10ಕ್ಕೂ ಹೆಚ್ಚು ಸಿಬ್ಬಂದಿಗೆ 3 ವರ್ಷದಿಂದ ವೇತನ, ಸಾರಿಗೆ ಭತ್ಯೆ ಸಿಗದೆ ಪರದಾಟ

ಗುತ್ತಿಗೆ ಆಧಾರದ ಮೇಲೆ ನೀರುಗಂಟಿ, ಟ್ರ್ಯಾಕ್ಟರ್‌-ಜೆಸಿಬಿ ಚಾಲಕ, ಕಸ ಸಂಗ್ರಹಗಾರರ ಸ್ಥಿತಿ ಡೋಲಾಯಮಾನ

ಅಂಬಳೆ ವೀರಭದ್ರನಾಯಕ

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣ ಪಂಚಾಯ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 10ಕ್ಕೂ ಹೆಚ್ಚು ಸಿಬ್ಬಂದಿಗಳ ಟೆಂಡರ್‌ ಪ್ರಕ್ರಿಯೆ ಕಳೆದ 3 ವರ್ಷಗಳಿಂದ ವಿಳಂಬವಾಗಿದ್ದು, ಸಿಬ್ಬಂದಿ ಅನಿಶ್ಚಿತತೆಯಲ್ಲಿ ಕೆಲಸ ಮಾಡುವಂತಾಗಿದೆ.


ಪಟ್ಟಣ ಪಂಚಾಯ್ತಿಯಲ್ಲಿ ಜೆಸಿಬಿ, ಟ್ರ್ಯಾಕ್ಟರ್‌ ಚಾಲಕ, ನೀರುಗಂಟಿ, ನೀರು ಸರಬರಾಜುದಾರರು, ಕಸ ಸಂಗ್ರಹಗಾರರು, ಕಂಪ್ಯೂಟರ್‌ ಡಾಟಾ ಎಂಟ್ರಿ ಆಪರೇಟರ್‌ ಸೇರಿದಂತೆ ಒಟ್ಟು10ಕ್ಕೂ ಹೆಚ್ಚು ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ದಿನನಿತ್ಯದ ಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ.

ನಿಯಮದ ಪ್ರಕಾರ ಪ್ರತಿ ವರ್ಷ ಟೆಂಡರ್‌ ಪ್ರಕ್ರಿಯೆ ಮೂಲಕ ಏಜೆನ್ಸಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ ಕಳೆದ 3 ವರ್ಷಗಳಿಂದ ಟೆಂಡರ್‌ ಕರೆಯದೆ ಕೆಲಸ ಮಾಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಿಬ್ಬಂದಿಗೆ ಸಂಬಳ ತೊಂದರೆ:

ಉಡುಪಿ ಮೂಲದ ಶ್ರೀಸಾಯಿ ಟೆಂಡರ್‌ ನವೀಕರಣವಾಗದ ಕಾರಣ ಸಿಬ್ಬಂದಿಗೆ ಪ್ರತಿ ತಿಂಗಳು ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಇಎಸ್‌ಐ, ಇಪಿಎಫ್‌ ಸೌಲಭ್ಯಗಳೂ ಸರಿಯಾಗಿ ದೊರೆಯುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಪುರಸಭೆಯ ಶುದ್ಧ ಕುಡಿಯುವ ನೀರು ಪೂರೈಕೆ, ಕಸ ವಿಲೇವಾರಿ, ಕಚೇರಿ ಕೆಲಸಗಳೆಲ್ಲಾ ಇವರ ಮೇಲೆ ಅವಲಂಬಿತವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

2024-25, 2025-26, 2026-27ನೇ ಸಾಲಿನಿಂದ ಕಾಲ ಕಾಲಕ್ಕೆ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಕೆಲಸಗಾರರನ್ನು ಪ್ರತಿಯೊಂದು ವರ್ಷಕ್ಕೆ ಇಎಸ್‌ಐ, ಪಿಎಫ್ ಜಮಾ ಮಾಡಬೇಕು. ಜತೆಗೆ ಪ್ರತಿ ವರ್ಷ ಹೊರಗುತ್ತಿಗೆ ಕೆಲಸಗಾರರಿಗೆ ಆದೇಶ ಪತ್ರವನ್ನು ನೀಡಬೇಕು. ಈ ಬಗ್ಗೆ ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳು ಟೆಂಡರ್‌ ಪ್ರಕ್ರಿಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕಂದಾಯ ನಷ್ಟವಾಗುವ ಜೊತೆಗೆ ಸಿಬ್ಬಂದಿ ಬದುಕು ಪ್ರಶ್ನಾರ್ಹವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೂಡಲೇ ಪಾರದರ್ಶಕವಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿ ಸಿಬ್ಬಂದಿಗೆ ಸೂಕ್ತ ವೇತನ ಹಾಗೂ ಸೌಲಭ್ಯ ಕಲ್ಪಿಸಬೇಕಾಗಿದೆ.ಕಸ ವಿಲೇವಾರಿಗೂ ತೊಂದರೆ:

ಪಟ್ಟಣ 11 ವಾರ್ಡ್‌ಗಳಲ್ಲಿ ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಸರಬರಾಜು, ಘನ ತ್ಯಾಜ್ಯ ತೆರವು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯ್ತಿ ವಿಫಲವಾಗಿದೆ.

ಆದರೆ ಸ್ಥಳೀಯ ಆಡಳಿತ ಹೊರಗುತ್ತಿಗೆ ನೌಕರರ ಹಿತದೃಷ್ಟಿಯಿಂದ ಟೆಂಡರ್‌ ಕರೆದು ಈಗಿರುವ ಗುತ್ತಿಗೆ ನೌಕರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಬೇಜವಾಬ್ದಾರಿತನದಿಂದ 3 ವರ್ಷಗಳ ಹಿಂದೆ ಹೊರಗುತ್ತಿಗೆ ನೌಕರರು ಯಾವುದೇ ಸಂಬಳ, ಸಾರಿಗೆ ಇಲ್ಲದೆ ಮುಂದೊಂದು ದಿನ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶದಿಂದ ನವೀಕರಣ ಆಗದೆ ಇದ್ದರೂ ಕೂಡ ಟೆಂಡರ್‌ ಕೆಲಸದಲ್ಲಿ ಮುಂದುವರಿದುಕೊಂಡು ಹೋಗುತ್ತಿದ್ದಾರೆ ಇನ್ನಾದರೂ ಪಟ್ಟಣ ಪಂಚಾಯ್ತಿ ಟೆಂಡರ್‌ ಕರೆದು ನೌಕರರ ಹಿತ ಕಾಯಬೇಕಾಗಿದೆ.

--ಯಳಂದೂರು ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಹೊರಗುತ್ತಿಗೆ ಟೆಂಡರ್‌ ಕರೆಯದೇ ಇರುವ ಬಗ್ಗೆ ಮುಖ್ಯಾಧಿಕಾರಿಗಳಗೆ ಸೂಚಿಸಿ ಮೇಲಧಿಕಾರಿಗಳಿಗೆ ಮರು ಟೆಂಡರ್‌ ನಡೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.

ನಯನಾ, ವಿಶೇಷಾಧಿಕಾರಿ, ಪಟ್ಟಣ ಪಂಚಾಯ್ತಿ

---

20 ವೈಎಲ್‌ಡಿ ಚಿತ್ರ 01 ನಯನಾ, ವಿಶೇಷಾಧಿಕಾರಿ, ಪಟ್ಟಣ ಪಂಚಾಯಿತಿ

--

22ಸಿಎಚ್ಎನ್‌13 ಯಳಂದೂರು ಪಟ್ಟಣ ಪಂಚಾಯಿತಿ ಕಚೇರಿ