ಮಲೆನಾಡು ಜನಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಗೋಳಿತೊಟ್ಟು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆಯಿತು.

ಉಪ್ಪಿನಂಗಡಿ : ಮಲೆನಾಡು ಜನಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಗೋಳಿತೊಟ್ಟು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆಯಿತು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ , ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ಇದೊಂದು ಗಂಭೀರ ವಿಚಾರವಾಗಿದ್ದು ಪಶ್ಚಿಮ ಘಟ್ಟ ಪ್ರದೇಶ ಸೂಕ್ಷ್ಮ ವಲಯ ಎಂದು ಘೋಷಣೆಯಾದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಲಿದೆ. ರಸ್ತೆ ಸಂಚಾರವೂ ಬಂದ್ ಆಗುವುದರಿಂದ ಕುಗ್ರಾಮವಾಗಲಿದೆ. ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂಬ ನಿಟ್ಟಿನಲ್ಲಿ ಈ ಸಲ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ಈ ಭಾಗದ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು. ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ದಿಡುಪೆಯಿಂದ ಮಡಪ್ಪಾಡಿ ತನಕ ಗಡಿ ಗುರುತು ಮಾಡಿ ಪಶ್ಚಿಮ ಘಟ್ಟ ಹಾಗೂ ಜನವಸತಿ ಪ್ರದೇಶ ಪ್ರತ್ಯೇಕಗೊಳಿಸಬೇಕು. ಯೋಜನೆ ವಿರುದ್ಧ ಈ ತಿಂಗಳ ಕೊನೆಯಲ್ಲಿ ಕಡಬದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. ಮುಂದೆ ಜನವರಿ ತಿಂಗಳಲ್ಲಿ ಸಹಾಯಕ ಆಯುಕ್ತರ ಕಚೇರಿ ಚಲೋ ಹಾಗೂ ಆ ಬಳಿಕ ಗುಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು. ಇಲ್ಲಿಗೆ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಬಂದು ಮನವಿ ಸ್ವೀಕರಿಸಬೇಕು. ಅವರು ಬಾರದೇ ಇದ್ದಲ್ಲಿ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ನಿಟ್ಟಿನಲ್ಲಿ ಇದೊಂದು ರೈತ ಚಳವಳಿ ಆಗುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಹೋರಾಟಕ್ಕೆ ಬೇಕು ಬಲ: ನಾಸೀರ್ ಹೊಸಮನೆ ಮಾತನಾಡಿ, ಈ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಮಾಜಿ ಸದಸ್ಯ ನೀಲಪ್ಪ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಂತ ಅಂಬರ್ಜೆ ಸ್ವಾಗತಿಸಿ, ನಿರೂಪಿಸಿದರು. ಬಾಲಕೃಷ್ಣ ಆಲಂತಾಯ ವಂದಿಸಿದರು. ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ತೆರನಾದ ಪ್ರತಿಭಟನೆಯನ್ನು ಕೌಕ್ರಾಡಿ, ನೆಲ್ಯಾಡಿ ಗ್ರಾಮ ಪಂಚಾಯತ್ ಕಚೇರಿಗಳ ಮುಂಭಾಗದಲ್ಲಿ ನಡೆಸಲಾಯಿತು.