ಸಾರಾಂಶ
ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿರುವುದು ಕಾಂಗ್ರೆಸ್ ಸರ್ಕಾರ. ಆದ ಕಾರಣ ಈ ಕಾಮಗಾರಿ ಪೂರ್ಣಗೊಂಡ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆತಂದು ಉದ್ಘಾಟನೆ ನೆರವೇರಿಸಲಿ .
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಬಾಗೂರು ಹೋಬಳಿಯ ಕಲ್ಲೆಸೋಮನಹಳ್ಳಿ ಏತ ನೀರಾವರಿ ಯೋಜನೆಯು ಪೂರ್ಣಗೊಳ್ಳದೆ ಉದ್ಘಾಟನಾ ಕಾರ್ಯಕ್ರಮ ಮಾಡಲು ಸ್ಥಳೀಯ ಶಾಸಕರಿಗೆ ಬಿಡುವುದಿಲ್ಲ ಎಂದು ಕಲ್ಲೆಸೋಮನಹಳ್ಳಿ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರು.ಕಾಂಗ್ರೆಸ್ ಸರ್ಕಾರವು ಬಾಗೂರು ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮತ್ತು ರೈತ ಬಾಂಧವರಿಗೆ ಕುಡಿಯುವ ನೀರು, ದನ, ಕರುಗಳಿಗೆ ಹಾಗೂ ವ್ಯವಸಾಯಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕಲ್ಲೆ ಸೋಮನಹಳ್ಳಿ ಏತ ನೀರಾವರಿ ಯೋಜನೆಯನ್ನು ರೂಪಿಸಲು ನೂರಾರು ಕೋಟಿ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಕಾಮಗಾರಿಯು ಪೂರ್ಣಗೊಳ್ಳದೇ ಸ್ಥಳೀಯ ಶಾಸಕ ಸಿ. ಎನ್. ಬಾಲಕೃಷ್ಣ ಅವರು ಕಾಮಗಾರಿಯನ್ನು ಉದ್ಘಾಟಿಸಲು ಮುಂದಾಗಿದ್ದಾರೆ. ಸ್ಥಳೀಯ ಶಾಸಕರು ಕಳೆದ ಎರಡು ದಿನಗಳ ಹಿಂದೆ ಉದ್ಘಾಟಿಸಲು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅದರಲ್ಲೂ ಈ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಆದರೆ, ಕೆಲ ಸ್ಥಳೀಯ ರಾಜಕಾರಣಿಗಳು ಸೇರಿಕೊಂಡು ಈ ಕಾಮಗಾರಿಯನ್ನು ಕೂಡಲೇ ಉದ್ಘಾಟಿಸುವಂತೆ ಒತ್ತಾಯಿಸುತಿದ್ದಾರೆ.
ಈ ಹಿನ್ನೆಲೆ ಕಾಮಗಾರಿಯನ್ನು ಪೂರ್ಣಗೊಳಿಸಿ ನಂತರ ಉದ್ಘಾಟಿಸುವುದು ಸೂಕ್ತ ಎಂದು ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಕೆಲಕಾಲ ಚರ್ಚಿಸಿದರು. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿರುವುದು ಕಾಂಗ್ರೆಸ್ ಸರ್ಕಾರ. ಆದ ಕಾರಣ ಈ ಕಾಮಗಾರಿ ಪೂರ್ಣಗೊಂಡ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆತಂದು ಉದ್ಘಾಟನೆ ನೆರವೇರಿಸಲಿ ಎಂದು ಕಲ್ಲೆ ಸೋಮನಹಳ್ಳಿ ಗ್ರಾಪಂ ಸದಸ್ಯ ಭಾರತೀಶ್, ಕೆಂಬಾಳು ಸ್ವಾಮಿ, ಭುವನಹಳ್ಳಿ ಬಸವರಾಜ್, ಲವಣ್ಣ ಇನ್ನು ಮುಂತಾದ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಎಇಇ ಮಂಜುನಾಥ್ ಇದ್ದರು.