ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

| Published : Apr 12 2024, 01:09 AM IST

ಸಾರಾಂಶ

ಏ. ೨೦ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಏ. ೨೨ ಕೊನೆಯ ದಿನವಾಗಿದೆ.

ಕಾರವಾರ: ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಇಂದಿನಿಂದ(ಏ. ೧೨) ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ. ೧೯ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿಯ ೨ನೇ ಮಹಡಿಯಲ್ಲಿ ನಾಮಪತ್ರ ಸ್ವೀಕರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಪ್ರತಿದಿನ ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಅವಕಾಶವಿರುತ್ತದೆ. ನಾಲ್ಕು ರಾಜಕೀಯ ಪಕ್ಷದವರು, ೧೫ ಪಕ್ಷೇತರರು ನಾಮಪತ್ರದ ಅರ್ಜಿಯನ್ನು ಪಡೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯೊಂದಿಗೆ ಗರಿಷ್ಠ ೪ ಜನರಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿಗೆ ಪ್ರವೇಶವಿದ್ದು, ಕಚೇರಿಯ ೧೦೦ ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ. ಏ. ೨೦ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಏ. ೨೨ ಕೊನೆಯ ದಿನವಾಗಿದೆ ಎಂದರು.

ಜಿಲ್ಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ೧೫,೬೬೦ ಜನರಲ್ಲಿ ೨,೯೭೭ ಮತ್ತು ೨೪,೦೯೦ ಅಂಗವಿಕಲರಲ್ಲಿ ೧,೯೭೮ ಜನ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ತಿಳಿಸಿದ್ದಾರೆ. ೧೮ರಿಂದ ೧೯ ವಯೋಮಾನದ ೪೧,೪೯೪ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಇದುವರೆಗೆ ₹೨,೧೦,೦೪,೦೨೭ ಮೊತ್ತದ ೯೫,೪೪೯ ಲೀ. ಮದ್ಯ, ₹೬೮,೫೦೦ ಮೊತ್ತದ ಮಾದಕ ವಸ್ತುಗಳು, ₹೩೫,೪೯,೦೦೦ ಮೌಲ್ಯದ ಬಟ್ಟೆ, ಪಾತ್ರೆಯಂತಹ ಉಡುಗೊರೆಗಳು, ₹೩೧,೩೧,೨೦೦ ನಗದು ವಶಪಡಿಸಿಕೊಂಡಿದ್ದು, ಒಟ್ಟೂ ಮೌಲ್ಯ ₹೨,೫೫,೨೩,೨೨೭ ಆಗಿದೆ. ಅಬಕಾರಿ ಇಲಾಖೆಯ ವತಿಯಿಂದ ೪೩೭ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ೪೩ ಪ್ರಕರಣ ದಾಖಲಿಸಲಾಗಿದೆ ಎಂದರು.

ಲೋಕಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ ೧೬,೩೮,೫೪೦ ಮತದಾರರಿದ್ದು, ಏ. ೧೯ರಂದು ಅಂತಿಮ ಮತದಾರರ ಸಂಖ್ಯೆ ಲಭ್ಯವಾಗಲಿದೆ. ಜಿಲ್ಲೆಗೆ ಈಗಾಗಲೇ ಚುನಾವಣೆಯ ಸಾಮಾನ್ಯ ವೀಕ್ಷರನ್ನಾಗಿ ರಾಜೀವ್ ರತನ್, ವೆಚ್ಚ ವೀಕ್ಷಕರನ್ನಾಗಿ ಪ್ರಶಾಂತ್ ಸಿಂಗ್ ಹಾಗೂ ಪೊಲೀಸ್ ವೀಕ್ಷಕರನ್ನಾಗಿ ಭನ್ವರ್ ಲಾಲ್ ಮೀನಾ ಅವರನ್ನು ಆಯೋಗ ನೇಮಿಸಿದೆ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಡಿಸಿ, ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿರುವವರು ಮತದಾನದ ದಿನದಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಮತಗಟ್ಟೆಯಲ್ಲಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಗರ್ಭಿಣಿಯರಿಗೆ ಮತ ಚಲಾಯಿಸಲು ಪ್ರತ್ಯೇಕ ಸಾಲನ್ನು ಮಾಡಿ ಆದ್ಯತೆಯಲ್ಲಿ ಅವಕಾಶ ನೀಡಲಾಗುತ್ತದೆ ಎಂದರು.

ಮನೆಯಿಂದ ನೋಂದಣಿ ಮಾಡಿಕೊಂಡವರು ಕೇಂದ್ರಕ್ಕೆ ತೆರಳಬಹುದೇ ಎಂದು ಕೇಳಿದ್ದಕ್ಕೆ, ಆಯೋಗ ನಿಗದಿ ಮಾಡಿದ ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ನಿಗದಿತ ಮತದಾರರ ಮನೆಗೆ ತೆರಳಿ ಬಿಎಲ್‌ಒ ಒಪ್ಪಿಗೆ ಪತ್ರ ಪಡೆದು ಸಹಾಯಕ ಚುನಾವಣಾಧಿಕಾರಿಗೆ ನೀಡುತ್ತಾರೆ. ಅವರು ಅನುಮೋದನಗೆ ಆನ್‌ಲೈನ್‌ನಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸುತ್ತಾರೆ. ಒಮ್ಮೆ ಚುನಾವಣಾಧಿಕಾರಿಯಿಂದ ಅನುಮತಿ ಸಿಕ್ಕರೆ ಪುನಃ ಬದಲಾಯಿಸಲು ಆಗುವುದಿಲ್ಲ ಎಂದರು.

ಮತದಾನ ಬಹಿಷ್ಕಾರಕ್ಕೆ ಸಂಬಂಧಪಟ್ಟಂತೆ ೪- ೫ ಕಡೆಯಿಂದ ಪತ್ರ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ನಮ್ಮ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಮನವೊಲಿಸುವ ಕೆಲಸ ನಡೆಯುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.