ನಾಲ್ಕು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

| Published : Apr 21 2024, 02:17 AM IST

ಸಾರಾಂಶ

ಧಾರವಾಡ ಲೋಕಸಭೆ ಮತಕ್ಷೇತ್ರದ ಚುನಾವಣೆಗೆ ಸ್ವೀಕೃತವಾದ ಎಲ್ಲ ನಾಮಪತ್ರಗಳ ಪರಿಶೀಲನೆ ಕಾರ್ಯ ಶನಿವಾರ ಮುಗಿದಿದ್ದು, ನಾಮಪತ್ರ ಸಲ್ಲಿಸಿದ್ದ 29 ಅಭ್ಯರ್ಥಿಗಳ ಎಲ್ಲ ನಾಮತ್ರ ಪರಿಶೀಲಿಸಲಾಗಿದೆ.

ಧಾರವಾಡ:

ಧಾರವಾಡ ಲೋಕಸಭೆ ಮತಕ್ಷೇತ್ರದ ಚುನಾವಣೆಗೆ ಸ್ವೀಕೃತವಾದ ಎಲ್ಲ ನಾಮಪತ್ರಗಳ ಪರಿಶೀಲನೆ ಕಾರ್ಯ ಶನಿವಾರ ಮುಗಿದಿದ್ದು, ನಾಮಪತ್ರ ಸಲ್ಲಿಸಿದ್ದ 29 ಅಭ್ಯರ್ಥಿಗಳ ಎಲ್ಲ ನಾಮತ್ರ ಪರಿಶೀಲಿಸಲಾಗಿದೆ. ಸರಿಯಾದ ದಾಖಲೆ ಸಲ್ಲಿಸದ ನಾಲ್ವರ ನಾಮಪತ್ರ ತಿರಸ್ಕೃತವಾಗಿದ್ದು 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.ನಾಮಪತ್ರದೊಂದಿಗೆ ಅಗತ್ಯ ದಾಖಲೆ ಸಲ್ಲಿಸದ ಹಿನ್ನಲೆಯಲ್ಲಿ ರಾಷ್ಟ್ರೀಯ ಜನ ಸಂಭಾವನಾ ಪಾರ್ಟಿಯ ನಾಗರಾಜ ಶ್ರೀಧರ ಶೇಟ್, ಬಹುಜನ ಸಮಾಜ ಪಕ್ಷದ ಶೋಭಾ ಬಳ್ಳಾರಿ, ರೈತ ಭಾರತ ಪಾರ್ಟಿಯ ಹೇಮರಾಜ ಬಡ್ನಿ ಹಾಗೂ ಪಕ್ಷೇತರ ಅಭ್ಯರ್ಥಿ ರಾಹುಲ್ ಗಾಂಧಿ ಎನ್. ಅವರ ನಾಮಪತ್ರ ತಿರಸ್ಕೃತವಾಗಿವೆ. ಶಿವಾನಂದ ಮುತ್ತಣ್ಣವರ ಅವರು ಭಾರತೀಯ ಜನತಾ ಪಕ್ಷದ ಹೆಸರಿನಲ್ಲಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದ್ದು, ಅವರು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ. ಮತ್ತು ವೀಣಾ ಜನಗಿ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹೆಸರಿನಲ್ಲಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದ್ದು, ಅವರು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ.

ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ಸಾಮಾನ್ಯ ವೀಕ್ಷಕ, ಹಿರಿಯ ಐಎಎಸ್ ಅಧಿಕಾರಿ ಅಜಯ ಗುಪ್ತಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮತ್ತು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು, ಅಭ್ಯರ್ಥಿಗಳ ಸೂಚಕರಿದ್ದರು.

22ಕ್ಕೆ ವಾಪಸ್‌ ಪಡೆಯಬಹುದು:

ನಾಮಪತ್ರಗಳು ಕ್ರಮಬದ್ಧವಾಗಿರುವ ಅಭ್ಯರ್ಥಿಗಳು ಇಚ್ಚಿಸಿದಲ್ಲಿ ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಏ. 22ರ ಮಧ್ಯಾಹ್ನ 3ರ ವರೆಗೆ ಅವಕಾಶವಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ನಮೂನೆ 5ರ ಅರ್ಜಿಯು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಅದನ್ನು ಪಡೆದು ನಿಗದಿತ ಸಮಯದೊಳಗೆ ಸಲ್ಲಿಸಬಹುದು. ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಮೇಲೆ ಅಂತಿಮವಾಗಿ ಚುನಾವಣಾ (ಕಣದಲ್ಲಿ) ಸ್ಪರ್ಧೆಯಲ್ಲಿ ಉಳಿಯುವ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.