ಜಮೆ ಆಗದ ಬೆಳೆ ವಿಮೆ: ರೈತರ ಆಕ್ರೋಶ

| Published : Mar 22 2024, 01:08 AM IST

ಸಾರಾಂಶ

ತಿಕೋಟಾ ತಾಲೂಕಿನಾದ್ಯಂತ ರೈತರು ಆಯಾ ಬೆಳೆಗಳಿಗೆ ಅನುಗುಣವಾಗಿ ರೈತರು ವಿಮಾಕಂತು ತುಂಬಿದ್ದು, ಇನ್ನುವರೆಗೂ ಕೆಲವು ರೈತರ ಖಾತೆಗಳಿಗೆ ವಿಮಾ ಜಮೆ ಆಗಿಲ್ಲ ಎಂದು ಆಕ್ರೋಶಗೊಂಡ ರೈತರು ತಹಸೀಲ್ದಾರ್‌ ಸುರೇಶ ಮುಂಜೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ತಾಲೂಕಿನಾದ್ಯಂತ ರೈತರು ಆಯಾ ಬೆಳೆಗಳಿಗೆ ಅನುಗುಣವಾಗಿ ರೈತರು ವಿಮಾಕಂತು ತುಂಬಿದ್ದು, ಇನ್ನುವರೆಗೂ ಕೆಲವು ರೈತರ ಖಾತೆಗಳಿಗೆ ವಿಮಾ ಜಮೆ ಆಗಿಲ್ಲ ಎಂದು ಆಕ್ರೋಶಗೊಂಡ ರೈತರು ತಹಸೀಲ್ದಾರ್‌ ಸುರೇಶ ಮುಂಜೆ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಎಸ್‌.ಎಸ್‌.ಸಾಲಿಮಠ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲಾಧಿಕಾರಿಗಳು ಬೆಳೆ ನಷ್ಟಗೊಂಡ ರೈತರನ್ನು ಖುದ್ದಾಗಿ ಸರ್ವೆ ಮಾಡಿಸಿ ವಿಮಾ ಮಂಜೂರಾತಿ ಮಾಡಿಸಬೇಕು. ಈ ಬಾರಿ ಮಳೆ ಬಾರದೇ ಬರಗಾಲದಿಂದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ. ಸಾಲ ಸೋಲ ಮಾಡಿ ಬಿತ್ತಿದ ಬೆಳೆಗೆ ಖರ್ಚು ಸಹ ಬಾರದಂತಾಗಿದೆ. ಕೂಡಲೇ ವಿಮಾ ಪರಿಹಾರ ಬಾರದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮಳೆ ಇಲ್ಲದೇ ಬರಗಾಲಕ್ಕೆ ತುತ್ತಾಗಿರುವ ರೈತರು ವಿಮಾ ಆಸರೆ ಆದಿತೆಂದು ಸಾಲ ಮಾಡಿಯಾದರೂ ಬೆಳೆಗಳ ವಿಮಾ ಪಾವತಿಸಿದ್ದಾರೆ. ಆದರೆ, ವಿಮಾ ಬಾರದೇ ರೈತರು ದಿಕ್ಕು ತೋಚದೇ ಸಂಕಷ್ಟ ಎದುರಿಸುವಂತಾಗಿದೆ. ವಿಮಾ ಕಂಪನಿ ಅವರ ಷಡ್ಯಂತ್ರದಿಂದ ಪ್ರಭಾವಿಗಳಿಗೆ ರಾಜ್ಯದ ಹಲವು ಕಡೆ ಮಾತ್ರ ವಿಮಾ ಪರಿಹಾರ ಜಮಾ ಆಗುತ್ತಿರುವುದು ಕಂಡು ಬರುತ್ತಿದೆ. ಆದರೆ ನಿಜವಾಗಿ ನಷ್ಟಗೊಂಡ ರೈತರಿಗೆ ಪರಿಹಾರ ದೊರಕುತ್ತಿಲ್ಲ ಎಂದರು.

ಸರ್ಕಾರ ಬರಗಾಲ ಘೋಷಣೆ ಮಾಡಿದರೂ ಸ್ಥಳೀಯ ಬ್ಯಾಂಕ್‌, ಪೈನಾನ್ಸ್ ಹಾಗೂ ಕೋ ಆಪರೇಟಿವ್‌ ಸೊಸೈಟಿಯವರು ಕಿರಿಕಿರಿ ಉಂಟುಮಾಡುತ್ತಿದ್ದು, ಇವರಿಂದ ಒಂದಿಲ್ಲ ಒಂದು ಸಮಸ್ಯೆ ಎದುರಿಸುವಂತಾಗಿ ರೈತರು ತಮ್ಮ ಮಾನಕ್ಕೆ ಅಂಜಿ ಆತ್ಮಹತೈ ಮಾಡಿಕೊಳ್ಳುವಂತಹ ಉದಾಹರಣೆಗಳು ತಾಲೂಕಿನಲ್ಲಿ ನಡೆದಿವೆ. ಸಾಲವಸೂಲಾತಿಯನ್ನು ಈ ವರ್ಷ ಸಂಪೂರ್ಣ ಕೈಬಿಡಬೇಕೆಂದು ಆದೇಶ ಮಾಡಬೇಕು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಸಂಚಾಲಕರಾದ ನಜೀರ ನಂದರಗಿ, ಹೊನವಾಡ ಅಧ್ಯಕ್ಷ ಹಣಮಂತ ಬ್ಯಾಡಗಿ, ಮುಖಂಡರಾದ ಟೋಪುಗೌಡ ಪಾಟೀಲ, ಎಸ್‌.ಎಸ್‌.ಜಿದ್ದಿ, ಖಾದರಸಾಬ ಅ ವಾಲೀಕಾರ, ಗೈಬುಸಾಬ ರಾ ತಿಗಣಿಬಿದರಿ, ಎಸ್‌.ಎಸ್‌.ಹೊಸಮನಿ, ಮಹಾದೇವ ಕದಂ, ಎಂ.ಡಿ. ಖುರ್ಫಿ, ಸುಭಾಷ ವಳಸಂಗ, ಜಿ.ಜಿ.ಪವಾರ ಇತರರು ಇದ್ದರು.