ಹರಿಹರ ತಾಲೂಕಿನ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟಿಸಿ, ಗ್ರೇಡ್-2 ತಹಸೀಲ್ದಾರ ಪುಷ್ಪ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

- ಹರಿಹರ ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ರೈತ ಸಂಘಟನೆಗಳ ಮನವಿ

- - - ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟಿಸಿ, ಗ್ರೇಡ್-2 ತಹಸೀಲ್ದಾರ ಪುಷ್ಪ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಸಂಘದ ಅಧ್ಯಕ್ಷ ಜಿ ಪ್ರಭುಗೌಡ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಭದ್ರಾ ಮೇಲ್ದಂಡೆಗೆ 1 ಟಿಎಂಸಿ ನೀರನ್ನು ಕೊಡಲು ಸರ್ಕಾರ ನಿರ್ಧರಿಸಿದ್ದು, ಕೂಡಲೇ ನಿರ್ಧಾರ ಹಿಂಪಡೆಯಬೇಕು. ಭದ್ರಾ ಅಚ್ಚುಕಟ್ಟುದಾರರಿಗೆ ಬೇಸಿಗೆ ಹಂಗಾಮಿಗೆ ನೀರು ಕೊಡಲು ಕೂಡಲೇ ಸಭೆ ಕರೆದು ವೇಳಾಪಟ್ಟಿ ಪ್ರಕಟಿಸಬೇಕು. ತೆಂಗು, ಅಡಕೆ, ಭತ್ತ, ಮೆಕ್ಕೆಜೋಳ ಇತ್ಯಾದಿ ಬೆಳೆ ವಿಮೆದಾರರಿಗೆ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಮಾ ಹಣ ಬಿಡುಗಡೆ ಮಾಡಬೇಕು ಎಂದರು.

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ನೀಡಲಾಗುತ್ತಿರುವ ಅನುದಾನವನ್ನು ಬ್ಯಾಂಕ್‌ಗಳಲ್ಲಿ ಇತರೆ ಸಾಲಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿ, ಹಣ ಜಮಾ ಮಾಡದಂತೆ ತಿಳಿಸಬೇಕು. ಕರ್ನಾಟಕದಲ್ಲಿ 90 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಜಮೆ ಆಗಿಲ್ಲ. ಇದನ್ನು ಕೂಡಲೇ ಬಿಡುಗಡೆ ಮಾಡಿಸಬೇಕು. ರೈತರು ಸಾಲ ರಿನಿವಲ್ ಮಾಡುವಂತೆ ಬ್ಯಾಂಕ್ ಮತ್ತು ಸೊಸೈಟಿಯವರು ಒತ್ತಡ ಹಾಕುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ರೈತರ ರಕ್ಷಿಸಬೇಕು ಎಂದರು.

ತೆಂಗು ಬೆಳೆಗೆ ನುಸಿರೋಗ ಹೆಚ್ಚುತ್ತಿದ್ದು, ತೋಟಗಾರಿಕೆ ಇಲಾಖೆ ರೈತರ ಸಹಾಯಕ್ಕೆ ಬರಬೇಕು. ಕರ್ನಾಟಕದ ದಲ್ಲಾಳಿಗಳು ಹೊರ ರಾಜ್ಯದಿಂದ ಭತ್ತ ಖರೀದಿ ಮಾಡುತ್ತಿದ್ದು, ಇದರಿಂದ ರಾಜ್ಯದ ರೈತರ ಭತ್ತ ಖರೀದಿ ಕಡಿಮೆಯಾಗಿದೆ. ಸರ್ಕಾರವು ಆನ್ನ ರಾಜ್ಯದ ಭತ್ತ ಖರೀದಿಗೆ ನಿಷೇಧ ಮಾಡಿ, ರಾಜ್ಯದ ರೈತರಿಗೆ ನ್ಯಾಯ ಒದಗಿಸಬೇಕು. ಗೊಬ್ಬರದ ಅಂಗಡಿ ಮಾಲೀಕರು ಹೆಚ್ಚುವರಿ ಮೊತ್ತಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ಹೊರೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಿಜನ್‌ನಲ್ಲಿ ರೈತರ ಭತ್ತವನ್ನು ಕಡಿಮೆ ದರಕ್ಕೆ ಖರೀದಿ ಮಾಡಿ ಕೂಡಿಟ್ಟು, ಹೆಚ್ಚಿನ ದರಕ್ಕೆ ಮಾರುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು, ದಲ್ಲಾಳಿಗಳಿಗೆ ಲಾಭವಾಗುತ್ತಿದೆ. ಸರ್ಕಾರ ಈ ಅವ್ಯವಸ್ಥೆ ನಿಯಂತ್ರಿಸಬೇಕು. ಬರಗಾಲದ ನಿಮಿತ್ತ ರೈತರು ಸಾಲದ ಕಂತು ಕಟ್ಟಲಾಗದೇ ಬಳಲುತ್ತಿದ್ದಾರೆ. ಆತ್ಮಹತ್ಯೆಯಂತಹ ಪ್ರಕರಣಗಳು ನಡೆದಿರುವುದರಿಂದ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್‌ನವರು ರೈತರಿಗೆ ಒತ್ತಡ ಹಾಕದಂತೆ, ಕಿರುಕುಳ ನೀಡದಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಗರಡಿಮನೆ ಬಸಪ್ಪ, ನಿಂಗೋಜಿರಾವ್, ಎಸ್. ಮಾರುತಿ ರಾವ್, ಎಸ್.ಬಸವರಾಜ್, ಹನುಮಂತಪ್ಪ, ಗಡಿಗೆ ಆನಂದಪ್ಪ, ಆನಂದ್‌ ರಾವ್, ಪರಶುರಾಮ್, ಸುರೇಶ್, ಮಂಜುನಾಥ್ ಡಿ.ಬಿ., ಹಾಲವಾಣ ನಾಗರಾಜ್, ರಾಮಚಂದ್ರಪ್ಪ, ಲೋಕೇಶ್, ಶಿವರಾಜ್ ಕೊಕ್ಕನೂರು, ಕರಿಯಪ್ಪ, ಕೆ. ಮಂಜುನಾಥ್, ವೀರಭದ್ರಪ್ಪ, ನಾಗರಾಜ್, ಅಂಜಿನಪ್ಪ ಇತರರು ಪ್ರತಿಭಟನೆಯಲ್ಲಿ ಇದ್ದರು.

- - -

-3ಎಚ್.ಆರ್.ಆರ್6:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ, ಹಸಿರು ಸೇನೆ ವತಿಯಿಂದ ಗ್ರೇಡ್‌-2 ತಹಸೀಲ್ದಾರ ಪುಷ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.