ಸಾರಾಂಶ
ಕಾರ್ಯಕರ್ತರ ಹೋರಾಟದ ಶ್ರಮ, ದೇವೇಗೌಡ ಮತ್ತು ಕುಮಾರಸ್ವಾಮಿಯವರ ಆಶೀರ್ವಾದಿಂದಾಗಿ ಮಹಾನುಭಾವರೊಬ್ಬರು ಶಾಸಕರಾದರು. ಬಹುಶಃ ಅವರಿಗೆ ಪಂಚಾಯಿತಿ ಮೆಂಬರ್ ಆಗುವ ಯೋಗ್ಯತೆಯೂ ಇರಲಿಲ್ಲ.
ರಾಮನಗರ : ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ ಮಾಡಿಕೊಡಲು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡಲು ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಹುನ್ನಾರ ನಡೆಸಿದೆ. ಇದಕ್ಕೆ ಅವಕಾಶ ನೀಡದೆ ರಾಮನಗರ ಜಿಲ್ಲೆಯ ಅಸ್ಮಿತೆ ಕಾಪಾಡಿಕೊಳ್ಳಲು ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಗೆ ತನ್ನದೇ ಆದ ಇತಿಹಾಸ ಹೊಂದಿದ್ದು, ಜಿಲ್ಲೆಯ ಅಸ್ಮಿತೆ ಕಾಪಾಡುವ ಜವಾಬ್ದಾರಿ ಪ್ರತಿ ನಾಗರಿಕರ ಮೇಲಿದೆ. ಮರು ನಾಮಕರಣಕ್ಕೆ ಸಾಕಷ್ಟು ಸಂಘಟನೆಗಳು ವಿರೋಧಿಸುತ್ತಿದ್ದು, ಅವರೆಲ್ಲರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ರಾಜಕೀಯ ಪಕ್ಷಗಳ ಜೊತೆಗೂಡಿ ದೊಡ್ಡಮಟ್ಟದಲ್ಲಿ ಶಾಂತಿಯುತ ಹೋರಾಟ ನಡೆಸುತ್ತೇವೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣದಿಂದ ಅಭಿವೃದ್ಧಿ ಆಗುತ್ತದೆ ಅಂದರೆ ನಾವೇ ಮೊದಲು ಸಹಿ ಹಾಕುತ್ತೇವೆ. ಇದರ ಹಿಂದೆ ರಿಯಲ್ ಎಸ್ಟೇಟ್ ದಂಧೆಕೋರರ ಅನುಕೂಲದ ಉದ್ದೇಶ ಅಡಗಿದೆ. ಈ ಕಾರಣದಿಂದಲೇ ಭೂಮಿಯ ಬೆಲೆ ಹೆಚ್ಚಳವಾಗಿ ಕ್ರಾಂತಿಕಾರಿ ಬದಲಾವಣೆ ಆಗುತ್ತದೆ ಎಂದು ಕಾಂಗ್ರೆಸ್ ನಾಯಕರು ಚರ್ಚಿಸುತ್ತಿದ್ದಾರೆ. ರಾಮನಗರ ಅಭಿವೃದ್ಧಿ ಆಗಿಲ್ಲ ಎನ್ನುವವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ, ಕಂದಾಯ ಭವನ, ಮಿನಿ ವಿಧಾನಸೌಧ, ಜಿಲ್ಲಾಸ್ಪತ್ರೆ ಸೇರಿ ಸರ್ಕಾರಿ ಕಟ್ಟಡಗಳನ್ನು ನೋಡಲಿ. ಜಿಲ್ಲೆ ಏನಾದರು ಅಭಿವೃದ್ಧಿ ಹೊಂದಿದ್ದರೆ ಅದಕ್ಕೆ ದೇವೇಗೌಡರ ಪರಿಶ್ರಮ ಮತ್ತು ಕುಮಾರಸ್ವಾಮಿ ಪರಿಕಲ್ಪನೆ ಕಾರಣ. ಇದೆಲ್ಲವೂ ಜನರ ಮನಸ್ಸಿನಲ್ಲಿದ್ದು, ಅದೆಲ್ಲವನ್ನು ಅಳಿಸಲು ಆಗುವುದಿಲ್ಲ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜಕೀಯ ಲಾಭಕ್ಕಾಗಿ ರಾಮನಗರ ಜಿಲ್ಲೆ ಹೆಸರು ಇಡಲಿಲ್ಲ. ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಜನರ ಸಮಸ್ಯೆಗಳಿಗೆ ಮನೆ ಬಾಗಿಲಿಗೆ ಪರಿಹಾರ ಕಲ್ಪಿಸಿದರು. ಅವರ ಕಲ್ಪನೆಗೆ ಬಿಜೆಪಿ ನಾಯಕರು ಕೈಜೋಡಿಸಿದ್ದರಿಂದಲೇ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗಿವೆ. ಈಗಿನವರಂತೆ ರಾಜಕೀಯ ಹಾಗೂ ಸ್ವಂತ ಲಾಭಕ್ಕಾಗಿ ಕೆಲಸ ಮಾಡಿದವರಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆ ಹೆಸರನ್ನು ಅಷ್ಟು ಸುಲಭವಾಗಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನರ ವೋಟರ್ ಐಡಿ, ಆಧಾರ್, ಗ್ಯಾಸ್ ಬುಕ್, ಕಂದಾಯ ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳು ಬದಲಾಗಬೇಕಾಗುತ್ತದೆ. ಇದಕ್ಕಾಗಿ ಐದು ತಾಲೂಕಿನ ಜನ ಸಾಮಾನ್ಯರು ತಾಲೂಕು ಕಚೇರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಆ ಕಚೇರಿಗಳಲ್ಲಿ ಈಗಲೇ ಕೆಲಸಗಳು ಆಗುತ್ತಿಲ್ಲ. ಮರುನಾಮಕರಣವಾದ ಮೇಲೆ ಜನರ ಪರಿಸ್ಥಿತಿ ಹೇಳ ತೀರದಂತಾಗುತ್ತದೆ ಎಂದರು.
ಈಗಿನ ಕೂಪನ್ ಶಾಸಕರು ರಾಮನ ಬಗ್ಗೆ ಗೌರವ, ಪ್ರೀತಿ ಇದೆ ಎಂದೆಲ್ಲ ಚರ್ಚೆ ಮಾಡುತ್ತಿದ್ದಾರೆ. ರಾಮಮಂದಿರ ಲೋಕಾರ್ಪಣೆ ಕಾರ್ಯದಲ್ಲಿ ಭಾಗವಹಿಸದೆ ಕಾಂಗ್ರೆಸ್ ವಿರೋಧಿಸಿದ್ದು ಜಗಜ್ಜಾಹಿರಾಗಿದೆ. ನಿಮ್ಮ ರಾಷ್ಟ್ರೀಯ ನಾಯಕರು ಒಂದು ಸಮುದಾಯವನ್ನು ಓಲೈಕೆ ಮಾಡಲು ಹಿಂದೂಗಳನ್ನು ವಿರೋಧಿಸುವ ಸನ್ನಿವೇಶ ಸೃಷ್ಟಿ ಮಾಡುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಾವಣೆ ಮಾಡಿದರೆ, ಮುಂದೊಂದು ದಿನ ತಾಲೂಕಿಗೂ ರಾಮನಗರ ಎನ್ನುವ ಹೆಸರು ತೆಗೆದು ರಾಮ ಜಾಗದಲ್ಲಿ ಬೇರೊಂದು ಹೆಸರು ಸೇರಿಸುವ ಆತಂಕವೂ ಕಾಡುತ್ತಿದೆ ಎಂದು ಟೀಕಿಸಿದರು.
ಹಾಲಿ-ಮಾಜಿ ಶಾಸಕರಿಗೆ ನಿಖಿಲ್ ಸವಾಲು:
ಕಾರ್ಯಕರ್ತರ ಹೋರಾಟದ ಶ್ರಮ, ದೇವೇಗೌಡ ಮತ್ತು ಕುಮಾರಸ್ವಾಮಿಯವರ ಆಶೀರ್ವಾದಿಂದಾಗಿ ಮಹಾನುಭಾವರೊಬ್ಬರು ಶಾಸಕರಾದರು. ಬಹುಶಃ ಅವರಿಗೆ ಪಂಚಾಯಿತಿ ಮೆಂಬರ್ ಆಗುವ ಯೋಗ್ಯತೆಯೂ ಇರಲಿಲ್ಲ. ಅಂತಹವರು ಶಾಸಕರಾಗಿ ಆಯ್ಕೆಯಾದರು. ಇಂದು ಅವರೇ ರಾಮನಗರ ಜಿಲ್ಲೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನೆ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಜಿಲ್ಲೆಗೆ ಕಾಲಿಟ್ಟ ಮೇಲೆ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಕಳೆದ 15 ತಿಂಗಳಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ. ಏನೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಹೇಳಲಿ ಎಂದು ಶಾಸಕ ಇಕ್ಬಾಲ್ ಹುಸೇನ್ ಮತ್ತು ಮಾಜಿ ಶಾಸಕ ಕೆ.ರಾಜು ಅವರಿಗೆ ನಿಖಿಲ್ ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ , ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ, ಉಮೇಶ್ , ಶಂಕರಯ್ಯ, ನರಸಿಂಹಯ್ಯ, ಶಂಕರಯ್ಯ, ಪಾಂಡು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುರಳೀಧರ್ ಇದ್ದರು.