ಹುಬ್ಬಳ್ಳಿ:

ತಾಲೂಕಿನ ನೂಲ್ವಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯನ್ನು ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆಯಡಿ ಮುಚ್ಚಲು ನಿರ್ಧರಿಸಿರುವುದನ್ನು ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು. ಗ್ರಾಮದ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿ ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು ಅಲ್ಲದೇ, ಈ ಯೋಜನೆಯಡಿ ರಾಜ್ಯದಲ್ಲಿ 40 ಸಾವಿರ ಸರ್ಕಾರಿ ಶಾಲೆ ಮುಚ್ಚಲು ನಿರ್ಧರಿಸಿದೆ. ಅದರಲ್ಲಿ ನೂಲ್ವಿ ಶಾಲೆಯೂ ಒಂದು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶರಣಬಸವ ಗೋನವಾರ ಮಾತನಾಡಿ, ಅದರಗುಂಚಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ನೂಲ್ವಿಯ ಗಂಡು ಮಕ್ಕಳ ಶಾಲೆ, ಹೆಣ್ಣು ಮಕ್ಕಳ ಶಾಲೆ, ಉರ್ದು ಶಾಲೆ, ಪ್ಲಾಟ್‌ನ ಸರ್ಕಾರಿ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ. ಈ ಮೂಲಕ ಸರ್ಕಾರವು ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮುದಾಯದ ನಡುವೆ ಇರುವ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ಕಳುಹಿಸುವುದು ಎಷ್ಟು ಸರಿ. ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದೆಂದು ಸರ್ಕಾರ ಹೇಳುತ್ತಿದೆ. ಮತ್ತೊಂದೆಡೆ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.

ಇದೇ ವೇಳೆ ನೂಲ್ವಿ ಸರ್ಕಾರಿ ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ದೀಪಾ, ಶಿವಕುಮಾರ, ದ್ಯಾಮವ್ವ, ರೇಷ್ಮಾ ಮಂಜುಳಾ, ಉಸ್ಮಾನ್, ರಾಕೇಶ್ ನಸ್ರಿನ್, ಶಶಿಕಲಾ ಮೇಟಿ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.

ಮಳೆಯಿಂದ ಮುನ್ನೆಚ್ಚರಿಕೆ ವಹಿಸಿ


ಧಾರವಾಡ:ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಗೆ 12 ದೊಡ್ಡ ಜಾನುವಾರು, 70 ಸಣ್ಣ ಜಾನುವಾರು ಮೃತಪಟ್ಟಿದ್ದು, ಇದೀಗ ಮುಂಗಾರು ಮಳೆ ಆರಂಭವಾಗಿದೆ. ಆದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ತಿಳಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಪೂರ್ವ ಮುಂಗಾರಿನಲ್ಲಿ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಗುಡುಗು ಸಿಡಿಲಿನಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಸಿಡಿಲು ಬಡಿಯುವ ವೇಳೆ ಸಮಯದಲ್ಲಿ ಶಾವರ್ ಕೆಳಗಡೆ ಸ್ನಾನ ಮಾಡುವುದು, ನಲ್ಲಿಯಿಂದ ಬರುವ ನೀರಿನಿಂದ ಕೈ ತೊಳೆಯುವುದು, ಪಾತ್ರೆ ತೊಳೆಯುವಂತಹ ಕೆಲಸ ಮಾಡಬಾರದು. ಮಳೆ ಬೀಳುವ ಸಮಯದಲ್ಲಿ ಕಿಟಕಿ ಬಾಗಿಲಲ್ಲಿ ನಿಲ್ಲಬಾರದು. ಕಿಟಕಿ ಬಾಗಿಲು ಮುಚ್ಚಬೇಕು. ವಿಶಾಲವಾದ ಮೈದಾನದಲ್ಲಿ ಇದ್ದರೆ, ಮರಗಳಿಂದ ದೂರವಾಗಿ, ತಗ್ಗಿರುವ ಪ್ರದೇಶಗಳಲ್ಲಿ ಕೂತು ತಲೆಯನ್ನು ಮೊಣಕಾಲಿನ ಮಧ್ಯೆ ಇರಿಸಿ. ಕಣ್ಣು, ಕಿವಿ ಮುಚ್ಚಿಕೊಳ್ಳಿ. ಸಿಡಿಲು ಬಡಿಯುವುದರಿಂದ ಆ ಬೆಳಕು ಮತ್ತು ಶಬ್ದದಿಂದ ಕಿವಿ ಮತ್ತು ಕಣ್ಣು ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಸಲಹೆ ನೀಡಿದರು.