ದ್ವೇಷದಿಂದ ಯಾವುದನ್ನೂ ಗಳಿಸಲು ಸಾಧ್ಯವಿಲ್ಲ: ಫಕೀರ ಸಿದ್ಧರಾಮ ಸ್ವಾಮಿಗಳು

| Published : Mar 24 2025, 12:32 AM IST

ಸಾರಾಂಶ

ಜಾತ್ರೆ, ಹಬ್ಬಗಳು ಸರ್ವ ಸಮುದಾಯದ ಜನರಲ್ಲಿ ಒಗ್ಗಟ್ಟಿನ ಮನೋಭಾವನೆ ಮೂಡಿಸುತ್ತಿವೆ. ಸಮಸಮಾಜ ನಿರ್ಮಾಣವಾಗುತ್ತಿವೆ.

ಶಿಗ್ಗಾಂವಿ: ದ್ವೇಷ, ಅಸೂಯೆಯಿಂದ ಯಾವುದನ್ನು ಗಳಿಸಲು ಸಾಧ್ಯವಿಲ್ಲ ಎಂಬ ಸತ್ಯಾಂಶವನ್ನು ಎಲ್ಲರೂ ಅರಿಯಬೇಕು. ಬದುಕಿನಲ್ಲಿ ಪ್ರೀತಿ, ವಿಶ್ವಾಸಗಳಿಂದ ನಡೆದಾಗ ಸರ್ವ ಸಮುದಾಯದ ಜನರಲ್ಲಿ ಪರಸ್ಪರ ಸಂಬಂಧಗಳು ಅಧಿಕವಾಗುತ್ತಿವೆ ಎಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.ತಾಲೂಕಿನ ಸದಾಶಿವಪೇಟೆ ಶರಣಬಸವೇಶ್ವರ ದಾಸೋಹ ಮಠದಲ್ಲಿ ಶರಣಬಸವೇಶ್ವರರ ೪೫ನೇ ವರ್ಷದ ಪುರಾಣ ಮಹಾಮಂಗಲ, ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜಾತ್ರೆ, ಹಬ್ಬಗಳು ಸರ್ವ ಸಮುದಾಯದ ಜನರಲ್ಲಿ ಒಗ್ಗಟ್ಟಿನ ಮನೋಭಾವನೆ ಮೂಡಿಸುತ್ತಿವೆ. ಸಮಸಮಾಜ ನಿರ್ಮಾಣವಾಗುತ್ತಿವೆ. ಹೀಗಾಗಿ ಪ್ರತಿ ಗ್ರಾಮಗಳಲ್ಲಿ ವಿವಿಧ ದೇವರ ಹೆಸರಿನಲ್ಲಿ ಜಾತ್ರೆ, ಹಬ್ಬಗಳನ್ನು ನೆರವೇರಿಸುವ ಮೂಲಕ ಶಾಂತಿ, ನೆಮ್ಮದಿಗೆ ಕಾರಣವಾಗುತ್ತಿವೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಪಡಿಸಲು ಸಾಧ್ಯವಾಗಿವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಿದೆ ಎಂದರು.ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ತಂದೆ- ತಾಯಿಗಿಂತ ಬೇರೆ ದೇವರಿಲ್ಲ. ಹೀಗಾಗಿ ಅವರನ್ನು ಗೌರವಿಸಿ. ಅಂತಹ ದೇವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ. ಅದು ನಮ್ಮ ದೇಶದ ಸಂಸ್ಕಾರವಲ್ಲ. ಶರಣರ ಸಂದೇಶಗಳನ್ನು ಬದುಕಿಗೆ ಅಳವಡಿಸಿಕೊಳ್ಳಿ. ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ. ಆದರೆ, ತಂದೆ- ತಾಯಿ ಸಿಗಲು ಸಾಧ್ಯವಿಲ್ಲ ಎಂದರು.ಶರಣ ಬಸವೇಶ್ವರ ದಾಸೋಹ ಮಠದ ಶಿವದೇವ ಶರಣ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಗದಗಯ್ಯ ಮಹಾಂತಿನಮಠ, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕುಮಾರ ಶಾಸ್ತ್ರಿ ಹಿರೇಮಠ, ಬಾದಾಮಿ ರಮೇಶ ಗವಾಯಿ, ಫಕೀರಪ್ಪ ವಡವಿ, ನರಸಲಗಿ ಚನ್ನಬಸವ ಕುಮಾರ ಹೂಗಾರ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.ವಿಕಸಿತ ಭಾರತದಲ್ಲಿ ಯುವಜನರಿಗೆ ಹೆಚ್ಚಿನ ಅವಕಾಶ

ರಾಣಿಬೆನ್ನೂರು: ವಿಕಸಿತ ಭಾರತದಲ್ಲಿ ಯುವಜನರಿಗೆ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಅವುಗಳನ್ನು ಬಳಸಿಕೊಳ್ಳಲು ಬೇಕಾದ ಸಂಕಲ್ಪಶಕ್ತಿ ಮತ್ತು ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಮಹಿಳಾ ಸೇವಾ ಸಮಾಜ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಪ್ರವೀಣ ಕಮ್ಮಾರ ತಿಳಿಸಿದರು.ನಗರದ ಕೆಎಲ್‌ಇ ಸಂಸ್ಥೆಯ ರಾಜ- ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿಕಸಿತ ಭಾರತ 2047 ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಾ. ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಅನುರಾಧ ಎಸ್., ಪ್ರೊ. ಶ್ರೀಕಾಂತ ಕುಂಚೂರ, ಪ್ರೊ. ರೇಖಾ ಶಿಡೇನೂರ, ಪ್ರೊ. ಸಾಯಿಲತಾ ಮಡಿವಾಳರ, ಭಾಗ್ಯವತಿ ದೇಶಪಾಂಡೆ, ಅಕ್ಷತಾ ಅಲಗಿಲವಾಡ, ಸಿಬ್ಬಂದಿ ಉಪಸ್ಥಿತರಿದ್ದರು.