ಸಾರಾಂಶ
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ವಿರೋಧಿಸಿ ಬಿಜೆಪಿ ವತಿಯಿಂದ ಶನಿವಾರ ಟ್ರ್ಯಾಕ್ಟರ್ ಮೂಲಕ ಡಿಸಿ ಕಚೇರಿ ಆವರಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ : ಕೇವಲ ಮುಸ್ಲಿಂ ಸಮುದಾಯವನ್ನು ಓಲೈಸುವುಕ್ಕಾಗಿ ಹಾಗೂ ಮುಂದಿನ ಚುನಾವಣೆಗೆ ಓಲೈಸಿಕೊಳ್ಳಲು ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ವಿರೋಧಿಸಿ ಬಿಜೆಪಿ ವತಿಯಿಂದ ಶನಿವಾರ ಟ್ರ್ಯಾಕ್ಟರ್ ಮೂಲಕ ಡಿಸಿ ಕಚೇರಿ ಆವರಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ರೈತರ ಪರ ಯಾವುದೇ ಒಂದು ಯೋಜನೆ ತರದ ಸಿದ್ದರಾಮಯ್ಯ ಅವರು ರೈತರ ವಿರುದ್ಧ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಅಭಿವೃದ್ಧಿಗೆ ವಿರುದ್ದವಾಗಿದೆ, ಕೇವಲ ಮುಸಲ್ಮಾನರನ್ನು ಓಲೈಸುವ ಸಲುವಾಗಿಯೇ ಬಜೆಟ್ ಮಂಡಿಸಿ ದಾಗಿ. ಇದರಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದರು. ಹಾಸನ ಜಿಲ್ಲೆಯಲ್ಲಿಯೂ ಕಾಡಾನೆ ಸಮಸ್ಯೆ, ರೈಲ್ವೆ ಮೇಲೇತುವೆ, ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಹಣ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಷ್ಟು ಹಣ ಬಿಡುಗಡೆ ಮಾಡಿಲ್ಲ, ರೈತರ, ದಲಿತರ ವಿರುದ್ಧವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ರಸ್ತೆ, ಶಾಲಾ-ಕಾಲೇಜು ಕಟ್ಟಡಗಳು ಶಿಥಿಲವಾಗಿವೆ, ಕುಡಿಯುವ ನೀರಿನ ಸಮಸ್ಯೆಯಿಂದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಇವುಗಳ ಬಗ್ಗೆ ಕಾಳಜಿ ಇಲ್ಲದೆ ಒಂದು ಸಮುದಾಯ ಓಲೈಸುವ ಸಲುವಾಗಿ ಹಾಗೂ ಮತ ಗಳಿಕೆಗಾಗಿ ಬಜೆಟ್ ಮಂಡಿಸಲಾಗಿದೆ ಎಂದರು. ಎಲ್ಲಾ ಸಮುದಾಯ, ವರ್ಗಗಳ ಜನರಿಗೂ ನ್ಯಾಯ ಒದಗಿಸುವ ಸಲುವಾಗಿ ಬಜೆಟ್ ಮಂಡಿಸಬೇಕು ಬದಲಾಗಿ ಅಭಿವೃದ್ದಿ ಹಾಗೂ ಜನ ವಿರೋಧಿ ಬಜೆಟ್ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಹೋರಾಟ ರೂಪಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡುತ್ತಿದ್ದು, ಇದರಿಂದ ಈ ಸರ್ಕಾರ ದಲಿತ ವಿರೋಧಿ ಸರಕಾರ ಎಂದು ಕರೆಯಬಹುದು. ಯಾವುದೇ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಹಣ ಇಟ್ಟಿರುವುದಿಲ್ಲ. ಅಭಿವೃದ್ಧಿ ಕುಂಠಿತವಾಗಿ ಮುಂದಿನ ಚುನಾವಣೆಗೆ ಓಲೈಸಿಕೊಳ್ಳುವ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಮೋರ್ಚಾ ಮಾಜಿ ಅಧ್ಯಕ್ಷರಾದ ಚನ್ನಕೇಶವ, ಎಚ್.ಎನ್. ನಾಗೇಶ್, ಗುರುಪ್ರಸಾದ್, ಬಿಜೆಪಿ ರಾಜ್ಯ ಕಾರ್‍ಯಕಾರಣಿ ವಿಯಲಕ್ಷ್ಮಿ ಅಂಜನಪ್ಪ, ನಾಗೇಶ್, ಗಂಗಾಧರ್, ಮಂಜುನಾಥ್, ಭರತ್, ಅಶೋಕ್, ಗಣೇಶ್, ಇತರರು ಉಪಸ್ಥಿತರಿದ್ದರು.