ಜೈನ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬವಾದ ದಶಲಕ್ಷಣ ಪರ್ವವನ್ನು ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ
ಮುಳಗುಂದ: ಧರ್ಮಗಳ ಅಂತರಂಗ ತಿಳಿದುಕೊಂಡಾಗ ನಾವು ಎಲ್ಲರೂ ಒಂದೇ ಎನ್ನುವ ಮನೋಭಾವ ಕಾಣುತ್ತೇವೆ. ಅದೇ ಮನೋಭಾವವನ್ನು ಜೈನ ಸಮಾಜದಲ್ಲಿಯೂ ಕಾಣುತ್ತೇವೆ. ಜೈನ ಸಮುದಾಯದ ವಿಶೇಷತೆ ಎಂದರೆ ವೈರಾಗ್ಯ, ಅಹಿಂಸೆ ಜಗತ್ತಿಗೆ ನೀಡಿದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ ಎಂದು ಪ್ರಾಚಾರ್ಯ ಡಾ. ರಮೇಶ ಕಲ್ಲನಗೌಡ ಹೇಳಿದರು.
ಪಟ್ಟಣದ ದೇಶಪಾಂಡೆ ಅವರ ವಾಡೆಯಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದಿಂದ ದಶಲಕ್ಷಣ ಪರ್ವದಂಗವಾಗಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉತ್ತಮ ಮಾರ್ಧವ ಧರ್ಮ ಕುರಿತು ಉಪನ್ಯಾಸ ನೀಡಿದ ಅವರು, ಜೈನ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬವಾದ ದಶಲಕ್ಷಣ ಪರ್ವವನ್ನು ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ ಎಂದರು.10 ದಿನ ನಡೆಯುವ ಈ ಪರ್ವದಲ್ಲಿ ಕ್ಷಮಾ, ಮಾರ್ಧವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ ಹಾಗೂ ಬ್ರಹ್ಮಚರ್ಯ ಎಂಬ ಹತ್ತು ಧರ್ಮಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆತ್ಮೋನ್ನತಿ ಸಾಧಿಸುವುದು ದಶಲಕ್ಷಣ ಪರ್ವದ ಪ್ರಮುಖ ಆಶಯವಾಗಿದೆ ಎಂದು ತಿಳಿದರು.
ದಶಲಕ್ಷಣದ ಪರ್ವ ಎಂದರೆ ಭೋಗದಿಂದ ತ್ಯಾಗದ ಕಡೆಗೆ ಹೋಗುವುದು. ವಿಕಾರ ಭಾವ ತ್ಯಜಿಸಿ, ಉದಾತ್ತ ಭಾವ ಬೆಳೆಸಿಕೊಳ್ಳುವ ಸಂದೇಶವಾಗಿದೆ ಎಂದ ಅವರು, ಮಾರ್ಧವತೆ ನಮ್ಮಲ್ಲಿ ಬರಬೇಕಂದರೆ ಮೊದಲು ಅಹಂಕಾರ ಬಿಟ್ಟು ಜೀವನದಲ್ಲಿ ಸರಳತೆ ರೂಢಿಸಿಕೊಳ್ಳಬೇಕು ಎಂದರು.ಈ ವೇಳೆ ಎನ್.ಆರ್. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಬಸವರಾಜ ಸುಂಕಾಪುರ, ಪಿ.ಜಿ. ನಾವಳ್ಳಿ, ಭೋಜರಾಜ ನಾವಳ್ಳಿ ಸೇರಿ ಜಿಲ್ಲಾ ದಿಗಂಬರ ಜೈನ ಸಂಘದ ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು, ಮಹಿಳೆಯರು ಇದ್ದರು.