ಕನ್ನಡಪ್ರಭ ವಾರ್ತೆ ಪಾವಗಡ
ಯಾವ ನಿಯಮಗಳನ್ನು ಪಾಲಿಸದೆ ನೊಟೀಸ್ ಸಹ ನೀಡದೆ ನಿಯಮ ಬಾಹಿರವಾಗಿ ಅರ್ಹ ಷೇರುದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಡಿರುವುದನ್ನು ವಿರೋಧಿಸಿ ಅನರ್ಹಗೊಂಡ ನೂರಾರು ಮಂದಿ ಮತದಾರರು ನಾಮಪತ್ರ ಸಲ್ಲಿಕೆಗೆ ಅಡ್ಡಿಪಡಿಸಿದ ಘಟನೆ ಗುರುವಾರ ತಾಲೂಕಿನ ಕೋಟಗುಡ್ಡ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದಲ್ಲಿ ನಡೆದಿದೆ. ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರ ನೇಮಕಕ್ಕೆ ಚುನಾವಣೆ ಘೋಷಣೆ ಆಗಿದ್ದು, 26ಕ್ಕೆ ನಾಮಪತ್ರ ಸಲ್ಲಿಕೆಗೆ ಗಡುವು ವಿಧಿಸಲಾಗಿತ್ತು. ಈ ಸಂಬಂಧ ಕೆಲ ಸದಸ್ಯರು ದಾಖಲಾತಿ ಸಮೇತ ನಾಮಪತ್ರ ಸಲ್ಲಿಕೆಗೆ ಮುಂದಾದ ವೇಳೆ, ಮತದಾರರ ಪಟ್ಡಿಯಿಂದ ಕೈಬಿಟ್ಟ ನೂರಾರು ಮಂದಿ ಷೇರುದಾರರು,ನಾಮಪತ್ರ ಸ್ವೀಕರಿಸದಂತೆ ಚುನಾವಣಾಧಿಕಾರಿಗೆ ಅಡ್ಡಿ ಪಡಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಬೆಂಬಲಿತ ಹಾಗೂ ಜೆಡಿಎಸ್ ಬೆಂಬಲಿತ ಷೇರುದಾರ ಮತದಾರ ಮಧ್ಯೆ ದೊಡ್ಡ ಮಟ್ಟದ ಗಲಾಟೆ ಹಾಗೂ ಗುಂಪು ಘರ್ಷಣೆ ನಡಯಿತು. ಕೂಡಲೇ ತಾಲೂಕಿನ ವೈ.ಎನ್.ಹೊಸಕೋಟೆ ಪೊಲೀಸರು ಮದ್ಯ ಪ್ರವೇಶಿಸಿ,ಜನರನ್ನು ಚದುರಿಸುವ ಮೂಲಕ ಗಲಾಟೆ ತಿಳಿಗೊಳಿಸಿದರು.ಈ ಸಂಬಂಧ ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ವೆಂಕಟೇಶ್ ಮಾತನಾಡಿ, ಜಿಲ್ಲಾ ಸಹಕಾರ ನಿಬಂಧನೆಗಳ ಇಲಾಖೆಯಿಂದ ಕೋಟಗುಡ್ಡ ಪ್ರಾಥಮಿಕ ಕೃಷಿ ಪತ್ತಿನ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಆದೇಶ ಜಾರಿಪಡಿಸಿದ್ದು, ಇದರ ಅನ್ವಯ ಮಾ,26ಕ್ಕೆ ನಾಮ ಪತ್ರ ಸಲ್ಲಿಕೆ ಗಡುವು ವಿಧಿಸಲಾಗಿತ್ತು. ನಿಯಮನುಸಾರ ಸ್ವೀಕರಿಸಲು ಸಿದ್ಧತೆ ಕೈಗೊಂಡಿದ್ದು, ನಾಮ ಪತ್ರ ಸಲ್ಲಿಸುವ ವೇಳೆ ಅನರ್ಹ ಮತದಾರರು ನಮಗೆ ನ್ಯಾಯ ಸಿಗುವವರೆವಿಗೂ ನಾಮಪತ್ರ ಸ್ವೀಕರಿಸಬಾರದೆಂದು ಅಡ್ಡಿಪಡಿಸಿದ್ದಾರೆ. ಮತದಾರರು ಮತ್ತು ಅನರ್ಹ ಮತದಾರರ ಮಧ್ಯ ಗಲಾಟೆ ನಡೆದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಆಲಿಸಿ ಈ ಎರಡು ಗುಂಪುಗಳಿಗೆ ಹಿಂಬರಹ ಪತ್ರ ನೀಡುವ ಮೂಲಕ ಮೇಲಾಧಿಕಾರಿಗಳ ಆದೇಶದ ಮೇರೆಗೆ ನಾಮಪತ್ರ ಸಲ್ಲಿಕೆ ರದ್ದುಪಡಿಸಿ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದರು.ಈ ಸಂಬಂಧ ಮಾಜಿ ಕೆಎಂಎಫ್ ನಿರ್ದೇಶಕ ಕೆ.ಆರ್.ಸುರೇಶ್ ಸ್ವಾಮಿ ಮಾತನಾಡಿ, ತಾಲೂಕಿನ ಕೋಟಗುಡ್ಡ,ಶೈಲಾಪುರ,ಬೆಳ್ಳಿಬಟ್ಟಲು ಅರಕ್ಯಾತನಹಳ್ಳಿ ಈ ನಾಲ್ಕು ಗ್ರಾಮಗಳು ಇಲ್ಲಿನ ಸೊಸೈಟಿಗೆ ಒಳಪಟ್ಟಿವೆ. ಈ ನಾಲ್ಕು ಗ್ರಾಮಗಳ 575 ಸಾಲಗಾರರು ಹಾಗೂ 317 ಸಾಲಗಾರರಲ್ಲದವರು ಸೇರಿ ಒಟ್ಟು 892 ಮಂದಿ ಷೇರು ಮೊತ್ತ ಕಟ್ಡಿ ಸೊಸೈಟಿಯ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಸಹಕಾರ ಇಲಾಖೆಯ ನಿಬಂಧನೆಗಳು ಪಾಲಿಸಿದ್ದಾರೆ.ನಿಯಮನುಸಾರ ಸಾಮಾನ್ಯ ಸಭೆಗೂ ಹಾಜರಾಗಿದ್ದಾರೆ. ಆದರೆ, ಕೆಲವರ ಸ್ವಾರ್ಥ ಸಾಧನೆಗೆ,ಸುಮಾರು 8402ಮಂದಿ ಅರ್ಹ ಷೇರುದಾರರನ್ನು ಮತದಾರರ ಪಟ್ಟಿಯಿಂದ ಸೊಸೈಟಿ ಕಾರ್ಯದರ್ಶಿ ರಂಗನಾಥ್ ಕೈಬಿಟ್ಟು ವಂಚಿಸಿದ್ದಾರೆ. ಇವರಿಗೆ ಬೇಕಾದ 54ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಿರುವುದು ನ್ಯಾಯ ಸಮ್ಮತವೇ ಎಂದು ಆರೋಪಿಸಿದರು.