ಸಾರಾಂಶ
ಧಾರವಾಡ:
ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮೇ 7ರಂದು ಮತದಾನ ಜರುಗಲಿದ್ದು, ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿದ್ದು, ಏ.20ರಂದು ನಾಮಪತ್ರ ಪರಿಶೀಲನೆ ಮತ್ತು ಏ. 22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಮೇ 7ರಂದು ಮತದಾನ ನಡೆಯಲಿದ್ದು, ಜೂ. 4ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.ಮತಗಟ್ಟೆಗಳ ವಿವರ:
ನವಲಗುಂದ ಕ್ಷೇತ್ರ ವ್ಯಾಪ್ತಿಯಲ್ಲಿ 234, ಕುಂದಗೋಳ ವ್ಯಾಪ್ತಿಯಲ್ಲಿ 214, ಧಾರವಾಡ ಕ್ಷೇತ್ರದಲ್ಲಿ 234, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ 217, ಹು-ಧಾ ಕೇಂದ್ರ ಕ್ಷೇತ್ರ ವ್ಯಾಪ್ತಿಯಲ್ಲಿ 260, ಹು-ಧಾ ಪಶ್ಚಿಮ ಮತ ಕ್ಷೇತ್ರದಲ್ಲಿ 273, ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ 228, ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ 241 ಮತಗಟ್ಟೆಗಳಿವೆ. ಒಟ್ಟಾರೆಯಾಗಿ 8 ವಿಧಾನಸಭಾ ಮತ ಕ್ಷೇತ್ರದಲ್ಲಿ 1901 ಮತಗಟ್ಟೆಗಳಿಗೆ ಎಂದು ತಿಳಿಸಿದ್ದಾರೆ.ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿ (ಜಿಲ್ಲಾಧಿಕಾರಿಗಳ ಕಚೇರಿ) ಸುತ್ತಮುತ್ತಲು 200 ಮೀ. ವ್ಯಾಪ್ತಿಯಲ್ಲಿ ಗಡಿ ಗುರುತಿಸಿ, 100 ಮೀ. ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವನ್ನಾಗಿ ಗುರುತಿಸಲಾಗಿದೆ. 100ಮೀ ನಿರ್ಬಂಧಿತ ಪ್ರದೇಶದ ವ್ಯಾಪ್ತಿಯೊಳಗಡೆ ನಾಮಪತ್ರ ಸಲ್ಲಿಸಲು ಕೇವಲ 3 ವಾಹನಗಳಿಗೆ ಮಾತ್ರ ಅವಕಾಶವಿದ್ದು, ಕಡ್ಡಾಯವಾಗಿ ವಾಹನಗಳಿಗೆ ಅನುಮತಿ ಪಡೆದಿರಬೇಕು. ಅನುಮತಿ ಪತ್ರವನ್ನು ಲಗತ್ತಿಸಿರಬೇಕು. ಮೂರು ವಾಹನಗಳಿಗೆ ಚುನಾವಣಾಧಿಕಾರಿಗಳ ಕಚೇರಿಯ ಮುಖ್ಯದ್ವಾರದ ಗೇಟಿನವರೆಗೆ ಮಾತ್ರ ಪ್ರವೇಶಕ್ಕೆ ಆಗಮಿಸಬಹುದಾಗಿದೆ. ಚುನಾವಣಾಧಿಕಾರಿಗಳ ಕಚೇರಿಯ ಒಳಗಡೆ ಪ್ರವೇಶಿಸಲು ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಅವಕಾಶವಿದೆ ಎಂದರು.
ಏ. 12ರಿಂದ ಏ. 19ರ ವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗಾಗಿ (ರಜಾದಿನ ಹೊರತುಪಡಿಸಿ) ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಬಹುದು. ಠೇವಣಿ ಮೊತ್ತವು ಸಾಮಾನ್ಯ ವರ್ಗಕ್ಕೆ ₹ 25 ಸಾವಿರ ಮತ್ತು ಎಸ್ಸಿ-ಎಸ್ಟಿ ₹ 12,500 ಹಾಗೂ ತಹಸೀಲ್ದಾರ್ ಅವರಿಂದ ಪಡೆದ ಇತ್ತೀಚಿನ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚಿನ ನಾಮಪತ್ರ ಸಲ್ಲಿಸಿದಲ್ಲಿ 2ನೇ ಹಾಗೂ ನಂತರದ ನಾಮಪತ್ರಗಳಿಗೆ ಈಗಾಗಲೇ ಠೇವಣಿ ಮಾಡಿದ ರಸೀದಿಯ ಝೇರಾಕ್ಸ್ ಪ್ರತಿ ಲಗತ್ತಿಸಬೇಕು ಎಂದು ತಿಳಿಸಿದರು.ಸಿಬ್ಬಂದಿ ಇಷ್ಟು:ಚುನಾವಣೆಯಲ್ಲಿ ಮತದಾನದ ದಿನದಂದು ಒಟ್ಟು ಪಿಆರ್‌ಒ- 2195, ಎಪಿಆರ್‌ಒ- 2195 ಮತ್ತು ಪಿಒ-4392 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದು ಅಕ್ರಮ ವಹಿವಾಟು ತಡೆಯಲು ವಿವಿಧ ತಂಡ ನೇಮಿಸಲಾಗಿದೆ. ವಿಧಾನ ಸಭಾ ಕ್ಷೇತ್ರವಾರು ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳು 8, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು 52, ಸ್ಟ್ಯಾಂಟಿಕ್ ಸರ್ವೇಲೆನ್ಸ್ ಟೀಮ್ ಅಧಿಕಾರಿಗಳು 72, ವಿಡಿಯೋ ಸರ್ವೇಲೆನ್ಸ್ ಟೀಮ್ ಅಧಿಕಾರಿಗಳು 14, ವಿಡಿಯೋ ವೀವಿಂಗ್ ಟೀಮ್ ಅಧಿಕಾರಿಗಳು 21, ಅಕೌಂಟಿಂಗ್ ಟೀಮ್ ಅಧಿಕಾರಿಗಳು 11, ಸಹಾಯಕ ಲೆಕ್ಕ ವೀಕ್ಷಕರು 10 ಸೇರಿ ಒಟ್ಟು 193 ಅಧಿಕಾರಿಗಳನ್ನು ವಿವಿಧ ತಂಡಗಳಿಗೆ ನೇಮಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನಗಳಂತೆ ವಿಶೇಷ ಮತಗಟ್ಟೆ ಗುರುತಿಸಲಾಗಿದ್ದು, ಸಖಿ, ಯುವ ಹಾಗೂ ಥೀಮ್ ಆಧಾರಿತ ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಈ ಸಲ ಚುನಾವಣೆಯಲ್ಲಿ ಶೇ.75ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ನೋಡಲ್ ಅಧಿಕಾರಿ ಅಜೀಜ್ ದೇಸಾಯಿ ಹಾಗೂ ಇತರರು ಇದ್ದರು.ಜಪ್ತಿ ಮಾಡಿದ ಸಾಮಗ್ರಿ
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಒಟ್ಟು 0.778 ಕೆ.ಜಿ. ಚಿನ್ನ (ಮೌಲ್ಯ ₹ 38.50 ಲಕ್ಷ ), 24,58,970 ನಗದು, ಡ್ರಗ್ಸ್ (ಮಾದಕ ವಸ್ತುಗಳು) 7.727 (ಮೌಲ್ಯ ₹ 8.19 ಲಕ್ಷ ), ಲಿಕ್ಕರ್ 10166.02 ಲೀಟರ್ (ಮೌಲ್ಯ ₹ 29.14 ಲಕ್ಷ) ಇತರೆ ಮತ್ತು ಉಚಿತ ಸಾಮಗ್ರಿಗಳು: 2179 ಸೀರೆಗಳು (ಮೌಲ್ಯ ₹17.82ಲಕ್ಷ), 1344 ಜಿನ್ಸ್ ಪ್ಯಾಂಟ್ಸ್ (ಮೌಲ್ಯ ₹ 3.37ಲಕ್ಷ), 480 ಮಿಕ್ಸರ್ (ಮೌಲ್ಯ ₹ 8 ಲಕ್ಷ), 715 ತಲೆ ದಿಂಬುಗಳು (ಮೌಲ್ಯ ₹ 35 ಸಾವಿರ), 37 ಬೆಡ್ ಶೀಟ್ಸ್ (ಮೌಲ್ಯ ₹7400), 22 ಕರ್ಟನ್ಸ್ (ಮೌಲ್ಯ ₹ 2200), 14 ವೆಲ್ಸ್ (ಮೌಲ್ಯ ₹ 4200), 13 ಕಾರ್ಟನ್ ಟವೆಲ್ (ಮೌಲ್ಯ ₹1300), 6 ಶರ್ಟ್ ಪೀಸ್ (ಮೌಲ್ಯ ₹4800), 1 ಬ್ಲ್ಯಾಕೇಟ್ (ಮೌಲ್ಯ ₹ 2 ಸಾವಿರ ), 20 ಚೂಡಿದಾರ (ಮೌಲ್ಯ ₹ 30ಸಾವಿರ ), ಒಟ್ಟಾರೆಯಾಗಿ ಜಿಲ್ಲೆಯಲ್ಲಿ ₹ 1,30,50,357 ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಂತಾಗಿದೆ. ವಶಪಡಿಸಿಕೊಂಡ ಹಣದ ಪೈಕಿ ಒಟ್ಟು ₹ 4,55,670 ಕ್ಯಾಶ್ ರೆಡ್ರೆಸುಲ್ ಕಮೀಟಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.ದಾಖಲಾದ ಪ್ರಕರಣಗಳ ವಿವರ:
ಆಯುಕ್ತಾಲಯದಲ್ಲಿ 22, ಎಸ್‌ಪಿ 33, ಎಸ್.ಎಸ್.ಟಿ 11, ಎಫ್‌ಎಸ್‌ಟಿ 01 ಪ್ರಕರಣ ಒಟ್ಟು 67 ಪ್ರಕರಣ ದಾಖಲಾಗಿದೆ. 264 ಅಬಕಾರಿ ಪ್ರಕರಣ ದಾಖಲಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 331 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.