ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವಲ್ಲ: ಡಾ.ಬಾಲಸುಬ್ರಮಣ್ಯಂ

| Published : Oct 19 2025, 01:03 AM IST

ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವಲ್ಲ: ಡಾ.ಬಾಲಸುಬ್ರಮಣ್ಯಂ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ಉತ್ತರ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಬಿವಿವಿ ಸಂಘದಂತಹ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡಿವೆ. ಈ ದಿಸೆಯಲ್ಲಿ ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶವೆಂದು ಬಿಂಬಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ಎಚ್.ಆರ್. ಸಾಮರ್ಥ್ಯ ನಿರ್ಮಾಣ ಆಯೋಗ ಸದಸ್ಯರಾದ ಡಾ.ಆರ್. ಬಾಲಸುಬ್ರಮಣ್ಯಂ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶೈಕ್ಷಣಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ಉತ್ತರ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಬಿವಿವಿ ಸಂಘದಂತಹ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡಿವೆ. ಈ ದಿಸೆಯಲ್ಲಿ ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶವೆಂದು ಬಿಂಬಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ಎಚ್.ಆರ್. ಸಾಮರ್ಥ್ಯ ನಿರ್ಮಾಣ ಆಯೋಗ ಸದಸ್ಯರಾದ ಡಾ.ಆರ್. ಬಾಲಸುಬ್ರಮಣ್ಯಂ ಹೇಳಿದರು.

ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಫಿಜಿಯೋಥೆರಪಿ ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜುಗಳ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಉದ್ದೇಶ ಜ್ಞಾನ ನೀಡುವುದಾಗಿದ್ದರೂ ಅದು ಮಾನವೀಯತೆ ತುಂಬಿದ ಜ್ಞಾನವಾಗಿರಬೇಕು. ಭಾವಿಸುವ ಹೃದಯ, ಆಲೋಚಿಸುವ ತಲೆ ಮತ್ತು ಕ್ರಿಯಾಶಕ್ತಿಯಿಂದ ಮನುಷ್ಯ ಅದ್ಭುತವಾದದ್ದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಣ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ ಬೆಳೆಸಬೇಕು. ಡಾ.ವೀರಣ್ಣ ಚರಂತಿಮಠ ಅವರು ಬಿವಿವಿ ಸಂಘದ ಮೂಲಕ ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ವಿಶಿಷ್ಠ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಲೋಕಕ್ಕೆ ಉಪಯೋಗವಾಗುವವನೇ ನಿಜವಾದ ಯೋಗಿಗಳಾಗಿದ್ದು, ಅಂಥ ಚಿಂತಕರು ಚಿಂತಿಸಿದ ಬಹುಮುಖ್ಯ ಸಂಗತಿ ಬದುಕು ಕುರಿತಾಗಿದೆ. ದೇವರು ನೀಡಿದ ಬದುಕು ಸಾರ್ಥಕವಾಗಬೇಕು. ಅಂಥ ಸಾರ್ಥಕತೆ ಉತ್ತಮ ಕೆಲಸಗಳಿಂದ ಪ್ರಾಪ್ತವಾಗುತ್ತದೆ. ಬಿವಿವಿ ಸಂಘ ಮಕ್ಕಳ ಎದೆಯಲ್ಲಿ ಅಕ್ಷರದೀಪ ಬೆಳಗುವ ಮಹೋನ್ನತ ಕಾರ್ಯ ಮಾಡುತ್ತಿದೆ. ಒಂದರ್ಥದಲ್ಲಿ ಬಿವಿವಿ ಸಂಘ ಈ ನೆಲದ ನಳಂದವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಫಿಜಿಯೋಥೆರಪಿ ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜು ಸ್ಥಾಪಿಸಬೇಕೆನ್ನುವ ಕನಸು ನನಸಾಗಿದೆ. ಉದ್ಘಾಟನೆಗೊಂಡ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಾದ ಎಲ್ಲ ಮೂಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.

ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಡಾ.ಬಾಲಸುಬ್ರಮಣ್ಯಂ ಅವರನ್ನು ಸನ್ಮಾನಿಸಲಾಯಿತು. ಡಾ.ನಾರಾಯಣ ಮುತಾಲಿಕ ಮತ್ತು ಡಾ.ಶಾಂಭವಿ ಕುಲಕರ್ಣಿ ನಿರೂಪಿಸಿದರು. ಬಿವಿವಿ ಸಂಘದ ಗೌರವಾನ್ವಿತ ಸದಸ್ಯರು, ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು, ಅಂಗ-ಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮ ಮಿತ್ರರು, ಮಹಾವಿದ್ಯಾಲಯದ ಬೋಧಕರು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಇದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅರ್ಪಿತಾ ಮತ್ತು ಬಸವಜ್ಯೋತಿ ಪ್ರಾರ್ಥಿಸಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಸ್ವಾಗತಿಸಿದರು. ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ) ಪರಿಚಯಿಸಿದರು.

ಮಕ್ಕಳ ಎದೆಯಲ್ಲಿ ಅಕ್ಷರದೀಪ ಬೆಳಗುವ ಮಹೋನ್ನತ ಕಾರ್ಯದ ಮೂಲಕ ಬಿವಿವಿ ಸಂಘ ಈ ನೆಲದ ನಳಂದಾ ವಿವಿಯಂತೆ ಕೆಲಸ ಮಾಡಿದೆ.

- ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ ಕೊಪ್ಪಳ