ಉತ್ತರ ಕರ್ನಾಟಕ ಕೈಗಾರಿಕಾ ವಲಯ ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ: ಶೆಟ್ಟರ

| Published : May 18 2025, 01:32 AM IST

ಉತ್ತರ ಕರ್ನಾಟಕ ಕೈಗಾರಿಕಾ ವಲಯ ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ: ಶೆಟ್ಟರ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲಭೂತ ಸೌಕರ್ಯಗಳು ಕೈಗಾರಿಕೆ ಅಭಿವೃದ್ಧಿಗೆ ಪೂರಕವಾಗಿವೆ. ಹುಬ್ಬಳ್ಳಿಯಲ್ಲಿ ಆ ಸೌಲಭ್ಯಗಳಿವೆ.‌ ಆದರೂ‌, ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಈ ಹಿಂದೆ ನಾನು ಕೈಗಾರಿಕಾ ಸಚಿವನಾಗಿದ್ದಾಗ ಇಲ್ಲಿನ ಕೆಲ ಸಮಸ್ಯೆ ಬಗೆಹರಿಸಿ ನ್ಯಾಯ ಒದಗಿಸಿದ್ದೇನೆ. ರಸ್ತೆ ನಿರ್ಮಾಣ, ಮಟಿರಿಯಲ್‌ ಟೆಸ್ಟಿಂಗ್ ಸೆಂಟರ್‌ ಸಮಸ್ಯೆ ಬಗೆಹರಿಸಿದ್ದೇನೆ.

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಸೌಲಭ್ಯ ಕಲ್ಪಿಸಿದರೂ ಇಲ್ಲಿನ ಕೈಗಾರಿಕಾ ವಲಯ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎನ್ನುವ ಕೊರಗು ಕಾಡುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ‌ ಹಮ್ಮಿಕೊಂಡಿರುವ ‘ಐಮೆಕ್ಸ್-2025’ಇಂಡಸ್ಟ್ರೀ ಮತ್ತು ಮ್ಯಾನುಫ್ಯಾಕ್ಚರಿಂಗ್‌ ಪ್ರದರ್ಶನದಲ್ಲಿ ಉದ್ಯಮಿ ರತ್ನ ಪ್ರಶಸ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂಲಭೂತ ಸೌಕರ್ಯಗಳು ಕೈಗಾರಿಕೆ ಅಭಿವೃದ್ಧಿಗೆ ಪೂರಕವಾಗಿವೆ. ಹುಬ್ಬಳ್ಳಿಯಲ್ಲಿ ಆ ಸೌಲಭ್ಯಗಳಿವೆ.‌ ಆದರೂ‌, ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಈ ಹಿಂದೆ ನಾನು ಕೈಗಾರಿಕಾ ಸಚಿವನಾಗಿದ್ದಾಗ ಇಲ್ಲಿನ ಕೆಲ ಸಮಸ್ಯೆ ಬಗೆಹರಿಸಿ ನ್ಯಾಯ ಒದಗಿಸಿದ್ದೇನೆ. ರಸ್ತೆ ನಿರ್ಮಾಣ, ಮಟಿರಿಯಲ್‌ ಟೆಸ್ಟಿಂಗ್ ಸೆಂಟರ್‌ ಸಮಸ್ಯೆ ಬಗೆಹರಿಸಿದ್ದೇನೆ. ಹೊಸಬರಿಗೆ ಸೈಟ್ ಸಿಗುತ್ತಿಲ್ಲ. ಇನ್ವೆಸ್ಟ್‌ ಕರ್ನಾಟಕದ ಅಡಿ ಹಲವು ಕೈಗಾರಿಕೆಗಳ ಸ್ಥಾಪನೆಗೆ ಒಪ್ಪಂದವಾಗಿತ್ತು. ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಉದ್ಯಮ ಸ್ಥಾಪನೆ ಹಲವರ ಜತೆ ಒಪ್ಪಂದವಾಗಿತ್ತು. ಆದರೆ, ಅಧಿಕಾರಿಗಳು ಭೂಮಿಯ ಬೆಲೆ ₹1.40 ಕೋಟಿಗೆ ಏರಿಸಿದ್ದರಿಂದ ಹಿಂದೆ ಸರಿದರು. ಈಗ ₹1.60 ಕೋಟಿಗೆ ಏರಿಸಿದ್ದಾರೆ. ಹೀಗಾದರೆ ಯಾರು ಉದ್ಯಮ ಸ್ಥಾಪನೆಗೆ ಮುಂದಾಗುತ್ತಾರೆ ಎಂದು ಪ್ರಶ್ನಿಸಿದ ಅವರು ಕಡಿಮೆ ದರದಲ್ಲಿ ಭೂಮಿ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಆಗಬೇಕಿದೆ ಎಂದರು.

ಬೆಳಗಾವಿಯಲ್ಲಿ ಸಣ್ಣ ಸಮಸ್ಯೆ ಬಗೆಹರಿಸಿದರೆ ಎರಡು ಸಾವಿರ ಎಕರೆ ಭೂಮಿ ಸಿಗಲಿದೆ. ಧಾರವಾಡದ ದುರ್ಗದಕೇರಿಯಲ್ಲಿ 2-3ಸಾವಿರ ಎಕರೆ ಭೂಮಿ ಇದೆ. ಇಲ್ಲಿ ಸಣ್ಣ ವಿವಾದವಿದ್ದು, ಅದನ್ನು ಬಗೆಹರಿಸಿದರೆ ಅನುಕೂಲವಾಗಲಿದೆ. ಟಾಟಾ ಮೋಟಾರ್ಸ್ 300 ಎಕರೆ ಸರ್ಕಾರಕ್ಕೆ ವಾಪಸ್ ಕೊಟ್ಟಿದೆ. ಅಂದು ₹10 ಲಕ್ಷಕ್ಕೆ ಕೊಟ್ಟಿದ್ದ ಭೂಮಿ ₹1 ಕೋಟಿ ಆಗಿದೆ. ಆಸ್ತಿ ತೆರಿಗೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹೀಗಾಗಿ, ಕೈಗಾರಿಕೆ ಸಚಿವರು ಅಥವಾ ಸಿಎಂ ಮುಂದಾಳತ್ವ ವಹಿಸಿ ಸಮಸ್ಯೆ ಬಗೆಹರಿಸಿದರೆ ಈ ಭಾಗದಲ್ಲಿ ಕೈಗಾರಿಕೆ ಬೆಳೆಯಲು ಸಾಧ್ಯ. ಉದ್ಯಮಗಳ ₹೧೫೦ ಕೋಟಿಯಷ್ಟು ಬಾಕಿ ತೆರಿಗೆ ಮನ್ನಾ ಮಾಡಲು ಒತ್ತಾಯ ಮಾಡಲಾಗಿತ್ತು. ಆದರೆ, ಸರ್ಕಾರ ಅದನ್ನು ಮಾಡಲಿಲ್ಲ. ಆ ಪ್ರಯತ್ನವೂ ಆಗಬೇಕಾಗಿದೆ. ಸಂಘ ಕೂಡ ಈ ನಿಟ್ಟಿಲನಲ್ಲಿ ಕಾರ್ಯ ಪ್ರವೃತ್ತವಾಗಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಉತ್ತೇಜನ‌ ನೀಡಿದ್ದಾರೆ. ಯುವ ಸಮುದಾಯಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ. ಅದರ ಉಪಯೋಗ‌ ಕೆಳಹಂತದಲ್ಲಿ ಆಗಬೇಕು. ಆ ಕೆಲಸವನ್ನು ಸಂಘ ಮಾಡಬೇಕು. ಉದ್ಯಮ ಸ್ಥಾಪನೆಯಾದರೆ ಅದರ ಜತೆಗೆ ಉದ್ಯೋಗಾವಕಾಶ ಸೃಷ್ಟಿ ಆಗುತ್ತದೆ. ಈ ಭಾಗದ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸ್ಪೆಷಲ್ ಇನವೆಸ್ಟ್ ಮೆಂಟ್ ರೀಸನ್‌ಗೆ ಒಪ್ಪಿಗೆ ದೊರೆತಿದೆ. ಅದರ ಅನುಷ್ಠಾನ ಇಂದಿನ‌ ರಾಜ್ಯ ಸರಕಾರದಿಂದ ಆಗುತ್ತಿಲ್ಲ. ಇದಕ್ಕೆ ಸಂಘ ಒತ್ತಡ ಹಾಕಬೇಕಾಗಿದೆ. ಈ ಭಾಗದಲ್ಲಿ ಕಾಯಂ ಎಕ್ಸಿಬಿಶನ್ ಸೆಂಟರ್‌ ಮಾಡಬೇಕು. ಅಂತಾರಾಷ್ಟ್ರೀಯ ಏರ್ ಪೋರ್ಟ್‌ ಬೇಕು. ಈ ಬಗ್ಗೆ ಚಿಂತನೆಯಾಗಬೇಕು ಎಂದ ಅವರು, ನಾನು ಬೆಳಗಾವಿಗೆ ಸೀಮಿತ ಸಂಸದ ಮಾತ್ರವಲ್ಲ, ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ. ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.

ನಂದು ಕೆಮಿಕಲ್ಸ್ ನ ನಿರ್ದೇಶಕಿ ಉಷಾ ಹೆಗಡೆ ಮಾತನಾಡಿ, ದೇಶ ಇವತ್ತು ತಂತ್ರಜ್ಞಾನದಲ್ಲಿ ಮುಂದುವರೆದಿದೆ. ಆದರೆ ಕೊಲೆ, ಅತ್ಯಾಚಾರದಂತಹ ಪ್ರಕರಣ ಹೆಚ್ಚಾಗಿರುವುದು ದುರದೃಷ್ಟಕರ. ಕೈಗಾರಿಕೆ ಸರಳ‌ದಾರಿಯಲ್ಲ. ನೋಡುವವರಿಗೆ ಚೆನ್ನಾಗಿ ಕಾಣುತ್ತದೆ. ಆದರೆ, ಏರಿಳಿತಗಳು ಹೆಚ್ಚಿವೆ. ನಮ್ಮ ಯುವ ಸಮುದಾಯ ಬೆಂಗಳೂರು, ಮುಂಬೈಗೆ ಹೋಗುತ್ತಿದ್ದಾರೆ. ಆದರೆ, ಅವರನ್ನು ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯೋಜನೆ ರೂಪಿಸಬೇಕು. ಕ್ಲೀನ್ ಇಂಡಿಯಾಗೆ ಒತ್ತು ಕೊಡಬೇಕು ಎಂದರು. ಇದೇ ವೇ‍‍ಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಸಂಘದ ಅಧ್ಯಕ್ಷ ಗಿರೀಶ ನಲವಡಿ ಸ್ವಾಗತಿಸಿದರು. ಅವಾರ್ಡ್ ಕಮಿಟಿ ಚೇರಮನ್ ಜೆ.ಸಿ. ಮಠದ ಪ್ರಶಸ್ತಿ ಕುರಿತು ಮಾತನಾಡಿದರು. ಬಿ.ಎಸ್. ಜವಳಗಿ, ರಮೇಶ ಪಾಟೀಲ, ಶಂಕರ ಹಿರೇಮಠ, ಅಶೋಕ ಕನ್ನೂರ, ಅಶೋಕ ಕಲಬುರ್ಗಿ, ಅನೀಲಕುಮಾರ ಜೈನ್, ಭರತ ಕುಲಕರ್ಣಿ, ರಮೇಶ ಯಾದವಾಡ ಸೇರಿದಂತೆ ಹಲವರಿದ್ದರು.24 ಜನರಿಗೆ ಉದ್ಯಮರತ್ನ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ:

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ‌ ಹಮ್ಮಿಕೊಂಡಿರುವ ‘ಐಮೆಕ್ಸ್-2025’ ಇಂಡಸ್ಟ್ರೀ ಮತ್ತು ಮ್ಯಾನುಫ್ಯಾಕ್ಚರಿಂಗ್‌ ಪ್ರದರ್ಶನದಲ್ಲಿ 24 ಜನರಿಗೆ ಉದ್ಯಮಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಹುಬ್ಬಳ್ಳಿಯ ನವೀನ್‌ ಅಗ್ರೋ ಟೆಕ್‌ನ ಸುನೀತಾ ಬಸವರಾಜ ದೇಶಪಾಂಡೆ, ಶಿಗ್ಗಾಂವಿಯ ಗೌರಿಶಂಕರ ಫುಡ್‌ ಇಂಡಸ್ಟ್ರಿಯ ಶಿಲ್ಪಾ ಮಂಟಗನಿ, ಉತ್ತಮ ಸ್ಟಾರ್ಟ್‌ಅಪ್‌ ಇಂಡಸ್ಟ್ರಿ ಪ್ರಶಸ್ತಿಯನ್ನು ಜಿಆರ್‌-ಇ- ವೆಹಿಕಲ್‌ನ ರಾಹುಲ್‌ ರಾಜ್‌ ಪ್ರಭು ಮತ್ತು, ಗೋವಿಂದ ರಾಜ್‌ ಪ್ರಭು ಅವರಿಗೆ, ವಿಶೇಷಚೇತನ ‍ವಿಭಾಗದಲ್ಲಿ ನಾಗಾವಿ ಎಂಜಿನಿಯರಿಂಗ್‌ ವರ್ಕ್ಸ್‌ನ ಸುರೇಶ ರಂಗ್ರೇಜ್‌, ಉದ್ಯಮಿ ರತ್ನ ಮೈಕ್ರೋ ಇಂಡಸ್ಟ್ರಿಸ್‌ ವಿಭಾಗದಲ್ಲಿ ಶಿಲ್ಪಸೃಷ್ಟಿ ವುಡ್‌ ಆ್ಯಂಡ್‌ ಸ್ಟೋನ್‌ ಕರ್ವಿಂಗ್‌ನ ಪ್ರಶಾಂತ ಕೆ. ಗುಡಿಗಾರ, ರಾಜ್‌ಶೇಖರ್‌ ಗುಡಿಸಾಗರ ಪ್ರಶಸ್ತಿ ಪಡೆದರು.

ಬೆಸ್ಟ್‌ ಇನ್ನೋವೇಟಿವ್‌ ವಿಭಾಗದಲ್ಲಿ ಅಫ್ಫಾಂಜ್ಮಿ ಲೈಫ್‌ ಸೈನ್ಸ್‌ನ ಲೋನಾ ಪಡಿಹರಿ, ಉದ್ಯಮಿ ರತ್ನ ಸ್ಮಾಲ್‌ ಇಂಡಸ್ಟ್ರಿಸ್‌ ‍ವಿಭಾಗದಲ್ಲಿ ಜಿನಾ ಸ್ಪೆಶಲ್‌ ಸ್ಟೀಲ್‌ ವರ್ಕ್ಸ್‌ ಪೈ. ಲಿಮಿಟೆಡ್‌ನ ಗೋಪಾಲ ಜಿನಗೌಡ, ಸ್ಪರ್ಣ ಲ್ಯಾಟೆಕ್ಸ್‌ನ ಮಂಜುನಾಥ ಜಿ. ಭಟ್, ಉದ್ಯಮಿ ರತ್ನ ಮೀಡಿಯಂ ವಿಭಾಗದಲ್ಲಿ ಕೆನ್‌ವುಡ್‌ ವಾಲ್ವ್‌ ಕಂಟ್ರೋಲ್ಸ್‌ ಪೈ ಲಿಮಿಟೆಡ್‌ನ ಸಿದ್ದೇಶಕುಮಾರ ಎನ್‌.ಎಂ, ಏರ್‌ಟೆಕ್‌ ಪ್ರೈ. ಲಿಮಿಟೆಡ್‌ನ ಲಜತ್‌ರಾಯ್‌ ಸುಖಿಜಾ, ವಿಭವಾ ಇಂಡಸ್ಟ್ರೀಸ್‌ನ ನಂದಕುಮಾರ್ ಎಚ್‌.ಎನ್‌, ಕೆ.ಎಂ. ವಿಶ್ವಮೂರ್ತಿ, ಬೆಸ್ಚ್‌ ಇನ್ನೋವೇಟಿವ್‌ ಇಂಡಸ್ಟ್ರಿಸ್‌ ‍ವಿಭಾಗದಲ್ಲಿ ಡಾ. ಕಿರಣ್ ಕ್ರಾಂತಿ, ಕರಬಸಪ್ಪ ಜಾಡರ್, ಅಪ್ರೂವ್ ಕಣವಿ, ಉದ್ಯಮಿ ರತ್ನ ಸ್ಮಾಲ್‌ ಇಂಡಸ್ಚ್ರೀಸ್‌ನಲ್ಲಿ ಚಂದ್ರಶೇಖರ್ ಬಾಗೇವಾಡಿ, ಲೈಫ್‌ಟೈಮ್‌ ಅಚೀವ್‌ಮೆಂಟ್‌ ಪ್ರಶಸ್ತಿ ತಿಲಕ್‌ ವಿಕ್ರಮ್ಶಿ ಸೇರಿದಂತೆ 24 ಜನರಿಗೆ ಪ್ರಶಸ್ತಿ ವಿತರಿಸಲಾಯಿತು.