ಥಳೀಯ ನಾಗರೀಕರ ಆಕ್ರೋಶದ ಮಾಹಿತಿ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿದ ಕೊಡಗು ಜಿಲ್ಲಾ ಪೊಲೀಸ್ ರಸ್ತೆ ನಿಯಮ ಉಲ್ಲಂಘಿಸಿ ಡಿಜೆ ಸಂಗೀತ ಹಾಕಿಕೊಂಡು ತೆರಳುತ್ತಿದ್ದ ಮೂರು ಬಸ್ಗಳಿಗೆ ಕುಶಾಲನಗರ ಸಂಚಾರಿ ಪೊಲೀಸರು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾಹಿತಿ ನೀಡಿದ್ದಾರೆ. ಈ ನಡುವೆ ಮಡಿಕೇರಿ ಸಾರಿಗೆ ಇಲಾಖೆ ಅಧಿಕಾರಿಗಳು ಜಿಲ್ಲೆಯ ಗೋಣಿಕೊಪ್ಪ ಹಾರಂಗಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಅಧಿಕ ಪ್ರಮಾಣದ ಶಬ್ದ ಮಾಡುವುದರ ಜೊತೆಗೆ ಡಿಜೆ ಹಾಕಿ ತೆರಳುತ್ತಿದ್ದ ಕೇರಳದ ಬಸ್ ಗಳಿಗೆ ದಂಡ ವಿಧಿಸಿ ಕ್ರಮ ಕೈಗೊಂಡಿರುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳಾದ ಪ್ರದೀಪ್ ಮತ್ತು ಮೋಹನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ನಿಯಮಾನುಸಾರ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆಯ ಮೂಲಕ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕನ್ನಡಪರ ಸಂಘಟನೆಗಳ ಕೊಡಗು ಜಿಲ್ಲಾಧ್ಯಕ್ಷರಾದ ದೀಪಕ್ ಕನ್ನಡಿಗ, ದಿನೇಶ್ ಕುಮಾರ್ ಮತ್ತು ಫ್ರಾನ್ಸಿಸ್ ಡಿಸೋಜಾ ಅವರು ಎಚ್ಚರಿಕೆ ನೀಡಿದ್ದಾರೆ.