28ರಿಂದ ನಾಮಪತ್ರ ಸಲ್ಲಿಕೆ ಅವಕಾಶ: ಡಾ. ವಿದ್ಯಾಕುಮಾರಿ

| Published : Mar 27 2024, 01:04 AM IST

28ರಿಂದ ನಾಮಪತ್ರ ಸಲ್ಲಿಕೆ ಅವಕಾಶ: ಡಾ. ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾ. 28ರಿಂದ ಚುನಾವಣಾ ಅಧಿಸೂಚನೆ ಜಾರಿಯಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾ.28ರಿಂದ ಚುನಾವಣಾ ಅಧಿಸೂಚನೆ ಜಾರಿಯಾಗಲಿದೆ. ಅದರಂತೆ 15ನೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ.4 ಕೊನೆಯ ದಿನವಾಗಿರುತ್ತದೆ.

ಈ ಬಗ್ಗೆ ಕ್ಷೇತ್ರದ ಚುನಾವಣಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಆದರೆ ಮಾ.29ರಂದು ಗುಡ್ ಫ್ರೈಡೆ ಮತ್ತು 31ರಂದು ಭಾನುವಾರ ರಜೆಯಾದ್ದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಇಲ್ಲ. ನಾಮಪತ್ರಗಳನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಲು ಅವಕಾಶವಿದೆ. ಮಣಿಪಾಲದ ರಜತಾದ್ರಿಯ ಜಿಲ್ಲಾ ಕಚೇರಿಗಳ ಸಂಕೀರ್ಣದ ಕೊಠಡಿ ಸಂಖ್ಯೆ 107ರಲ್ಲಿ ನಾಮಪತ್ರಗಳನ್ನು ಸಲ್ಲಿಸಬೇಕು.

ಮಾ.5ರಂದು ಡಿಸಿ ಕೋರ್ಟ್ ಹಾಲ್ ನಲ್ಲಿ ಎಲ್ಲಾ ನಾಮಪತ್ರಗಳ ಪರಿಶೀಲಿಸಿ, ಕ್ರಮಬದ್ಧವಾಗಿರುವ ಉಮೇದುವಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಮಾ.8ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿದೆ. ನಂತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಮಾ.26ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಕ್ಷೇತ್ರದಲ್ಲಿ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಕೋರಿದ್ದಾರೆ.

3 ವಾಹನ, 5 ಜನರಿಗೆ ಮಾತ್ರ ಅವಕಾಶ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬರುವಾಗ ಚುನಾವಣಾಧಿಕಾರಿ ಕಚೇರಿಯ 100 ಮೀ. ವ್ಯಾಪ್ತಿಯೊಳಗೆ ಗರಿಷ್ಠ 3 ವಾಹನಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಚುನಾವಣಾಧಿಕಾರಿಯವರ ಕೊಠಡಿಯೊಳಗೆ ಅಭ್ಯರ್ಥಿ ಸಹಿತ ಒಟ್ಟು 5 ಮಂದಿ ಮಾತ್ರ ಪ್ರವೇಶ ಇರುತ್ತದೆ ಎಂದು ಡಿಸಿ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯಲ್ ಉಪಸ್ಥಿತರಿದ್ದರು.