ಸಾರಾಂಶ
ಮೊದಲು ಭರತ ಖಂಡದಲ್ಲಿ ವೇದ ಧರ್ಮ ಇತ್ತು. ನಂತರ ಈ ಧರ್ಮ ಬ್ರಾಹ್ಮಣ ಧರ್ಮವಾಗಿ ಮಾರ್ಪಟ್ಟಿತ್ತು. ಈ ಬ್ರಾಹ್ಮಣ ಧರ್ಮವೇ ಕಾಲಕ್ರಮೇಣ ಹಿಂದೂ ಧರ್ಮವಾಗಿ ಮಾರ್ಪಟ್ಟಿದೆ. ಈ ಸತ್ಯ ಯುವಜನಾಂಗ ಅರಿಬೇಕು ಎಂದು ಬಿ.ಆರ್. ಕೃಷ್ಣಯ್ಯ ಹೇಳಿದರು.
ಧಾರವಾಡ:
ಹಿಂದೂ ಧರ್ಮ ಅಲ್ಲ, ಅದೊಂದು ಪ್ರಾಚೀನ ಕಾಲದ ಕಾನೂನು. ಹೀಗಾಗಿ ದೇಶದ ಯುವ ಜನಾಂಗ ''''''''ಹಿಂದೂ ಧರ್ಮ'''''''' ಎಂಬ ಕಲ್ಪನೆಯಿಂದ ಮೊದಲು ಆಚೆಗೆ ಬರಬೇಕು ಎಂದು ಬೌದ್ಧ ಸಾಹಿತಿ ಬಿ.ಆರ್. ಕೃಷ್ಣಯ್ಯ ಹೇಳಿದರು.ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಭಾರತೀಯ ಬೌದ್ಧ ಮಹಾಸಭಾ (ಯುವ ಘಟಕ) ಇಲ್ಲಿಯ ರಂಗಾಯಣದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ವಿಚಾರ ಸಾಹಿತ್ಯ ದರ್ಶನ ಕಮ್ಮಟದಲ್ಲಿ ಬೌದ್ಧ ದರ್ಶನ; ಬೌದ್ಧ ದಾರ್ಶನಿಕ ದಾರಿಗಳ ಬಗ್ಗೆ ಅವರು ಮಾತನಾಡಿದರು.
ಮೊದಲು ಭರತ ಖಂಡದಲ್ಲಿ ವೇದ ಧರ್ಮ ಇತ್ತು. ನಂತರ ಈ ಧರ್ಮ ಬ್ರಾಹ್ಮಣ ಧರ್ಮವಾಗಿ ಮಾರ್ಪಟ್ಟಿತ್ತು. ಈ ಬ್ರಾಹ್ಮಣ ಧರ್ಮವೇ ಕಾಲಕ್ರಮೇಣ ಹಿಂದೂ ಧರ್ಮವಾಗಿ ಮಾರ್ಪಟ್ಟಿದೆ. ಈ ಸತ್ಯ ಯುವಜನಾಂಗ ಅರಿಯಬೇಕು ಎಂದರು.ಋಗ್ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂವರ ಉಲ್ಲೇಖವಿದೆ. ಶೂದ್ರ ಪದವೇ ಇಲ್ಲ. ಹೀಗಾಗಿ ರೂಢಿ, ಸಂಪ್ರದಾಯ ಹಾಗೂ ಧರ್ಮಶಾಸ್ತ್ರ ಸಂವಿಧಾನ ನಾಶ ಮಾಡುತ್ತಿವೆ ಎಂಬ ಡಾ. ಬಿ.ಆರ್.ಅಂಬೇಡ್ಕರ್ ಮಾತು ಸತ್ಯ ಎಂದು ಪ್ರತಿಪಾದಿಸಿದರು.
ನೀರಿನಲ್ಲಿ ಮುಳುಗುವುದರಿಂದ ಜ್ಞಾನ ಬರುವುದಾದರೆ, ಡಾಕ್ಟರ್ ಹಾಗೂ ಎಂಜನಿಯರ್ ಕಲಿಕೆ ಏಕೆ? ಭಗವಾನ್ ಬುದ್ಧನ ಮಾತಿನಂತೆ ಮೆದುಳಿಗೆ ತರಬೇತಿ ನೀಡಬೇಕು. ಇಂಥ ಅಂಧಶ್ರದ್ಧೆಯಿಂದ ಯುವಜನಾಗ ಹೊರಬೇಕು ಎಂದು ಪರೋಕ್ಷವಾಗಿ ಕುಂಭಮೇಳದ ಬಗ್ಗೆ ಬಿ.ಆರ್. ಕೃಷ್ಣಯ್ಯ ಪ್ರಸ್ತಾಪಿಸಿದರು.ಬೌದ್ಧ ಧರ್ಮ ಭಾರತದಲ್ಲಿ ಜನಿಸಿದ ಧರ್ಮ. ಜಗತ್ತಿಗೆ ನೈತಿಕ ಶಿಕ್ಷಣ ನೀಡಿದ್ದು ಬುದ್ಧ. ವಿಶ್ವದಲ್ಲಿ ಭಾರತದ ಘನತೆ ಎತ್ತಿ ಹಿಡಿಯಲು ಯುವ ಜನಾಂಗ ಬುದ್ಧನ ಬೆಳಕಿನಲ್ಲಿ ಸಾಗಬೇಕು. ಅಂಬೇಡ್ಕರ್ ಅವರನ್ನು ವಿಶ್ವಮಟ್ಟದಲ್ಲಿ ನೋಡಬೇಕು ಎಂದರು.
ರಾಜ್ಯ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಶಿಬಿರದ ನಿರ್ದೇಶಕ ಅಪ್ಪಗೆರೆ ಸೋಮಶೇಖರ, ಬೌದ್ಧ ಮಹಾಸಭಾದ ಅಧ್ಯಕ್ಷ ದರ್ಶನ ಸೋಮಶೇಖರ, ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜನ ಗೊಳಸಂಗಿ, ರಂಗಕರ್ಮಿ ಸಿದ್ದರಾಮ ಹಿಪ್ಪರಗಿ ಇದ್ದರು.