ಸಾರಾಂಶ
ಮಂಡನೆ ಮಾಡುವ ಮುನ್ನವೇ ವಿರೋಧವೇಕೆ
ಇಲಾಖೆಯ ಸಚಿವನಾಗಿ ನನಗೇ ವರದಿಯಲ್ಲಿ ಏನಿದೇ ಅಂತಾ ಗೊತ್ತಿಲ್ಲಕನ್ನಡಪ್ರಭ ವಾರ್ತೆ ಕೊಪ್ಪಳ
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆಯಿಂದ ಮಂಡನೆ ಮಾಡುತ್ತಿರುವ ಜಾತಿ ಗಣತಿ ವರದಿ ಅಲ್ಲವೇ ಅಲ್ಲ, ಅದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ವರದಿ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯ ಸಚಿವನಾಗಿ ನನಗೇ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಅದರಲ್ಲಿ ಏನಿದೆ ಎಂದು ಗೊತ್ತಾಗುವ ಮೊದಲೇ ವಿರೋಧ ಮಾಡುವುದು ಯಾಕೆ? ಎನ್ನುವುದೇ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಈಗ ಕ್ಯಾಬಿನೆಟ್ ಮುಂದೆ ತರುತ್ತಿರುವುದು ಜಾತಿ ಗಣತಿಯಲ್ಲ, ಅದು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ವರದಿ ಎಂದು ಸ್ಪಷ್ಟಪಡಿಸಿದರು.
ಸುಮಾರು 50 ಪ್ರಶ್ನೆಗಳನ್ನು ಹಾಕಿ, ವರದಿ ತಯಾರು ಮಾಡಲಾಗಿದೆ. ರಾಜ್ಯದ 31 ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ 2015ರಲ್ಲಿಯೇ ಆಯಾ ಶಾಲೆಯ ಶಿಕ್ಷಕರು ವರದಿ ಸಿದ್ಧ ಮಾಡಿದ್ದಾರೆ. ಸುಮ್ಮನೇ ವಿರೋಧ ಮಾಡುವುದು ಸರಿಯಲ್ಲ ಎಂದರು.ಕನ್ನಡ ರಾಜ್ಯೋತ್ಸವ ವೇಳೆಯಲ್ಲಿ ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ಮತ್ತು 50 ವಿಶೇಷ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಖರ್ಗೆ ಅವರು ತಮ್ಮ ಸೈಟ್ ವಾಪಸ್ ನೀಡಿದ್ದಾರೆ. ಅದರಂತೆ ಬಿಜೆಪಿ ನಾಯಕರು ಮತ್ತು ಜೆಡಿಎಸ್ ನಾಯಕರು ಪಡೆದಿರುವ ಸೈಟ್ ವಾಪಸ್ ನೀಡಲಿ ಎಂದು ಸವಾಲು ಹಾಕಿದರು. ಯಾರ್‍ಯಾರು ಎಷ್ಟೆಷ್ಟು ಸೈಟ್ ಪಡೆದಿದ್ದಾರೆ ಎನ್ನುವುದನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ, ಅವರನ್ನೇ ಕೇಳಿ, ಯಾವಾಗ ವಾಪಸ್ ನೀಡುತ್ತಾರೆ ಎಂದರು.ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಗೊತ್ತಿದ್ದರೂ ಮತ್ತೆ ಪ್ರಶ್ನೆ ಮಾಡಿದರೆ ಏನು ಹೇಳಲು ಆಗುತ್ತದೆ. ಉಪ ಚುನಾವಣೆಯಲ್ಲಿ ಇದೆಲ್ಲಕ್ಕೂ ಉತ್ತರ ದೊರೆಯಲಿದ್ದು, ಮೂರು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ಎಂದರು.