ಹಿರೇಕೆರೂರು ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಬನಶಂಕರಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ನೆರವೇರಿತು.

ಹಿರೇಕೆರೂರು: ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಬನಶಂಕರಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ನೆರವೇರಿತು.ರಥೋತ್ಸವದ ನಿಮಿತ್ತ ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ, ದೇವಿಯ ಮೂರ್ತಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು.ವಿವಿಧ ಬಗೆಯ ಹೂವುಗಳು, ನಿಶಾನೆಗಳಿಂದ ಸುಂದರವಾಗಿ ಅಲಂಕರಿಸಿದ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ರಥದಲ್ಲಿ ಶ್ರೀ ಬನಶಂಕರಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗುಗ್ಗಳ ಮಹೋತ್ಸವದೊಂದಿಗೆ ರಥೋತ್ಸವ ಜಯಘೋಷಗಳೊಂದಿಗೆ ಭಕ್ತಿ ಭಾವದಿಂದ ದೇವಸ್ಥಾನದಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ ವರೆಗೆ ಸಾಗಿ ಪುನಃ ಅದೇ ಮಾರ್ಗವಾಗಿ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.ಭಕ್ತರು ರಥ ಸಂಚರಿಸುವ ಮಾರ್ಗದಲ್ಲಿ ನೀರು, ರಂಗೋಲಿ ಹಾಕಿ ಭಕ್ತಿಯಿಂದ ಸ್ವಾಗತಿಸಿ, ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಸಮರ್ಪಿಸಿ ಭಕ್ತಿಯಿಂದ ನಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ನಂತರ ಅನ್ನ ಸಂತರ್ಪಣೆ ನಡೆಯಿತು.ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಯು.ಬಿ. ಬಣಕಾರ, ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಅನೇಕ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಬೆಳೆಸಿ ಉಳಿಸಿಕೊಂಡು ಬಂದಿದ್ದೇವೆ. ಈ ನಿಟ್ಟಿನಲ್ಲಿ ಹಬ್ಬ ಹರಿದಿನಗಳು, ರಥೋತ್ಸವಗಳು ನಮ್ಮ ಭಕ್ತಿಯ ಭಾಗವಾಗಿ ಹಾಸು ಹೊಕ್ಕಾಗಿವೆ. ಇಂದು ನಾವೆಲ್ಲ ಬನಶಂಕರಿ ದೇವಿಯ ಸಂಭ್ರಮದಲ್ಲಿ ನಾವೆಲ್ಲರೂ ಇದ್ದು, ಪಾರ್ವತಿ ದೇವಿಯ ಅವತಾರವಾಗಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಣೆ ಮಾಡುವ ಬನಶಂಕರಿ ದೇವಿ ನಾಡಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.