ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರ ಕಠಿಣ ಕಾಯ್ದೆ ಜಾರಿಗೆ ತಂದರೂ, ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ನಿಂತಿಲ್ಲ. ತುಮಕೂರಿನ ಹರಚನಹಳ್ಳಿಯಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದರೆ, ಬೆಳಗಾವಿಯ ಅಲಖನೂರ ಗ್ರಾಮದಲ್ಲಿ ಫೈನಾನ್ಸ್‌ ನವರು ಮನೆ ಸೀಜ್‌ ಮಾಡಿದ್ದು, ಹಸುಗೂಸು, ಬಾಣಂತಿ ಮನೆಯ ಹೊರಗೆ ಚಳಿ-ಬಿಸಿಲಲ್ಲಿ ರಾತ್ರಿ-ಹಗಲು ಕಳೆಯುವಂತಾಗಿದೆ.₹5 ಲಕ್ಷ ಸಾಲಕ್ಕೆ ₹6 ಲಕ್ಷ ಬಡ್ಡಿ!:

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹರಚನಹಳ್ಳಿ ಕಾಲೋನಿಯಲ್ಲಿ ಶನಿವಾರ ಫೈನಾನ್ಸ್‌ ಸಂಸ್ಥೆಯ ಕಿರುಕುಳ ತಾಳಲಾರದೆ ಮಂಜುಳಾ (55) ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್‌ನಲ್ಲಿ ₹10 ಲಕ್ಷ ಸಾಲ ಪಡೆದಿದ್ದ ಮಂಜುಳಾ, ಈಗಾಗಲೇ ₹5 ಲಕ್ಷ ಸಾಲ ಮರುಪಾವತಿ ಮಾಡಿದ್ದರು. ಪತಿ ಗಂಗಾಧರ್‌ಗೆ ಅನಾರೋಗ್ಯ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಕೆಲ ತಿಂಗಳು ಸಾಲದ ಕಂತು ಕಟ್ಟಲು ಆಗಿರಲಿಲ್ಲ. ಈಗ ಬಡ್ಡಿ ಸಮೇತ ₹11 ಲಕ್ಷ ಕಟ್ಟುವಂತೆ ಫೈನಾನ್ಸ್‌ನವರು ಕಿರುಕುಳ ಕೊಡುತ್ತಿದ್ದು, ಇದರಿಂದ ಮನನೊಂದು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಸುಗೂಸು ಹೊರಕ್ಕೆ:

ಈ ಮಧ್ಯೆ, ಇದೇ ಕಂಪನಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಕಂತು ಕಟ್ಟುವುದು ತಡವಾಗಿದ್ದಕ್ಕೆ ಗ್ರಾಹಕರೊಬ್ಬರ ಮನೆ ಸೀಜ್ ಮಾಡಿದ್ದು, ಮೂರು ತಿಂಗಳ ಹಸುಗೂಸು ಹಾಗೂ ಬಾಣಂತಿ ಸಮೇತ ಐದು ಮಂದಿ ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಬಟ್ಟೆ, ಹಾಸಿಗೆ, ಅಡುಗೆ ಸಾಮಗ್ರಿಗಳು ಮನೆಯೊಳಗೇ ಉಳಿದಿದ್ದು, ಕೊರೆಯುವ ಚಳಿಯ ಮಧ್ಯೆ ಮೂರು ತಿಂಗಳ ಹಸುಗೂಸು, ಬಾಣಂತಿ ಶ್ರೀದೇವಿ ಪಾಟೀಲ್ ಸೇರಿದಂತೆ ಐವರು ಮನೆ ಹೊರಗೇ ರಾತ್ರಿ ಕಳೆಯುತ್ತಿದ್ದಾರೆ. ಊಟವಿಲ್ಲದೆ ಸೀಜ್ ಆದ ಮನೆಯ ಕಟ್ಟೆ ಮೇಲೆಯೇ ಮಲಗಿ ಕಾಲ ಕಳೆದಿದ್ದಾರೆ.


ಹನುಮಂತ ಪಾಟೀಲ್ ಎಂಬುವರು ತಮ್ಮ ತಂದೆ ಶ್ರೀಕಾಂತ್ ಪಾಟೀಲ್ ಅವರ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಸುಮಾರು ₹20 ಲಕ್ಷ ಸಾಲ ಪಡೆದಿದ್ದರು. ಕಳೆದ ವರ್ಷ ಅವರ ತಂದೆ ನಿಧನರಾಗಿದ್ದು, ಹನುಮಂತ ಪಾಟೀಲ್ ಅವರಿಗೂ ಆರೋಗ್ಯ ಸಮಸ್ಯೆ ಉಂಟಾಗಿದ್ದರಿಂದ ಕಳೆದ ಏಳು ತಿಂಗಳಿಂದ ಕಂತುಗಳನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಸುಮಾರು ₹7 ಲಕ್ಷ ರೂಪಾಯಿ ಬಾಕಿ ಉಳಿದಿರುವುದರಿಂದ ಮನೆ ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಾಲ, ಸಬ್ಸಿಡಿ ಹೆಸರಲ್ಲಿ ವಂಚನೆ:

ಈ ಮಧ್ಯೆ, ನಿಗದಿತ ಠೇವಣಿ (ಎಫ್‌ಡಿ) ಮೇಲೆ ಹೆಚ್ಚಿನ ಮೊತ್ತದ ಸಾಲ ಹಾಗೂ ಸಬ್ಸಿಡಿ ಕೊಡಿಸುವುದಾಗಿ ಹೇಳಿ 350ಕ್ಕೂ ಹೆಚ್ಚು ಗ್ರಾಹಕರಿಂದ ₹3 ಕೋಟಿಗೂ ಹೆಚ್ಚು ಹಣ ಪಡೆದು, ವಂಚಿಸಿರುವ ಸೂರ್ಯೋದಯ ಸ್ಮಾಲ್ ಫೈನಾನ್ಸ್‌ನ ಬ್ಯಾಂಕ್ ಮ್ಯಾನೇಜರ್‌ ಎಚ್.ಎಸ್.ಪೂಜಾ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.