ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದಲ್ಲಿ ಆಟೋಗಳಿಗೆ ಗ್ಯಾಸ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಸಾವಿರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾನ್ಯವಾಗಿ ಸುಲಭವಾಗಿ ದೊರೆಯಬೇಕಾದ ಸಿಎನ್‌ಜಿ ಮತ್ತು ಆಟೋ ಎಲ್‌ಪಿಜಿ ಗ್ಯಾಸ್ ಲಭ್ಯವಾಗದೇ, ಚಾಲಕರು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಪ್ರಮುಖ ಆರ್‌ಟಿಒ ವೃತ್ತದ ಸಮೀಪದಲ್ಲಿರುವ ಶಿಲ್ಪಾ ಗೋ ಗ್ಯಾಸ್‌ ಪಂಪ್ ಬಳಿ ನೋ ಸ್ಟಾಕ್ ಎಂಬ ನಾಮಫಲಕ ಅಳವಡಿಸಿರುವುದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಒಂದು ಪಂಪ್ ಮಾತ್ರವಲ್ಲದೆ, ನಗರದ ಹಲವು ಗ್ಯಾಸ್ ಬಂಕ್‌ಗಳಲ್ಲೂ ಇದೇ ಪರಿಸ್ಥಿತಿ ಎದುರಾಗುತ್ತಿದೆ ಎಂದು ಚಾಲಕರು ದೂರಿದ್ದಾರೆ.

ಇನ್ನೊಂದೆಡೆ, ಜಿಲ್ಲಾಡಳಿತವು ನಗರದಲ್ಲಿ ಗ್ಯಾಸ್ ಕೊರತೆ ಇಲ್ಲ ಎಂದು ಹೇಳಿಕೆ ನೀಡಿದರೂ, ಬಂಕ್‌ಗಳ ಮುಂದೆ ನೋ ಸ್ಟಾಕ್ ಫಲಕಗಳು ಕಾಣಿಸುತ್ತಿರುವುದರಿಂದ ಆಡಳಿತದ ಹೇಳಿಕೆ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ ನಡುವೆಯೇ ಕೆಲವು ಪಂಪ್‌ಗಳಲ್ಲಿ ದರ ಹೆಚ್ಚಳ ಮಾಡಿರುವುದೂ ಚಾಲಕರಿಗೆ ಮತ್ತೊಂದು ಹೊರೆ ಆಗಿದೆ. ದಿನನಿತ್ಯದ ಆದಾಯದ ಮೇಲೆ ಬದುಕುತ್ತಿರುವ ಆಟೋ ಚಾಲಕರಿಗೆ ಇಂಧನ ವೆಚ್ಚ ಏರಿಕೆ ನೇರವಾಗಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡುತ್ತಿದೆ.

ನಗರದಲ್ಲಿ ಒಟ್ಟು ಆರು ಗ್ಯಾಸ್ ಪಂಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಮರ್ಪಕ ಸರಬರಾಜಿನ ಕೊರತೆಯಿಂದ ಅವುಗಳ ಪ್ರಯೋಜನ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಒಂದೆರಡು ಪಂಪ್‌ಗಳ ಮೇಲಿನ ಅವಲಂಬನೆ ಹೆಚ್ಚಾಗಿ, ದೀರ್ಘ ಸಾಲುಗಳು ಹಾಗೂ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. ಗ್ಯಾಸ್ ಸರಬರಾಜು ಸುಗಮಗೊಳಿಸಲು ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿ, ಪಂಪ್‌ಗಳ ಮೇಲ್ವಿಚಾರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.