ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುಖ್ಯಮಂತ್ರಿ ಸಿದ್ದರಾಮ್ಯಯ ಮಹತ್ವದ ಮತ್ತೊಂದು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಸರ್ಕಾರಗಳು ಮಂಡಿಸುವ ಬಜೆಟ್ ಗಳು ಬೇರೆ ಜಿಲ್ಲೆಗೆ ಏನಾದರೂ ಅನುಕೂಲ ಮಾಡಿಕೊಟ್ಟಿರಬಹುದು, ಅಲ್ಲಿನ ಜನರಲ್ಲಿ ಹೊಸ ಬದುಕಿನ ಭರವಸೆ ಮೂಡಿಸಿರ ಬಹುದು. ಆದರೆ ಚಿತ್ರದುರ್ಗದ ಮಟ್ಟಿಗೆ ಬಜೆಟ್ ಅಂದ್ರೆ ಸುಳ್ಳುಗಳ ಮೂಟೆ ಎಂಬಂತಾಗಿದೆ. ಏನು ಘೋಷಣೆ ಮಾಡಲಾಗಿತ್ತು ಎಂದು ಸಿಎಂ ಗಮನಿಸುವುದಿಲ್ಲ, ಏನಾಗಬೇಕಿತ್ತು ಎಂಬುದರ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ಕೋಟೆ ನಾಡು ಅವಕೃಪೆಗೆ ಒಳಗಾಗಿದೆ.ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಐದು ಕಡೆ ಚಿತ್ರದುರ್ಗದ ಹೆಸರು ಪ್ರಸ್ತಾಪ ಮಾಡಿ ಪ್ರಮುಖ ಘೋಷಣೆಗಳ ಮಾಡಲಾಗಿತ್ತು. ಚಿತ್ರದುರ್ಗದಲ್ಲಿ ಟ್ರಾಮಾ ಕೇರ್ ಸ್ಥಾಪನೆ, ಮೊಳಕಾಲ್ಮೂರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, 30ಕೆರೆ ತುಂಬಿಸಲು 2,611 ಕೋಟಿ ರು. ಅನುದಾನ, 12 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಪರೀಕ್ಷಾ ಪಥ ಹಾಗೂ ಹೊಸ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ಸ್ಥಾಪನೆ ಪ್ರಮುಖ ಘೋಷಣೆಗಳಾಗಿದ್ದವು. ಒಂದು ವರ್ಷದ ಅವಧಿಯಲ್ಲಿ ಸೌಜನ್ಯಕ್ಕಾದರೂ ಘೋಷಣೆಗಳ ಕಡೆ ತಿರುಗಿ ನೋಡಲಾಗಿಲ್ಲ. ಸುಳ್ಳೇ ಸುಳ್ಳು, ಇಲ್ಲಿ ಎಲ್ಲಾ ಸುಳ್ಳು ಎಂಬಂತಾಗಿದೆ.
ಚಿತ್ರದುರ್ಗ ಪ್ರಮುಖ ಅಪಘಾತ ವಲಯವಾದ್ದರಿಂದ ಸಹಜವಾಗಿಯೇ ಟ್ರಾಮಾ ಕೇರ್ ಸ್ಥಾಪನೆ ಭರವಸೆ ನೀಡಲಾಗಿತ್ತು. ಸರ್ಕಾರಿ ಮೆಡಿಕಲ್ ಕಾಲೇಜು ಕಾರ್ಯಾರಂಭ ಮಾಡಿರುವುದರಿಂದ ಟ್ರಾಮಾ ಕೇರ್ ಸೆಂಟರ್ ಆರಂಭಕ್ಕೆ ಎದುರಾದ ಅಡ್ಡಿಯಾದರೂ ಏನು ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಮೊದಲ ಘೋಷಣೆಯೇ ಮೂಲೆ ಗುಂಪಾಗಿದೆ. ಮೊಳಕಾಲ್ಮೂರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ ಕೂಡಾ ಇದೇ ಹಾದಿ ಹಿಡಿದಿದೆ. ಹಿಂದೊಮ್ಮೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಆದರೆ ಆಸ್ಪತ್ರೆ ಕನಸು ನನಸಾಗಿಲ್ಲ. ಗಡಿ ತಾಲೂಕಾದ ಮೊಳಕಾಲ್ಮೂರು ಜನತೆಗೆ ಆಸ್ಪತ್ರೆ ತುರ್ತಾಗಿ ಬೇಕಿದೆ. ಇಲ್ಲಿಯವರು ಸಣ್ಣಪುಟ್ಟ ಖಾಯಿಲೆಗೂ ಬಳ್ಳಾರಿ ಅವಲಂಬಿಸುವಂತಾಗಿದೆ.ಜಿಲ್ಲೆಯ 30 ಕೆರೆ ತುಂಬಿಸಲು 2,611 ಕೋಟಿ ರು. ಅನುದಾನ ಘೋಷಿಸಲಾಗಿತ್ತಾದರೂ ಈ ವರೆಗೆ ಆ ಕೆರೆಗಳು ಯಾವುವು ಎಂಬುದೇ ಬಹಿರಂಗಗೊಂಡಿಲ್ಲ. ಭದ್ರಾ ಮೇಲ್ದಂಡೆಯಡಿ 367 ಕೆರೆಗಳ ತುಂಬಿಸಲಾಗುತ್ತಿದೆ. ಅವುಗಳೇನಾದರೂ ಸೇರಿವೆಯಾ ಎಂಬುದಕ್ಕೂ ಖಚಿತತೆಗಳಿಲ್ಲ. ಹೊಸ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ಸ್ಥಾಪನೆ ಇದೇ ಹಾದಿ ಹಿಡಿದಿದ್ದು ಭರವಸೆ ಮೂಡಿಸಿಲ್ಲ. 12 ಕೋಟಿ ರು. ವೆಚ್ಚದಲ್ಲಿ ಸ್ವಯಂ ಚಾಲಿತ ಪರೀಕ್ಷಾ ಪಥಕ್ಕೆ ಜಾಗ ಗುರುತಿಸಲಾಗಿದೆ ಎಂಬುದು ಸಮಾಧಾನಕರ ಸಂಗತಿ.
ಚಿತ್ರದುರ್ಗ ಜಿಲ್ಲೆಯಲ್ಲಿ ಹಾಲಿ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ್ದೇ ಸುದ್ದಿ. ರೈತ ಸಂಘಟನೆಗಳು ಅನುದಾನಕ್ಕೆ ಆಗ್ರಹಿಸಿ ಬೀದಿಗಿಳಿದಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶಗಳ ಮಳೆಗರೆಯುತ್ತಿದ್ದಾರೆ. ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು 300 ಕೋಟಿ ರು. ಅನುದಾನಕ್ಕಾಗಿ ಕಳೆದ ಎರಡುವರೆ ತಿಂಗಳಿನಿಂದ ಸರ್ಕಾರದ ಮುಂದೆ ಜಿಲ್ಲೆಯ ಜನ ಪ್ರತಿನಿಧಿಗಳು ಗೋಗರೆಯುತ್ತಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕೇಳಿಸಿಕೊಂಡಿಲ್ಲ. ಇನ್ನು ಸಾವಿರಾರು ಕೋಟಿ ರು. ಅನುದಾನ ನೀಡುವ ಔದಾರ್ಯ ತೋರುತ್ತದೆಯೇ ಎಂಬ ಅನುಮಾನಗಳು ಮೂಡಿವೆ. ಭದ್ರಾ ಮೇಲ್ದಂಡೆಗೆ ಇದುವರೆಗೆ 11,409 ಕೋಟಿ ರು. ಖರ್ಚಾಗಿದ್ದು ಪೂರ್ಣಗೊಳ್ಳಲು 10 ಸಾವಿರ ಕೋಟಿ ಅನುದಾನ ಬೇಕಿದೆ.ಈ ಬಾರಿಯ ಬಜೆಟ್ ನಿರೀಕ್ಷೆಗಳು:
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಕನಿಷ್ಟ 4 ಸಾವಿರ ಕೋಟಿ ರು. ಅನುದಾನ. ವಿವಿ ಸಾಗರದ ಜಲಾಶಯ ಭರ್ತಿಯಾದಾಗ ಹಿನ್ನೀರಿನಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಫಸಲಿಗೆ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ಈಗಾಗಲೇ ತಜ್ಞರು ವಿವಿ ಸಾಗರ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಅಳವಡಿಸುವ ಪ್ರಸ್ತಾಪ ಮಾಡಿದ್ದು ಶೀಘ್ರ ಕಾರ್ಯಗತಗೊಳಿಸಬೇಕಿದೆ.
