ಕನ್ನಡಪ್ರಭ ವಾರ್ತೆ ಸವದತ್ತಿ
ಧರ್ಮಪ್ರಧಾನ ದೇಶ ನಮ್ಮದಾಗಿದ್ದು, ಭಾರತದ ಆತ್ಮ ಹಿಂದುತ್ವವಾಗಿರುವದರಿಂದ ಹಿಂದುತ್ವದ ಏಳ್ಗೆಗೆ ಪಕ್ಷಾತೀತ ಪ್ರಯತ್ನಗಳು ಅತ್ಯವಶ್ಯ ಎಂದು ದೇವಾಲಯ ಸಂವರ್ಧನ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶವ್ಯಾಪಿ ವಿರಾಟ ಹಿಂದೂ ಸಮ್ಮೇಳನಗಳು ಜರುಗುತ್ತಿದ್ದು, ಎಲ್ಲರ ಕಲ್ಯಾಣವನ್ನು ಬಯಸುವ ಹಿಂದುಗಳು ಇಂದು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.
ಈ ವೇಳೆ ಜಗದೀಶ ಹಂಪಣ್ಣವರ ಮಾತನಾಡಿ, ದೇಶದಲ್ಲಿ ಇಂದು ಆಯಾ ಕುಲ ಕಸಬುಗಳ ಆಧಾರಿತವಾಗಿ ಜಾತಿಗಳು ಹುಟ್ಟಿಕೊಂಡಿದ್ದು, ನಾವೆಲ್ಲರೂ ಹಿಂದೂಗಳೇ ಎಂಬ ಮನೋಭಾವದೊಂದಿಗೆ ಬದುಕು ನಡೆಸಬೇಕು ಎಂದು ತಿಳಿಸಿದರು.ಚಿಕ್ಕುಂಬಿಯ ಅಭಿನವ ನಾಗಲಿಂಗ ಮಹಾಸ್ವಾಮೀಜಿ ಮಾತನಾಡಿ, ವೇದ ಮತ್ತು ಉಪನಿಷತ್ತುಗಳು ಹಿಂದೂ ಧರ್ಮದ ಪ್ರತೀಕ. ಸನಾತನ ಧರ್ಮದ ತಳಹದಿಯ ಮೇಲೆ ಬದುಕು ಸಾಗಿಸಬೇಕಿದೆ ಎಂದು ಹೇಳಿದರು.
ಡಾ.ನರಸಿಂಹ ಕುಲಕರ್ಣಿ ಹಾಗೂ ಸೀಮಾ ವನಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಸ್ವಾಮೀಜಿ, ಗಂಗಾಧರ ದೀಕ್ಷಿತರು, ಬಾಪು ದೀಕ್ಷಿತರು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಕಾರದಗಿ ಅಧ್ಯಕ್ಷತೆ ವಹಿಸಿದ್ದರು. ಪಲ್ಲವಿ ಪದಕಿ, ಅರವಿಂದ ಇಜಂತಕರ, ಮಯೂರ ಕಾರದಗಿ ಉಪಸ್ಥಿತರಿದ್ದರು.ಪಟ್ಟಣದಲ್ಲಿ ಎರಡು ಭಾಗದದಲ್ಲಿ ರಾಷ್ಟ್ರ ನಾಯಕರ ಭಾವಿಚತ್ರಗಳ ಶೋಭಾಯಾತ್ರೆ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ವಿರುಪಾಕ್ಷ ಮಾಮನಿ, ರತ್ನಕ್ಕ ಆನಂದ ಮಾಮನಿ, ಮಡಿವಾಳಪ್ಪ ಬಿದರಗಡ್ಡಿ, ಸಿ.ಬಿ.ದೊಡಗೌಡರ, ಪ್ರವೀಣ ಪಟ್ಟಣಶೆಟ್ಟಿ, ಜಿ.ವೈ.ಕರಮಲ್ಲಪ್ಪನವರ, ಪುಂಡಲೀಕ ಬಾಳೋಜಿ, ಮಂಜು ನಿಕ್ಕಂ, ಐ.ಪಿ.ಪಾಟೀಲ, ಅಪ್ಪು ಹೂಗಾರ, ಬಾಳಪ್ಪ ಮಡಿವಾಳರ, ಡಾ.ಅಯ್ಯನಗೌಡ ಕಬ್ಬೂರ, ಗಿರೀಶ ಬೀಳಗಿ, ಸೋಮು ಹದ್ಲಿ, ಸಂಗಯ್ಯ ಕಳ್ಳಿಮಠ, ಪ್ರಶಾಂತ ಪವಾರ, ಬಿ.ಎನ್.ಹೊಸೂರ, ಉದಯ ಹೂಗಾರ, ಅನೀಲ ಸುಣಗಾರ ಇತರರು ಉಪಸ್ಥಿತರಿದ್ದರು.