ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಪಿಆರ್‌ಒ, ಎಪಿಆರ್‌ಒಗೆ ತರಬೇತಿ

| Published : May 23 2024, 01:14 AM IST / Updated: May 23 2024, 11:56 AM IST

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಪಿಆರ್‌ಒ, ಎಪಿಆರ್‌ಒಗೆ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಜಿಲ್ಲೆಯ ಎಲ್ಲ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ತರಬೇತಿ ಕಾರ್ಯಕ್ರಮ ನಡೆಯಿತು.

 ಕೊಪ್ಪಳ :  ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಜಿಲ್ಲೆಯ ಎಲ್ಲ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ತರಬೇತಿ ಕಾರ್ಯಕ್ರಮ ನಡೆಯಿತು.

ಜಿಲ್ಲೆಯ ಎಲ್ಲ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೆನರ್ ವಿದ್ಯಾಧರ ಮೇಘರಾಜ ತರಬೇತಿ ನೀಡಿದರು.

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯು ಜೂ. 3ರಂದು ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳ ಪಿಆರ್‌ಒ ಹಾಗೂ ಎಪಿಆರ್‌ಒಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ತರಬೇತಿ ನೀಡಿದರು. ಮತಗಟ್ಟೆ ಅಧಿಕಾರಿಗಳು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಸಲು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಮಸ್ಟರಿಂಗ್ ಕಾರ್ಯಗಳಲ್ಲಿ ತಿಳಿಸಿದ ಸಮಯ ಮತ್ತು ಸ್ಥಳದಲ್ಲಿ ಸೇರಬೇಕು. ಮತಪೆಟ್ಟಿಗೆಗಳು, ಮತಪತ್ರ ಪಡೆದುಕೊಳ್ಳಬೇಕು ಎಂದು ತಿಳಿಸುತ್ತಾ ಇತರ ಮತದಾನಕ್ಕೆ ಬೇಕಾಗುವಂತ ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡಿ, ಮತಗಟ್ಟೆ ತಲುಪಿದ ನಂತರ ನಿರ್ವಹಿಸಬೇಕಾದ ಕಾರ್ಯದ ಬಗ್ಗೆ ತಿಳಿಸಿದರು. ಏಜೆಂಟ್ ಅಥವಾ ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ಬಗ್ಗೆಯೂ ತಿಳಿಸಿದರು.

ಮತಗಟ್ಟೆ ವ್ಯವಸ್ಥೆ, ಮತಪತ್ರ ನಿರ್ವಹಣೆ ಹಾಗೂ ಗ್ರೀನ್ ಪೇಪರ್ ಸೀಲ್ ಅಳವಡಿಕೆ ಬಗ್ಗೆ ಮಾಹಿತಿ ನೀಡಿದರು.

ಮತದಾನ ನಡೆಯುವಾಗ ಯಾವುದೇ ಘಟನೆಗಳು ಸಂಭವಿಸಿದಂತೆಲ್ಲ ಕಾಲಕಾಲಕ್ಕೆ ಪಿಆರ್‌ಒ ದಿನಚರಿಯಲ್ಲಿ ದಾಖಲಿಸಬೇಕು. ನಿಗದಿ ಪಡಿಸಿದ ಸಮಯಕ್ಕೆ ಮತದಾನ ಪೂರ್ಣಗೊಳಿಸುವುದು, ಮತದಾನದ ಮುಕ್ತಾಯದಲ್ಲಿ ಹಾಜರಿದ್ದ ಎಲ್ಲ ಮತದಾರರರಿಗೆ ಮತದಾನಕ್ಕೆ ಅವಕಾಶ ನೀಡಬೇಕು. ಮತದಾನದ ನಂತರ ಬ್ಯಾಲೆಟ್ ಬಾಕ್ಸ್ ಅನ್ನು ಸೀಲ್ ಮಾಡಿ, ಮುದ್ರೆ, ವಿಳಾಸ ಚೀಟಿ, ಬಟ್ಟೆಯ ಚೀಲದಲ್ಲಿಟ್ಟು ಹೊಲಿಗೆ ಹಾಕಿ ಅದರ ಮೇಲೂ ವ್ಯಾಕ್ಸ್ ಸೀಲ್, ವಿಳಾಸ ಚೀಟಿ ಹಚ್ಚಿ ಮೊಹರು ಮಾಡಬೇಕು. ಉಮೇದುವಾರ/ಏಜೆಂಟ್ ಬಯಸಿದರೆ ಅವರೂ ಸಹಿ ಮಾಡಬಹುದು. ಚುನಾವಣೆಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಮೊಹರು ಮಾಡಬೇಕು. ಯಾವುದೇ ಭಯ, ರಾಗ, ದ್ವೇಷ, ಅಸೂಯೆಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು ಎಂದು ತರಬೇತಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ , ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಜಿಲ್ಲೆಯ ಎಲ್ಲ ಪಿಆರ್‌ಒ ಹಾಗೂ ಎಪಿಆರ್‌ಒ ಇದ್ದರು.