ವಸತಿ ಶಾಲೆಯಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ: ಆರೋಪ

| Published : Aug 13 2024, 12:50 AM IST

ಸಾರಾಂಶ

ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶೈಲೇಶ ಪರಮಾನಂದ ಅವರು, ಸಮಸ್ಯೆ ಆಲಿಸಿ, ಪಾಲಕರ ಆಕ್ಷೇಪ ಕೇಳಿ, ಶಿಕ್ಷಕರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಕೆಲವು ವಿದ್ಯಾರ್ಥಿಗಳನ್ನು ಕರೆಯಿಸಿ ವಿಚಾರಿಸಿದಾಗ ಪ್ರಾಚಾರ್ಯರ ವರ್ಗಾವಣೆಯ ನಂತರ ಎಲ್ಲ ವ್ಯವಸ್ಥೆ ಸರಿಯಾಗಿದೆ ಎಂದು ತಿಳಿದುಬಂತು.

ದಾಂಡೇಲಿ: ಇಲ್ಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಊಟ ನೀಡುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪಾಲಕರು ಆಗ್ರಹಿಸಿದರು.ಶಾಲೆಗೆ ಭೇಟಿ ನೀಡಿದ ವಿದ್ಯಾರ್ಥಿಗಳ ಪಾಲಕರು, ನಗರದ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು ವರ್ಗಾವಣೆಗೊಂಡರೂ ಬೇರೆಯವರಿಗೆ ಚಾರ್ಜ್ ನೀಡದೇ ಹೋಗಿದ್ದಾರೆ. ಅದರಿಂದ ಆಗುತ್ತಿರುವ ಆಡಳಿತಾತ್ಮಕ ಸಮಸ್ಯೆಗಳನ್ನು ಶಿಕ್ಷಕರ ಗಮನಕ್ಕೆ ತಂದರು. ಅಲ್ಲದೇ ಈ ಕುರಿತು ಸಭೆ ನಡೆಸುವಂತೆ ಒತ್ತಾಯಿಸಿದರು. ನಂತರ ಆಲ್ಲಿದ್ದ ಸಹ ಶಿಕ್ಷಕರು ಶಾಲೆಗೆ ಆಗಮಿಸಿದ ಪಾಲಕರ ಜತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಇಲ್ಲಿ ಊಟ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಆಗ ಶಾಲೆಯ ಪ್ರಭಾರ ಪ್ರಾಚಾರ್ಯ ಸುಖದೇವಿ ಗುರವ ಅವರು, ಪ್ರಾಚಾರ್ಯರು ವರ್ಗಾವಣೆಗೊಂಡ ನಂತರ ಅಂದರೆ ಆ. ೫ರಿಂದ ಚಾರ್ಜ್ ವಹಿಸಿಕೊಂಡಿದ್ದೇನೆ. ಅದರ ಹಿಂದಿನದ್ದರ ಬಗ್ಗೆ ನಾನೇನೂ ಹೇಳಲಾರೆ ಎಂದರು.

ನಂತರ ಮಕ್ಕಳನ್ನು ಕರೆಯಿಸಿ ವಿಚಾರಿಸಿದಾಗಲೂ ಅವರು ನಮಗೆ ಕಳೆದ ೫- ೬ ದಿನಗಳಿಂದ ಊಟ ಸರಿಯಾಗಿ ಸಿಗುತ್ತಿದೆ. ಹಿಂದೆ ಸರಿ ಇರಲಿಲ್ಲ ಎಂದರು.

ನಂತರ ಸಭೆಯಲ್ಲಿ ನಗರಸಭಾ ಸದಸ್ಯ ಬುದ್ಧಿವಂತ ಗೌಡ ಪಾಟೀಲ್, ಭೀಮಶಿ ಬಾದುರ್ಲಿ ಮುಂತಾದವರು ಶಾಲೆಯ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ಮೇಲಧಿಕಾರಿಗಳ ಗಮನಕ್ಕೆ ತರುವಂತೆ ಒತ್ತಾಯಿಸಿದರು. ಪಾಲಕರೂ ಶಾಲೆಯೊಳಗಿನ ಸಮಸ್ಯೆಗಳ ಕುರಿತಂತೆ ತಿಳಿಸಿದರು.

ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶೈಲೇಶ ಪರಮಾನಂದ ಅವರು, ಸಮಸ್ಯೆ ಆಲಿಸಿ, ಪಾಲಕರ ಆಕ್ಷೇಪ ಕೇಳಿ, ಶಿಕ್ಷಕರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಕೆಲವು ವಿದ್ಯಾರ್ಥಿಗಳನ್ನು ಕರೆಯಿಸಿ ವಿಚಾರಿಸಿದಾಗ ಪ್ರಾಚಾರ್ಯರ ವರ್ಗಾವಣೆಯ ನಂತರ ಎಲ್ಲ ವ್ಯವಸ್ಥೆ ಸರಿಯಾಗಿದೆ ಎಂದು ತಿಳಿದುಬಂತು.

ನಗರಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರ, ಅಷ್ಪಾಕ ಶೇಖ್ ಉಪಸ್ಥಿತರಿದ್ದರು. ಪೊಲಿಸರು ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.