ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಡ್ರಗ್ಸ್ ಜಾಲದ ವಿರುದ್ಧ ಕರ್ನಾಟಕ ಸರ್ಕಾರ ಯುದ್ಧವನ್ನೇ ಸಾರಿದೆ. ಡ್ರಗ್ಸ್ ಪೂರೈಸುವ ಪೆಡ್ಲರ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಅವರು ಪೊಲೀಸ್ ವಸತಿಗೃಹ ಹಾಗೂ ನೂತನ ಠಾಣಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರು.ಡ್ರಗ್ಸ್ ಹಾವಳಿ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿ ಮತ್ತು ನಾನು ಮಾತನಾಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಡ್ರಗ್ಸ್ ಜಾಲದ ಹಿಂದಿನ ಶಕ್ತಿಗಳನ್ನು ಮಟ್ಟಹಾಕುವ ಕೆಲಸ ನಡೆಯುತ್ತಿದೆ. ಈ ಜಾಲದ ಹಿಂದೆ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಕೈವಾಡವೂ ಪತ್ತೆಯಾಗುತ್ತಿದ್ದು, ಅಂತಹವರ ಬಗ್ಗೆ ಆಯಾ ದೇಶಗಳ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ಗೂಂಡಾ ಕಾಯ್ದೆ ಹಾಕಿದ್ದು, ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದರು.
ಡ್ರಗ್ಸ್ ಪತ್ತೆಯಾದರೆ ಪೊಲೀಸರೇ ಹೊಣೆ: ಡ್ರಗ್ಸ್ ದಂಧೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಪಣ ತೊಟ್ಟಿದೆ. ಅದಕ್ಕಾಗಿ ಪೊಲೀಸರು ಶಕ್ತಿಮೀರಿ ಶ್ರಮಿಸಬೇಕು. ಇದರ ಹೊರತೂ ಡ್ರಗ್ಸ್ ದಂಧೆ ಪತ್ತೆಯಾದರೆ ಅದಕ್ಕೆ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವ ಡಾ.ಪರಮೇಶ್ವರ್ ಎಚ್ಚರಿಕೆ ನೀಡಿದರು.ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಮ್ಮದೇ ಮಕ್ಕಳು ದಂಧೆಗೆ ಸಿಲುಕಿ ಹಾಳಾಗುತ್ತಾರೆ. ಹಾಗಾಗಿ ಇನ್ನು ಮುಂದೆ ಶಾಲಾ ಕಾಲೇಜುಗಳಿಗೆ ಪೊಲೀಸರೇ ಭೇಟಿ ನೀಡಿ ಡ್ರಗ್ಸ್ ಸೇರಿದಂತೆ ಮಾದಕದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ತಿಂಗಳು ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸೇವನೆ ವಿರುದ್ಧ ಮನವರಿಕೆ ಮಾಡಬೇಕು ಎಂದರು.
ಹಿಂದೆ ಗಾಂಜಾ ಬೆಳೆಯುತ್ತಿದ್ದರು, ಈಗ ಸಿಂಥೆಟಿಕ್ಸ್ ಡ್ರಗ್ಸ್ ಜಾಲ ಹಬ್ಬುತ್ತಿದೆ. ಡ್ರಗ್ಸ್ ಸೇವನೆಯಿಂದ ಯುವ ಜನತೆ ಹಾಳಾಗುತ್ತಿದ್ದು, ನ್ಯೂರೋ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಎಲ್ಲರ ಮಕ್ಕಳೂ ನಮ್ಮ ಮಕ್ಕಳೇ ಎಂದು ತಿಳಿದುಕೊಂಡು ಪೊಲೀಸರು ಡ್ರಗ್ಸ್ ವಿರುದ್ಧ ಭಾರಿ ಸಮರವನ್ನೇ ಸಾರಬೇಕು ಎಂದು ಸಚಿವರು ಹೇಳಿದರು.ನಕ್ಸಲರು ಶರಣಾದರೆ ಒಳ್ಳೇದು: ವಿಕ್ರಂ ಗೌಡನ ಹತ್ಯೆ ಬಳಿಕ ನಕ್ಸಲರ ಹಾದಿ ಕಠಿಣವಾಗಿದೆ. ಆತನ ಸಹಚರರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಶರಣಾಗುವಂತೆ ನಕ್ಸಲರಿಗೆ ಅವಕಾಶ ನೀಡಲಾಗಿದೆ. ಇದನ್ನು ಒಪ್ಪಗೆ ನಕ್ಸಲ್ ಆಗಿ ಮುಂದುವರಿಯುವುದು ಬೇಡ. ಶರಣಾಗುವ ನಕ್ಸಲರಿಗೆ ಸರ್ಕಾರದಿಂದಲೇ ಜೀವನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಶರಣಾಗುವಂತೆ ನಕ್ಸಲರಿಗೆ ಅರಣ್ಯಗಳಲ್ಲಿ ಕೂಂಬಿಂಗ್ ನಿರತ ಪೊಲೀಸ್ ಪಡೆ ಆಹ್ವಾನ ನೀಡಿದೆ. ಹಾಗಾಗಿ ಶರಣಾದರೆ ನಕ್ಸಲರಿಗೆ ಒಳ್ಳೆಯದು ಎಂದರು.
ಕಾನೂನು ರೀತ್ಯಾ ಕ್ರಮ:ಮುಸ್ಲಿಂ ವೋಟ್ ಬ್ಯಾನ್ ಹೇಳಿಕೆ ನೀಡಿದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ಕಾನೂನಿನ ಎದುರು ನಾನು ಸೇರಿದಂತೆ ಎಲ್ಲರೂ ಸಮಾನರು. ಚಂದ್ರಶೇಖರ ಸ್ವಾಮೀಜಿ ಕೂಡ ಕಾನೂನು ಎದುರು ದೊಡ್ಡವರಲ್ಲ. ಕಾನೂನು ಬೇರೆ ಬೇರೆ ಇದ್ದರೆ ಉಪಯೋಗಿಸಬಹುದು. ಈ ದೇಶದಲ್ಲಿರುವ ಕಾನೂನು ಎಲ್ಲರಿಗೂ ಒಂದೇ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನೇ ಪೊಲೀಸ್ ಇಲಾಖೆ ಮಾಡುತ್ತದೆ. ಅವರ ಬಂಧನ ಪ್ರಕ್ರಿಯೆ ಬಗ್ಗೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.ಬಿಜೆಪಿಯವರ ಪತ್ರ ಇರಬಹುದು!: ಹಾಸನದಲ್ಲಿ ಕಾಂಗ್ರೆಸ್ ನಡೆಸುವ ಸ್ವಾಭಿಮಾನ ಸಮಾವೇಶಕ್ಕೆ ಅಸಮಾಧಾನದ ಅನಾಮಧೇಯ ಪತ್ರದ ಕುರಿತಂತೆ ಮಾತನಾಡಿದ ಡಾ.ಪರಮೇಶ್ವರ್, ಸಮಾವೇಶಕ್ಕೆ ಯಾರ ಅಸಮಾಧಾನವೂ ಇಲ್ಲ. ಅನಾಮಧೇಯ ಪತ್ರವನ್ನು ಬಿಜೆಪಿಯವರು ಯಾಕೆ ಬರೆಯಬಾರದು, ಅವರೇ ಅನಾಮಧೇಯ ಪತ್ರಗಳನ್ನು ಬರೆಯುತ್ತಾರೆ ಎಂದು ಆರೋಪಿಸಿದರು.
ಅದು ನಮಗೆ ಲೆಕ್ಕ ಇಲ್ಲ, ನಮ್ಮಲ್ಲಿ ಯಾವುದೇ ಅಪಸ್ವರ ಇಲ್ಲ. ನಾನು ತುಮಕೂರಿನಲ್ಲಿ ಸಮಾವೇಶ ಮಾಡಲು ಹೊರಟಿದ್ದೆ. ಆದರೆ ನಮಗೆ ಬೇರೆ ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಸನದಲ್ಲಿ ಪಕ್ಷದಿಂದಲೇ ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ ಎಂದು ಡಾ.ಪರಮೇಶ್ವರ್ ಹೇಳಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ, ಸಂಪುಟ ಪುನರ್ ರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಾ.ಪರಮೇಶ್ವರ್, ಇವೆರಡು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.