ಸಾರಾಂಶ
ಕೆಲ ತಿಂಗಳಿನಿಂದ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಉದಾಸೀನ ಕಾರ್ಯ ವೈಖರಿ ಕಂಡ ನೂತನ ಮೇಯರ್ ಸವಿತಾ ಕಾಂಬಳೆ ಮಂಗಳವಾರ ಎಲ್ಲ ವಲಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಚಳಿ ಬಿಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಲ ತಿಂಗಳಿನಿಂದ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಉದಾಸೀನ ಕಾರ್ಯ ವೈಖರಿ ಕಂಡ ನೂತನ ಮೇಯರ್ ಸವಿತಾ ಕಾಂಬಳೆ ಮಂಗಳವಾರ ಎಲ್ಲ ವಲಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಚಳಿ ಬಿಡಿಸಿದರು.ಮೇಯರ್ ದಿಢೀರ್ ಭೇಟಿಯಿಂದಾಗಿ ವಲಯ ಕಾರ್ಯಲಯದ ಅಧಿಕಾರಿ ಸಿಬ್ಬಂದಿ ತಬ್ಬಿಬ್ಬಾದರು. ಸಿಬ್ಬಂದಿಯ ಹಾಜರಾತಿ ಗಮನಿಸಿದ ಮೇಯರ್ ಸವಿತಾ ಕಚೇರಿ ಕಾರ್ಯಕ್ಕೆ ವಿಳಂಬವಾಗಿ ಬರುವ ಅಧಿಕಾರಿ, ಸಿಬ್ಬಂದಿ ರಜೆ ಚೀಟಿ ನೀಡಿ ಮನೆಗೆ ತೆರಳುವಂತೆ ಕಟ್ಟೆಚ್ಚರಿಕೆ ನೀಡಿದರು. ಕಚೇರಿ ಸಮಯಕ್ಕೆ ಹಾಜರಾತಿ ಇರಬೇಕು. ಇಲ್ಲದಿದ್ದಲ್ಲಿ ಅದನ್ನು ರಜಾ ದಿನವೆಂದು ಪರಿಗಣಿಸಲು ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವುದು ದೊಡ್ಡ ಸಮಸ್ಯೆಯಾಗಿತ್ತು. ಅಲ್ಲದೇ, ಹಿರಿಯ ನಾಗರಿಕರು ತಮ್ಮ ಕೆಲಸಕ್ಕೆ ಪಾಲಿಕೆಯ ವಲಯ ಕಚೇರಿಗೆ ನಿತ್ಯ ಅಲೆದಾಡುವುದು ನಿಂತಿರಲಿಲ್ಲ. ನಾಗರಿಕರ ಸಮಸ್ಯೆಯನ್ನು ಗಮನಿಸಿದ ನೂತನ ಮೇಯರ್ ಸವಿತಾ ಕಾಂಬಳೆ ಉಪಮೇಯರ್ ಆನಂದ ಜತೆಗೆ ಪಾಲಿಕೆಯ ನಾಲ್ಕು ವಲಯದ ಆಡಳಿತ ವಿಭಾಗದ ಕಚೇರಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಸ್ಪಂದಿಸದ ವರ್ತನೆಗೆ ಸಿಡಿಮಿಡಿಗೊಂಡರು.ಹಿರಿಯ ನಾಗರಿಕರ ಯಾವುದೇ ಕೆಲಸ ಕಾರ್ಯ ಇದ್ದರೂ ಅವರಿಗೆ ಪ್ರಥಮ ಆದ್ಯತೆ ನೀಡಿ ತಕ್ಷಣ ಕೆಲಸ ಪೂರೈಸುವಂತೆ ಅಧಿಕಾರಿ ಮತ್ತು ಸಿಬ್ವಂದಿಗೆ ತಾಕೀತು ಮಾಡಿದರು. ಅಲ್ಲದೇ, ಆಡಳಿತ ವ್ಯವಹಾರಗಳು ಅಧಿಕಾರಿ ಸಿಬ್ಬಂದಿಯ ಆಮೆಗತಿಯ ಕೆಲಸ ಇನ್ನೂ ಮುಂದೆ ನಡೆಯದು, ಕೆಲಸ ಕಾರ್ಯಗಳು ವಿಳಂಬವಾಗದೇ ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಚೇರಿಯಲ್ಲಿನ ಅವ್ಯವಸ್ಥೆ ಸರಿಪಡಿಸಿಕೊಳ್ಳಿ ಸಿಟ್ಟಿನ ವರ್ತನೆ, ಕರ್ತವ್ಯ, ಸಮಯ ಪ್ರಜ್ಞೆ, ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ಇವೆಲ್ಲ ಸಿಬ್ಬಂದಿಯದ್ದಾಗಿರಬೇಕು ಎಂದು ಸಲಹೆ ನೀಡಿದರಲ್ಲದೆ, ಕಚೇರಿಗಳ ಹೊರ ಮತ್ತು ಒಳ ಪರಿಸರವನ್ನು ಶುಚಿಯಾಗಿಡುವಂತೆ ಸೂಚಿಸಿದರು.