ಸಾರಾಂಶ
ರಾಷ್ಟ್ರ ರಕ್ಷಣೆ, ಪ್ರಗತಿಗಾಗಿ ಜಗಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದೇನೆ ಎಂದು ನಿವೃತ್ತ ಡಿವೈಎಸ್ಪಿ ಸಂಗಪ್ಪ ಹುಣಶಿಕಟ್ಟಿ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಷ್ಟ್ರ ರಕ್ಷಣೆ, ಪ್ರಗತಿಗಾಗಿ ಜಗಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದೇನೆ ಎಂದು ನಿವೃತ್ತ ಡಿವೈಎಸ್ಪಿ ಸಂಗಪ್ಪ ಹುಣಶಿಕಟ್ಟಿ ಸ್ಪಷ್ಟಪಡಿಸಿದರು.ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿಯ ನಂತರವೂ ಸಮಾಜಮುಖಿ ಕೆಲಸಕ್ಕೆ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆಗ ನಮ್ಮ ಸಮುದಾಯದ ಅನೇಕ ಹಿರಿಯರು ಆಗಮಿಸಿ ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರ ಆಡಳಿತದಲ್ಲಿ ದೇಶದಲ್ಲಾದ ಅನೇಕ ಅಭಿವೃದ್ಧಿ ಕಾರ್ಯಗಳು, ಬದಲಾವಣೆಗಳ ಬಗ್ಗೆ ಚರ್ಚಿಸಿ ಪ್ರಸ್ತುತ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಅವಶ್ಯಕತೆ ಬಗ್ಗೆ ವಿವರಿಸಿದರು. ಅವರೆಲ್ಲ ಒತ್ತಾಸೆಯಂತೆ ಹಾಗೂ ನಾನು ಸಹ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದೇನೆ ಎಂದರು.
ಕಾಂಗ್ರೇಸ್ ಪಕ್ಷದಲ್ಲಿ ಸಂಸ್ಕಾರವಿಲ್ಲ, ನಾಯಕರಲ್ಲಿ ಅಧಿಕಾರದ ಹಪಹಪಿತನ ಹೆಚ್ಚಾಗಿದೆ. ಹಿಂದೆ ಸಿಎಂಗಳಾಗಿದ್ದ ಎಸ್.ಎಂ.ಕೃಷ್ಣ, ಜೆ.ಹೆಚ್.ಪಟೇಲರು, ವಿರೇಂದ್ರ ಪಾಟೀಲರು, ರಾಮಕೃಷ್ಣ ಹೆಗ್ಡೆ ಹೀಗೆ ಅನೇಕ ಸಜ್ಜನ ರಾಜಕಾರಣಿಗಳು ಮಾತನಾಡುತ್ತಿದ್ದರೆ ಮುತ್ತು ರತ್ನಗಳು ಉದುರಿದಂತೆ ಮಾತುಗಳು ಹೊರಬರುತ್ತಿದ್ದವು. ಆದರೆ ಈಗಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಅವರ ಅಹಂಕಾರ, ದುರಾಹಂಕಾರದ ಮಾತುಗಳು ಕೇಳಿದರೆ ತೀವ್ರ ಬೇಸರವಾಗುತ್ತದೆ. ದಿನಬೆಳಗಾದರೆ ಕಾಂಗ್ರೆಸ್ ನವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆ. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರೇ ಕಾಂಗ್ರೆಸ್ ನವರು. ಅಂಬೇಡ್ಕರ್ ಅವರು ಮೃತಪಟ್ಟಾಗ ಅವರ ಶವಸಂಸ್ಕಾರಕ್ಕೂ ಬರದೇ, ಅಂತ್ಯಕ್ರಿಯೆಗೆ ಜಾಗ ನೀಡಲಿಲ್ಲ. ಭಾರತದ ಸಂವಿಧಾನ ಶಿಲ್ಪಿಯಾಗಿರುವ ಅಂಬೇಡ್ಕರ್ ಅವರಿಗೆ ಭಾರತರತ್ನ ಸಹ ನೀಡಿಲ್ಲ. ದೇಶದ ಸರ್ವಾಂಗಿಣ ಪ್ರಗತಿಗೆ, ಭವಿಷ್ಯಕ್ಕೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ ಎಂದರು.ಮುಖಂಡ ಹನುಮಂತ ಬಿರಾದಾರ ಮಾತನಾಡಿದರು.
ಈ ವೇಳೆ ಮುಖಂಡ ಶರಣು ಬ್ಯಾಳಿ, ವಿಜಯ ಜೋಶಿ ಉಪಸ್ಥಿತರಿದ್ದರು.