ಮಸ್ಕತ್‌ನಲ್ಲಿ ಉಕ ಶೈಲಿಯ ಜನಪದ ಜಾತ್ರೆ!

| Published : Feb 02 2025, 01:01 AM IST

ಸಾರಾಂಶ

ಓಮನ್ ದೇಶದ ಮಸ್ಕತ್‌ನ ಎಂ.ಕೆ. ಫಾರ್ಮ್ ಹೌಸ್‌ನಲ್ಲಿ ಚಾಲುಕ್ಯ ಕೂಟದ ಸದಸ್ಯರು ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯ ಜನಪದ ಜಾತ್ರೆ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಕನ್ನಡಿಗರು ಹೆಚ್ಚು ವಾಸಿಸುವ ದೇಶಗಳಲ್ಲಿ ತಮ್ಮದೇ ಸಂಘಟನೆ ಕಟ್ಟಿಕೊಂಡು ಹತ್ತಾರು ಕಾರ್ಯಕ್ರಮಗಳನ್ನು ಅದ್ಭುತವಾಗಿ ಮಾಡುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದ ಜನರೆಲ್ಲರೂ ಸೇರಿಕೊಂಡು ವಿದೇಶದ ನೆಲದಲ್ಲಿ ಉತ್ತರ ಕರ್ನಾಟಕ ಸಂಪ್ರದಾಯದ ಜಾನಪದ ಜಾತ್ರೆ ಆಯೋಜಿಸಿದ್ದು ಜಗತ್ತಿನಲ್ಲಿ ಮೊದಲು.

ಓಮನ್ ದೇಶದ ಮಸ್ಕತ್‌ನ ಎಂ.ಕೆ. ಫಾರ್ಮ್ ಹೌಸ್‌ನಲ್ಲಿ ಚಾಲುಕ್ಯ ಕೂಟದ ಸದಸ್ಯರು ಮೊದಲ ಬಾರಿಗೆ ಇಂತಹದೊಂದು ಜಾತ್ರೆಯ ಸಂಸ್ಕೃತಿ ಶುರು ಮಾಡಿದ್ದು, ಡಾ. ದ.ರಾ. ಬೇಂದ್ರೆ ಅವರ ಮಾನಸ ಪುತ್ರ, ನಿವೃತ್ತ ಶಿಕ್ಷಕ ಧಾರವಾಡದ ಸುರೇಶ ಕುಲಕರ್ಣಿ ಮತ್ತು ಜಾನಪದ ಕಲಾವಿದ ಡಾ. ಜೀವನಸಾಬ್‌ ಬಿನ್ನಾಳ ವಿಶೇಷ ಅತಿಥಿಗಳಾಗಿದ್ದರು. ಹಾಗೆಯೇ ಭಾರತದಿಂದ ಕೆಲವು ಹಿರಿಯರು ಮತ್ತು ದುಬೈನಿಂದ ಕನ್ನಡಿಗ ಸ್ನೇಹಿತರು ಈ ಜಾತ್ರೆಗೆ ಆಗಮಿಸಿದ್ದು ವಿಶೇಷ.

ನಮಸ್ಕಾರ ಬರ್ರಿ:

ಉಕ ಶೈಲಿಯ ನಮಸ್ಕಾರ ಬರ್ರಿ.. ಸ್ವಾಗತದೊಂದಿಗೆ ಮಹಿಳೆಯರಿಗೆ ಅರಿಶಿಣ ಕುಂಕುಮ ಕೊಟ್ಟು, ನತ್ತನ್ನು ಹಾಕಿ ಬರಮಾಡಿಕೊಂಡರೆ, ಪುರುಷರಿಗೆ ಬಿಳಿ ವಸ್ತ್ರದ ಜತೆಗೆ ಎಳ್ಳಿನ ಉಂಡೆ ನೀಡಿ, ಹಣೆಗೆ ತಿಲಕವಿಟ್ಟು ಸ್ವಾಗತಿಸಲಾಯಿತು. ಫೋಟೋ ಬೂತ್ ಸಿದ್ಧಪಡಿಸಿ ಬಣ್ಣ ಬಣ್ಣದ ರಿಬ್ಬನ್ ಮತ್ತು ಕಬ್ಬುಗಳಿಂದ ಅಲಂಕಾರದ ಟ್ರ್ಯಾಕ್ಟರ್‌ ಗಮನ ಸೆಳೆಯಿತು. ಇನ್ನೊಂದೆಡೆ ಕಬ್ಬುಗಳನ್ನು ತ್ರಿಕೋನಾಕಾರದಲ್ಲಿ ನಿಲ್ಲಿಸಿ, ಹೂಗಳಿಂದ ಅಲಂಕರಿಸಿ ಮಧ್ಯದಲ್ಲಿ ಬಣ್ಣ-ಬಣ್ಣದ ರಂಗೋಲಿ ಬಿಡಿಸಿ ಮಡಿಕೆ ಇಟ್ಟಿದ್ದು ಆಕರ್ಷಕವಾಗಿತ್ತು.

ಹಳ್ಳಿ ಹಕ್ಕಿ ಹಾಡುಗಳು, ಶಿವನ ಭಜನೆಯಿಂದ ಪ್ರಾರಂಭವಾಗಿ ನಂತರ ಜಾನಪದ ಗೀತೆಗಳು, ನೃತ್ಯಗಳು, ಸನ್ಮಾನ, ಸ್ಪರ್ಧೆಗಳಲ್ಲಿ ವಿಜೇತ ಚಾಲುಕ್ಯ ಕೂಟದ ಸದಸ್ಯರ ಮಕ್ಕಳಿಗೆ ಪುರಸ್ಕಾರದ ಪ್ರೋತ್ಸಾಹ ನಡೆಯಿತು. ಉತ್ತರ ಕರ್ನಾಟಕದ ವಿಶೇಷತೆಗಳ ಮೇಲೆ ಬರೆದ ಲೇಖನಗಳಲ್ಲಿ ಉತ್ತಮ ಲೇಖನಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ನೀಡಿ ಹವ್ಯಾಸಿ ಬರಹಗಾರರನ್ನು ಪ್ರೋತ್ಸಾಹಿಸಲಾಯಿತು ಎಂದು ಚಾಲುಕ್ಯ ಕೂಟದ ಸದಸ್ಯರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಭರ್ಜರಿ ಊಟ:

ಜಾನಪದ ಕಲಾವಿದ ಡಾ. ಜೀವನಸಾಬ್ ವಾಲಿಕಾರ್ ಬಿನ್ನಾಳ್ ಉಪನ್ಯಾಸದ ಮಧ್ಯೆ ಸುಮಧುರ ಜಾನಪದ ಹಾಡುಗಳು, ಗೀಗಿ ಪದಗಳು ಮಸ್ಕತ್‌ ಕನ್ನಡಿಗರನ್ನು ಮಂತ್ರಮುಗ್ಧರನ್ನಾಗಿಸಿದವು. ಜತೆಗೆ ಹಾಸ್ಯ ಭರಿತ ಒಡಪುಗಳು ನಗೆಗಡಲಲ್ಲಿ ತೇಲಿಸಿದವು. ಮಧ್ಯಾಹ್ನದ ಊಟಕ್ಕೆ ಉಕ ಭರ್ಜರಿ ರೊಟ್ಟಿ ಭೋಜನವನ್ನು ತಾಯ್ನಾಡಿನಿಂದ ಕರೆಸಲಾದ ಅಡುಗೆಯವರಿಂದಲೇ ನಡೆಯಿತು. ರೊಟ್ಟಿ, ಚಪಾತಿ, ಬದನೆಕಾಯಿ, ಮಡಿಕೆ ಕಾಳು ಪಲ್ಯ, ಬದನೆಕಾಯಿ ಬರ್ತಾ, ಟೊಮೆಟೊ ಚಟ್ನಿ, ಗೋಧಿ ಹುಗ್ಗಿ, ಮಧುರ ಮಿಲನ ಎನ್ನುವ ವಿಶೇಷವಾದ ಸಿಹಿ ಪದಾರ್ಥ, ಅನ್ನ, ಸಾಂಬಾರ್ ತಯಾರಿಸಿದರೆ ಇಲ್ಲಿನ ಉತ್ಸಾಹಿ ಮಹಿಳೆಯರು ಜಾತ್ರೆಗೋಸ್ಕರವೇ ಎಳ್ಳು ಶೇಂಗಾ ಹೋಳಿಗೆ, ಶೇಂಗಾ ಮತ್ತು ಅಗಸಿ ಚಟ್ನಿಪುಡಿಗಳನ್ನು, ಕರಿಂಡಿ, ಮಜ್ಜಿಗೆ ಮೆಣಸಿನಕಾಯಿ, ಉಪ್ಪಿನಕಾಯಿ ಎಲ್ಲವನ್ನು ಮನೆಯಲ್ಲಿಯೇ ತಯಾರಿಸಿದ್ದರು.

ಒಟ್ಟಿನಲ್ಲಿ ಉತ್ತರ ಕರ್ನಾಟಕದ ರುಚಿ ರುಚಿಯಾದ ಊಟವು ಜನರ ಬಾಯಿಯ ಚಪಲ ತೀರಿಸಿತು ಎಂದು ಚಾಲುಕ್ಯ ಕೂಟದ ಸದಸ್ಯರು ಖುಷಿ ವ್ಯಕ್ತಪಡಿಸಿದರು. ಬೇಂದ್ರೆ ಮತ್ತೊಂದು ಮಗ್ಗಲ...

ಊಟದ ನಂತರ ಸುರೇಶ ಕುಲಕರ್ಣಿ ಅವರ “ಬಾರೋ ಸಾಧನಕೇರಿಗೆ” ಎನ್ನುವ ಬೇಂದ್ರೆಯವರ ಕುರಿತಾದ ಉಪನ್ಯಾಸ ಬೇಂದ್ರೆ ಅವರ ಮತ್ತೊಂದು ಮಗ್ಗಲನ್ನು ಬಿಚ್ಚಿಟ್ಟಿತು. ಬೇಂದ್ರೆಯವರು ಬೇರೆ ಬೇರೆ ವಿಷಯಗಳ ಮಧ್ಯೆ ಇರುವ ಸಂಬಂಧವನ್ನು ಹೇಗೆ ವಿವರಿಸುತ್ತಿದ್ದರು ಎನ್ನುವುದನ್ನು ಚಿತ್ರಗಳ ಮೂಲಕ ತೋರಿಸುವ ಜತೆಗೆ ಅವರ ಹತ್ತು ಹಲವಾರು ಮುಖಗಳನ್ನು ಜನರಿಗೆ ಪರಿಚಯಿಸಿದರು. ಜಾತ್ರೆ ಮುಗಿಸಿ ಹೊರಡುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಕುಬಸದ ಖಣ ಮತ್ತು ಉಡಕ್ಕಿ ಕೊಟ್ಟು ಕಳುಹಿಸುವ ದೃಶ್ಯ ತವರು ಮನೆಗೆ ಬಂದ ಹೆಣ್ಣು ಮಗಳನ್ನು ಕಳುಹಿಸಿಕೊಡುವ ರೀತಿಯಲ್ಲಿತ್ತು. ಒಟ್ಟಾರೆ ಉತ್ತರ ಕರ್ನಾಟಕ ಶೈಲಿಯ ಬದುಕು ಮಸ್ಕತ್‌ನಲ್ಲಿ ಎದ್ದು ಕಾಣುವುದಲ್ಲದೇ, ನಾವೆಲ್ಲ ವಿದೇಶದಲ್ಲಿದ್ದೇವೆ ಎನ್ನುವುದನ್ನು ಮರೆಸುವಂತಿತ್ತು ಎಂದು ಅಲ್ಲಿನ ನಿವಾಸಿ ಹೇಮಲತಾ ಧರಣಪ್ಪಗೌಡರ ಅಭಿಪ್ರಾಯ ವ್ಯಕ್ತಪಡಿಸಿದರು. ಮಸ್ಕತ್‌ನಲ್ಲಿ ಉತ್ತರ ಕರ್ನಾಟಕ ಜಾನಪದ ಜಾತ್ರೆ ಮಾಡಿದ್ದು ಪ್ರಸ್ತುತ. ಅಲ್ಲಿಯ ಸ್ವಾಗತದಿಂದ ಹಿಡಿದು ಕಾರ್ಯಕ್ರಮದ ಆಯೋಜನೆ, ಊಟ, ಮುಕ್ತಾಯ ಎಲ್ಲವೂ ಉಕ ವಿಶೇಷವಾಗಿದ್ದು ಒಂದಿಷ್ಟು ವಿದೇಶದ ಅನುಭವ ಆಗಲಿಲ್ಲ. ಚಾಲುಕ್ಯ ಕೂಟದ ಕಾರ್ಯ ಮಾದರಿ ಎಂದು ಸುರೇಶ ಕುಲಕರ್ಣಿ ಹೇಳಿದರು.