ಸಾರಾಂಶ
ಹೊಸಪೇಟೆ: ಪರಿಶಿಷ್ಟ ಜಾತಿ ಒಳ ಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಒದಗಿಸುವ ಖಚಿತ ಭರವಸೆ ಕಾಂಗ್ರೆಸ್ ಹೈಕಮಾಂಡ್‌ನಿಂದ ದೊರೆಯುವವರೆಗೆ ದಿಲ್ಲಿಯಲ್ಲೇ ನಿರಂತರ ಹೋರಾಟ ನಡೆಸಲು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ತೀರ್ಮಾನಿಸಿದೆ.
ಕರ್ನಾಟಕದ ಅಲೆಮಾರಿ ಸಮುದಾಯಗಳಿಂದ ‘ದಿಲ್ಲಿ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಸುದೀರ್ಘ ಮಾತುಕತೆಯಲ್ಲಿ, ಸಮಸ್ಯೆ ಬಗೆಹರಿಸುವ ಪ್ರಕ್ರಿಯೆ ಕುರಿತು ಕೈ ನಾಯಕರು ಸಮಯ ಕೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಡೆಯಿಂದ ಖಚಿತ ಅಭಿಪ್ರಾಯ ಹೊರಬೀಳುವ ತನಕ ದಿಲ್ಲಿ ಬಿಡದಿರಲು ಸಮಿತಿ ನಿರ್ಧರಿಸಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.ಒಳಮೀಸಲಾತಿ ಹಂಚಿಕೆಯಲ್ಲಿ ಕರ್ನಾಟಕದ ಅಲೆಮಾರಿ ಸಮುದಾಯಕ್ಕೆ ಆಗಿರುವ ಘೋರ ಅನ್ಯಾಯವನ್ನು ಪ್ರತಿಭಟಿಸಿ ಹಾಗೂ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲು ಕರ್ನಾಟಕದಿಂದ ಬಂದ ನೂರಾರು ಜನ ಅಲೆಮಾರಿ ಬಂಧುಗಳು, ಕಲಾವಿದರು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಆಕ್ರೋಶಭರಿತ ಪ್ರತಿಭಟನೆ ನಡೆಸಿದರು.
ರಾಮ, ಲಕ್ಷ್ಮಣ, ರಾವಣ, ದುರ್ಗಾ, ಆಂಜನೇಯ ಮುಂತಾದ ವೇಷ ತೊಟ್ಟ ಕಲಾವಿದರು ತಮ್ಮ ಕಲಾ ರೂಪಗಳಲ್ಲೇ ತಮ್ಮ ನೋವನ್ನು ಹೊರಹಾಕಿದರು. ತಮಗೆ ತಾವೇ ಚಾಟಿಯಲ್ಲಿ ಬಿಗಿದುಕೊಳ್ಳುತ್ತಿದ್ದರೂ ಇಡೀ ಸಮಾಜಕ್ಕೆ ಆ ಏಟು ಬೀಳುವಂತೆ ಗೋಚರಿಸುತ್ತಿತ್ತು. ಬೆಳಗ್ಗೆ 10ರಿಂದ 12.30ರ ತನಕ ಪ್ರತಿಭಟನೆ ನಡೆಸಿ ನಂತರ ಕಾಂಗ್ರೆಸ್ ಮುಖಂಡರನ್ನು ಕಾಣಲು ಕಾಂಗ್ರೆಸ್ ಕಚೇರಿಯ ಕಡೆ ಪ್ರತಿಭಟನಾಕಾರರು ಹೆಜ್ಜೆಹಾಕಿದರು. ಮಧ್ಯಪ್ರವೇಶಿಸಿದ ದಿಲ್ಲಿ ಪೊಲೀಸರು, ಬಿಗಿಬಂದೋಬಸ್ತಿನ ಕಾರಣ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಹೋಗಲು ಅವಕಾಶವಿಲ್ಲ, ನಾವೇ ವಾಹನಗಳಲ್ಲಿ ಕರೆದೊಯ್ಯುತ್ತೇವೆ ಎಂದು ಬಸ್‌ಗಳ ವ್ಯವಸ್ಥೆ ಮಾಡಿದರು.ಕಾಂಗ್ರೆಸ್ ಕಚೇರಿಯ ಎದುರು ಅಲೆಮಾರಿ ಸಮುದಾಯದ ಆಕ್ರೋಶ ವ್ಯಕ್ತಗೊಳ್ಳುತ್ತಿತ್ತು. ಎಐಸಿಸಿ ಮುಖಂಡರು ಎಲ್ಲರನ್ನೂ ಒಳಗೆ ಬಿಡಿ ಎಂದು ಹೇಳಿದರೂ ದಿಲ್ಲಿ ಪೊಲೀಸರು ಅವಕಾಶ ಕೊಡಲಿಲ್ಲ. ಏನಾದರೂ ಅಚಾತುರ್ಯ ನಡೆದರೆ ನಾವು ಹೊಣೆಯಾಗಬೇಕಾಗುತ್ತದೆ. ಪ್ರತಿನಿಧಿಗಳನ್ನು ಮಾತ್ರ ಬಿಡಲು ಸಾಧ್ಯ ಎಂದು ಬಿಡಲಿಲ್ಲ. ನಿಯೋಗ ಮಾತ್ರವೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತನಾಡಲು ಸಾಧ್ಯವಾಯಿತು ಎಂದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಲೆಮಾರಿ ಮುಖಂಡರ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪರವಾಗಿ ಮಾತುಕತೆಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್, ನಿಯೋಗದ ಮಾತುಗಳನ್ನು ಆಲಿಸಿದರು. ಕರ್ನಾಟಕದಿಂದ ಇಷ್ಟು ದೂರ ಬರುವುದಕ್ಕೆ ಬಹಳ ಕಷ್ಟಗಳನ್ನು ತೆಗೆದುಕೊಳ್ಳಬೇಕಾಯಿತು. ಅದಕ್ಕಾಗಿ ವಿಷಾದಿಸುವೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಲ್ಲಿದ್ದಾರೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿದ್ದಾರೆ. ದುರ್ಗಾ ಪೂಜೆ ಇರುವುದರಿಂದ ಎಲ್ಲ ಮುಖಂಡರು ಅವರವರ ಕ್ಷೇತ್ರಗಳಲ್ಲಿದ್ದಾರೆ. ನಮ್ಮ ಕಡೆಯಿಂದ ಇಂದೇ ಖಚಿತ ತೀರ್ಮಾನ ಹೇಳಲು ಕಷ್ಟವಾಗುತ್ತಿದೆ. ಆದರೆ ನಿಮ್ಮ ಜತೆ ನಾವಿದ್ದೇವೆ ಎಂದರು.ಕಾಂಗ್ರೆಸ್ಸಿನೊಂದಿಗಿನ ಮಾತುಕತೆ ನಂತರ ಅಂಬೇಡ್ಕರ್ ಭವನದಲ್ಲಿ ಎಲ್ಲ ಅಲೆಮಾರಿ ಮುಖಂಡರು, ಸದಸ್ಯರ ಸುದೀರ್ಘ ಸಭೆ ನಡೆಯಿತು. ಮೊದಲ ಬಾರಿಗೆ ಎಚ್ಚೆತ್ತಿರುವ ಅಲೆಮಾರಿ ಸಮುದಾಯದ 59 ಜಾತಿಗಳು ಇಂದು ಒಂದು ಕುಟುಂಬವಾಗಿ ಒಂದಾಗಿದ್ದೇವೆ. ದೆಹಲಿಗೂ ಬಂದು ನಮ್ಮ ಕೂಗನ್ನು ಪ್ರಬಲವಾಗಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಒಗ್ಗಟ್ಟನ್ನು ಮತ್ತು ನ್ಯಾಯಕ್ಕಾಗಿನ ನಮ್ಮ ಹೋರಾಟವನ್ನು ಕೊನೆ ಮುಟ್ಟುವ ತನಕ ಮುಂದುವರಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.
ಮುಖಂಡರಾದ ಬಾಲ ಗುರುಮೂರ್ತಿ, ಈ.ಎಸ್. ಪ್ರಭಾಕರ್, ನೂರ್ ಶ್ರೀಧರ್, ಶೇಷಪ್ಪ, ಸಣ್ಣ ಮಾರೆಪ್ಪ, ಅಂಬಣ್ಣ, ಬಸವರಾಜ, ಮಂಜುನಾಥ, ಚಿನ್ನು, ರಾಜೇಂದ್ರ ಸೇರಿದಂತೆ ಅಲೆಮಾರಿ ಕಲಾವಿದರು, ಹೋರಾಟಗಾರರು ಇದ್ದರು.