ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಟೌನ್‌ಶಿಪ್ ನಿರ್ಮಾಣ ಮಾಡುವ ತೀರ್ಮಾನ ಮಾಡಿದ್ದು ಕೇಂದ್ರ ಸಚಿವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಇದನ್ನು ನಾನು ಡಿನೋಟಿಫಿಕೇಷನ್ ಮಾಡಿ ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಲು ತಯಾರಿಲ್ಲ. ಬೇಕಾದರೆ ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ರೈತರಿಗೆ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಡದಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರನ್ನು ಉದ್ದೇಶಿಸಿ ಡಿ.ಕೆ.ಶಿವಕುಮಾರ್ ಮಾತನಾಡಿದರು.ನಾನು ಹೊರಗಡೆಯಿಂದ ಬಂದವನಲ್ಲ. ನಾನು ಕೂಡ ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶ ಮಾಡಿದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದು ರೈತರಿಗೆ ತಿಳಿದಿದೆ. ಇದರಿಂದ 16 ಸಾವಿರ ಎಕರೆ ಭೂಮಿ ಹೋಯಿತು. ಟೊಯೋಟಾ ಸೇರಿದಂತೆ ಒಂದಷ್ಟು ಕಂಪನಿಗಳು ಈ ಭಾಗಕ್ಕೆ ಬಂದವು. ಈ ಹಿಂದೆ ಕೈಗಾರಿಕಾ ಪ್ರದೇಶವಾದಾಗ ನನ್ನದೂ ಸಹ 12 ಎಕರೆ ಜಮೀನು ಹೋಗಿದೆ. ಆಗ ಪರಿಹಾರವನ್ನು 8 ಲಕ್ಷಕ್ಕೆ ಮೀರಿ ನೀಡಿಯೇ ಇಲ್ಲ ಎಂದರು.ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10 ಸಾವಿರ ಕೋಟಿ ರು. ಸಾಲ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಮ್ಮ ಒಂದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಸ್ವಾಧೀನವಾಗಿರುವ ಭೂಮಿಯನ್ನು ಕಾನೂನು ಚೌಕಟ್ಟು ಮೀರಿ ಕೈ ಬಿಡುವ ಹಂತದಲ್ಲಿ ನಾನಿಲ್ಲ ಎಂದರು.ಎಚ್‌ಡಿಕೆ ಪತ್ನಿ, ಮಗನಿಂದ ಪರಿಹಾರಕ್ಕೆ ಅರ್ಜಿ
ಕುಮಾರಸ್ವಾಮಿ ಅವರ ಧರ್ಮಪತ್ನಿಯವರು ಹಾಗೂ ಮಗ ಸೇರಿದಂತೆ ಶೇ. 70ರಷ್ಟು ಮಂದಿ ಪರಿಹಾರ ನೀಡಿ ಎಂದು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೇ. 30ರಷ್ಟು ಮಂದಿ ಮಾತ್ರ ಒಪ್ಪಿಗೆ ನೀಡಿಲ್ಲ. ಆದರೆ ನಾನು ನಿಮ್ಮ ಪರವಾಗಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ಯಾವ ರೀತಿ ಸಹಾಯ ಮಾಡಬೇಕು ಎಂದು ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.ನಾನು ಕೇವಲ ಬಿಡದಿ ಪ್ರದೇಶಕ್ಕೆ ಮಾತ್ರ ವಿಶೇಷವಾಗಿ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಸಾಧ್ಯವಿಲ್ಲ. ತೀರ್ಮಾನ ತೆಗೆದುಕೊಂಡರೆ ಇಡೀ ರಾಜ್ಯದ ಎಲ್ಲಾ ಭೂ ಸ್ವಾಧೀನಗಳ ಮೇಲೆ ಪರಿಣಾಮ ಬೀರಲಿದೆ. ಈ ಪ್ರದೇಶವನ್ನು ಕೈ ಬಿಡಬೇಕು ಎನ್ನುವ ಒತ್ತಡ ಕೂಡ ಇತ್ತು. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಡಿನೋಟಿಫಿಕೇಷನ್ ಮಾಡಲು ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ಬಂದಿವೆ ಎಂದರು.
ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ :ಈ ವೇಳೆ ಶಾಸಕ ಬಾಲಕೃಷ್ಣ ಅವರು ರೈತರ ಪರವಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ, ಬಾಲಕೃಷ್ಣ ಅವರು ನಿಮ್ಮ ಪರವಾಗಿ ಎಷ್ಟು ಹೋರಾಟ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ. ನನ್ನ ಹಿಂದೆ ಬಿದ್ದು ರೈತರ ಪರವಾಗಿ ಮಾತನಾಡಿದ್ದಾರೆ. ನಿಮ್ಮ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದೆ ಸಹಿ ಹಾಕಿದವರು ನಿಮ್ಮ ಪರವಾಗಿದ್ದಾರಾ? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 1 ಕೋಟಿ ಪರಿಹಾರ ನಿಗದಿ ಮಾಡಿದವರು ನಿಮ್ಮ ಪರವಾಗಿದ್ದಾರಾ? ಅವರು ಯಾರೂ ನಿಮ್ಮ ಪರವಾಗಿಲ್ಲ. ರೈತರಿಗೆ ಉತ್ತಮ ಪರಿಹಾರ ದೊರೆಯಬೇಕು ಎಂದು ಹೋರಾಟ ಮಾಡುತ್ತಿರುವ ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ. ನಿಮ್ಮ ಪರವಾಗಿ ಇವರಷ್ಟು ಹೋರಾಟವನ್ನು ಬೇರೆ ಯಾರೂ ಸಹ ಮಾಡಿಲ್ಲ ಎಂದರು.
ಈ ಹಿಂದೆ ಹೋರಾಟ ಮಾಡಲಿಲ್ಲ :ಡಿಎಲ್‌ಎಫ್ ಕಂಪೆನಿಯವರು ಈ ಪ್ರದೇಶವನ್ನು ತೆಗೆದುಕೊಂಡರು. ಆ ನಂತರ ಇಲ್ಲಿನ ವೃಷಭಾವತಿ ನೀರು ಸೇರಿದಂತೆ ಇತರೇ ಸಂಗತಿಗಳನ್ನು ಗಮನಿಸಿ ನಮ್ಮಿಂದ ಟೌನ್‌ಶಿಪ್ ಮಾಡಲು ಸಾಧ್ಯವಿಲ್ಲ ಎಂದು ಯೋಜನೆ ಕೈ ಬಿಟ್ಟರು. 9,600 ಎಕರೆ ಪ್ರದೇಶದಲ್ಲಿ ಸುಮಾರು 912 ಎಕರೆ ಪ್ರದೇಶವನ್ನು ಕೈಗಾರಿಕೆಗೆ ಎಂದು ನೀಡಲಾಯಿತು. ಎಕರೆಗೆ 1 ಕೋಟಿ ರು. ಹಾಗೂ ಅದಕ್ಕಿಂತ ಹೆಚ್ಚು ಪರಿಹಾರ ಹಣವನ್ನು ನಿಗದಿ ಪಡಿಸಲಾಯಿತು. ಆಗ ಯಾರೂ ಸಹ ವಿರೋಧ ಮಾಡಲಿಲ್ಲ. ಈಗ ಏಕೆ ವಿರೋಧ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಅವರು ಕೃಷ್ಣಾದಲ್ಲಿ ಸಭೆ ನಡೆಸಿ ಭೂಸ್ವಾಧೀನ ಕೈ ಬಿಡುವುದಾಗಿ ತಿಳಿಸಿದ್ದರು, ಅದರಂತೆ ನೀವು ಮಾಡಿ ಎಂದು ರೈತರು ಹೇಳಿದಾಗ, ಅವೆಲ್ಲ ಸುಳ್ಳು. ಯಾರೂ ಸಹ ಭೂಸ್ವಾಧೀನ ಕೈಬಿಡಲಿಲ್ಲ. ಈಗ ಅವರು ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರಿಂದಲೇ ಭೂಸ್ವಾಧೀನವನ್ನು ಬಿಡಿಸಿಕೊಳ್ಳಿ ಎಂದರು.ರೈತರಿಂದ ಡಿಕೆಶಿಗೆ ಮನವಿ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಡದಿ ಸಮಗ್ರ ಉಪ ನಗರ ನಿರ್ಮಾಣಕ್ಕಾಗಿ ನಡೆಸುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕೆಂದು ಒತ್ತಾಯಿಸಿ ರೈತರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಯ ರೈತರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ರೈತರು, ನಮಗೆ ಯಾವುದೇ ಪರಿಹಾರ ಬೇಡ, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ, ಪ್ರಾಣ ಕೊಡುತ್ತೇವೆ ಆದರೆ ಭೂಮಿ ಮಾತ್ರ ಕೊಡುವುದಿಲ್ಲ. ಅಭಿವೃದ್ಧಿ ಮಾಡಬೇಕಾದರೆ ನಮ್ಮ ಸಮಾಧಿಯ ಮೇಲೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಟೌನ್‌ಶಿಪ್ ನಿರ್ಮಿಸಲು ಉದ್ದೇಶಿಸಿರುವ ಜಮೀನು ಸಂಪೂರ್ಣ ನೀರಾವರಿ ಆಗಿದೆ. ಇಲ್ಲಿ ವೃಷಭಾವತಿ ಮತ್ತು ಸುವರ್ಣಮುಖಿ ನದಿ ಹರಿಯುತ್ತಿರುತ್ತವೆ. ಈ ಭಾಗದಲ್ಲಿ 10ಕ್ಕೂ ಹೆಚ್ಚು ಕೆರೆಗಳಿವೆ. ಈ ಜಮೀನು ಶೇ.90 ರಷ್ಟು ತೋಟಗಾರಿಕೆ ಭೂಮಿಯಾಗಿದ್ದು, ಲಕ್ಷಾಂತರ ಮರ ಗಿಡಗಳನ್ನು ಹೊಂದಿದೆ. 2000 ಎಕರೆಗೂ ಹೆಚ್ಚು ಭೂಮಿಯಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಮಾಸಿಕ ಆರು ಲಕ್ಷಕ್ಕೂ ಅಧಿಕ ಲೀಟರ್ ಹಾಲನ್ನು ಬೆಂಗಳೂರು ಡೇರಿಗೆ ಸರಬರಾಜು ಮಾಡಲಾಗುತ್ತದೆ. ಇಲ್ಲಿನ ಜನರು ವ್ಯವಸಾಯ ಮತ್ತು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಭೂ ಸ್ವಾಧಿನದ ಮೂಲಕ ನಮ್ಮ ಬದುಕನ್ನು ಸರ್ಕಾರ ಬೀದಿಗೆ ತರುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
--------4ಕೆಆರ್ ಎಂಎನ್ 3.ಜೆಪಿಜಿ
ರಾಮನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.