ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿಯಲ್ಲಿ ಎಸ್ಸಿ-ಎಸ್ಟಿ ಅಲೆಮಾರಿಗಳ ಕುಂದು ಕೊರತೆ ಸಭೆ ಸೋಮವಾರ ಜರುಗಿತು.ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೌಲಭ್ಯ ಕಲ್ಪಿಸಲು ಸೂಚಿಸಿದರು.
ಮಾಚಿಹಳ್ಳಿ ಕೊರಚಹಟ್ಟಿಯಲ್ಲಿ ಹೈಮಾಸ್ಟ್ ಲೈಟ್ ಅಗತ್ಯತೆ, ನಿವೇಶನ ರಹಿತರಿಗೆ ನಿವೇಶನ ಕೊಡುವುದು, ಸ್ಮಶಾನ ಭೂಮಿ ಹದ್ದುಬಸ್ತು ಮಾಡಿಕೊಡುವುದು, ಕಂದಾಯ ಗ್ರಾಮ ಆಗುವುದು, ಶಾಲೆಗೆ ಕುಡಿಯುವ ನೀರಿನ ಸೌಲಭ್ಯಸಾರಿಗೆ ವ್ಯವಸ್ಥೆ ಹೀಗೆ ಸಮಸ್ಯೆಗಳ ಸರಮಾಲೆಯನ್ನು ನಿಗಮದ ಅಧ್ಯಕ್ಷರ ಮುಂದೆ ಸಾರ್ವಜನಿಕರು ಇಟ್ಟರು.ತಹಶೀಲ್ದಾರ ಬಿ.ವಿ. ಗಿರೀಶಬಾಬು ಈಗಾಗಲೇ ನಿವೇಶನ ರಹಿತರಿಗೆ ಜಮೀನು ಕಾಯ್ದಿರಿಸಲಾಗಿದೆ. ಇನ್ನೂ 4 ತಿಂಗಳಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಪಲ್ಲವಿ ಮಾತನಾಡಿ, ಇಲ್ಲಿಯ ಮಹಿಳೆಯರಿಗೆ ಜಾಗೃತಿ ಇಲ್ಲ, ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ಇಲ್ಲ. ನಿಗಮದಿಂದ ಮಾಹಿತಿ ನೀಡಿ ಸೌಲಭ್ಯ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.ಎಸ್ಸಿ, ಎಸ್ಟಿ ಅಲೆಮಾರಿ ಆಯೋಗ ಶೀಘ್ರ ಸ್ಥಾಪನೆ: ಪಲ್ಲವಿರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಆಯೋಗ ಶೀಘ್ರ ಸ್ಛಾಪನೆ ಆಗಲಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದ್ದಾರೆ.ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿಯಲ್ಲಿ ಅಲೆಮಾರಿ ಸಮುದಾಯದವರ ಕುಂದುಕೊರತೆ ಸಭೆಯ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಅಲೆಮಾರಿ ಸಮುದಾಯದವರ ಅನೇಕ ಸಮಸ್ಯೆಗಳು ಇದ್ದು, ಆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಆಯೋಗ ಅಗತ್ಯ ಎಂಬ ನಿರ್ಣಯವನ್ನು ನಮ್ಮ ನಿಗಮದ ಸಭೆಯಲ್ಲಿ ಕೈಗೊಂಡು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ, ಸಿಎಂ ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ, ಶೀಘ್ರ ಎಸ್ಸಿ, ಎಸ್ಟಿ ಅಲೆಮಾರಿ ಆಯೋಗ ಶೀಘ್ರ ಸ್ಥಾಪನೆ ಆಗುವುದು ಖಂಡಿತ ಎಂದು ಹೇಳಿದರು.ಎಸ್ಸಿ, ಎಸ್ಟಿ ಅಲೆಮಾರಿ ನಿಗಮಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ₹100 ಕೋಟಿ 30 ಲಕ್ಷ ಅನುದಾನ ನಿಗದಿ ಮಾಡಿದ್ದಾರೆ. ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತದೆ. ಆ ಹಣದಲ್ಲಿ ರಾಜ್ಯದಲ್ಲಿರುವ ಅಲೆಮಾರಿ ಸಮುದಾಯಕ್ಕೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ನಾನು ಅಧ್ಯಕ್ಷಳಾದ ನಂತರ ರಾಜ್ಯದಲ್ಲಿ 226 ತಾಲೂಕುಗಳಲ್ಲಿ ಪ್ರವಾಸ ಮಾಡಿ 15 ಅಲೆಮಾರಿ ಜೋಪಡಿಗಳಲ್ಲಿ ವಾಸ್ತವ್ಯ ಮಾಡಿ ಅವರ ಸಮಸ್ಯೆ ಆಲಿಸಿದ್ದೇನೆ ಎಂದರು.ನಾನು ನಿಗಮದ ಅಧಿಕಾರ ಸ್ವೀಕರಿಸಿದಾಗ ಕೇವಲ 900 ಅಲೆಮಾರಿ ಫಲಾನುಭವಿಗಳಿಗೆ ನೀಡುವಷ್ಟು ಅನುದಾನವಿತ್ತು. ಈಗ 1600 ಫಲಾನುಭವಿಗಳಿಗೆ ನೀಡುವಷ್ಟು ಅನುದಾನ ಬಂದಿದೆ. ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ 100 ಇದ್ದ ಪಲಾನುಭವಿಗಳು 400 ಆಗಿದ್ದಾರೆ ಎಂದು ತಿಳಿಸಿದರು. ಅಲೆಮಾರಿ ಸಮುದಾಯದಲ್ಲಿ ಜಾತಿ ಪ್ರಮಾಣ ಪತ್ರದ ಸಮಸ್ಯೆ ಸಾಕಷ್ಟು ಇದ್ದು, ಅನೇಕರು ಸುಳ್ಳು ಪ್ರಮಾಣ ಪತ್ರ ತೆಗೆದುಕೊಂಡಿದ್ದಾರೆ. ಇಂತಹ ಸಮಸ್ಯೆಯಿಂದ ಕಳೆದ 13 ವರ್ಷದಿಂದ ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ವಿತರಣೆ ಯಾಗಿಲ್ಲ. ಆದ್ದರಿಂದ ಇವರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅವರು ಮಾಹಿತಿ ನೀಡಿದರು.ಈ ಸಂದರ್ಭ ತಹಶೀಲ್ಧಾರ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಎ. ಕಾಳೆ, ಸಹಾಯಕ ನಿರ್ದೇಶಕ ಎಸ್.ಗಂಗಪ್ಪ, ಶಿಶುಯೋಜನಾಭಿವೃದ್ಧಿ ಅಧಿಕಾರಿ ಅಶೋಕ, ಎಸ್ಸಿ-ಎಸ್ಟಿ ಅಲೆಮಾರಿ ಸಂಘಟನೆಯ ಜಂಟಿ ಕಾರ್ಯದರ್ಶಿ ಆನಂದಕುಮಾರ, ಪಿಎಸ್‌ಐ ಶುಂಭುಲಿಂಗ ಹಿರೇಮಠ ಉಪಸ್ಥಿತರಿದ್ದರು.