ಬಸ್ ನಿಲ್ದಾಣಗಳಲ್ಲಿನ ತಂಬಾಕು ಮಾರಾಟಗಾರರ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

| Published : Jan 30 2025, 12:33 AM IST

ಬಸ್ ನಿಲ್ದಾಣಗಳಲ್ಲಿನ ತಂಬಾಕು ಮಾರಾಟಗಾರರ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಂಡುಬಂದಿದ್ದು, ಅಂತಹ ಅಂಗಡಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಂಡುಬಂದಿದ್ದು, ಅಂತಹ ಅಂಗಡಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ತಂಬಾಕು ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ಹಾವೇರಿ ನಗರ ಸೇರಿದಂತೆ ವಿವಿಧ ತಾಲೂಕು ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಪತ್ತೆಯಾಗಿದ್ದು, ಅಂತಹ ಮಾರಾಟಗಾರರಿಗೆ ಮಳಿಗೆ ನೀಡಬಾರದು ಎಂದು ಸೂಚನೆ ನೀಡಿದರು.ಶಾಲಾ-ಕಾಲೇಜುಗಳ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ಆದರೆ ಜಿಲ್ಲೆಯ 75 ವಿವಿಧ ಶಾಲಾ-ಕಾಲೇಜುಗಳ ಸಮೀಪ ಕಾನೂನು ಉಲ್ಲಂಘನೆ ಮಾಡಿದ್ದು, ಆಯಾ ಶಾಲಾ-ಕಾಲೇಜುಗಳ ವ್ಯಾಪ್ತಿಯ ಸ್ಥಳೀಯ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಶಾಲಾ-ಕಾಲೇಜುಗಳ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ತಡೆಗೆ ಕ್ರಮಕೈಗೊಳ್ಳಬೇಕು. ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಮಾಡಬೇಕು ಹಾಗೂ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು. ತಂಬಾಕು ಉತ್ಪನ್ನಗಳ ಪೊಟ್ಟಣ ಮೇಲೆ ಹೊಸ ಚಿತ್ರಾತ್ಮಕ ಆರೋಗ್ಯ ಚಿಹ್ನೆಗಳ ಕುರಿತು ಪರಿಶೀಲನೆ ನಡೆಸಬೇಕು ಹಾಗೂ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ವ್ಯಾಪ್ತಿಗಳಲ್ಲಿ ತಂಬಾಕು ಮಾರಾಟಗಾರರಿಗೆ ನಿಯಮಾನುಸಾರ ಪ್ರತ್ಯೇಕ ಪರವಾನಗಿ ನೀಡಬೇಕು ಎಂದು ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ಡಾ.ಸಂತೋಷ ಅವರು ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 62 ದಾಳಿ ನಡೆಸಿ, 606 ಪ್ರಕರಣ ದಾಖಲಿಸಲಾಗಿದೆ ಹಾಗೂ 48,090 ರು. ದಂಡ ಸಂಗ್ರಹಣೆ ಮಾಡಲಾಗಿದೆ. 2,378 ಪುರುಷ ಹಾಗೂ 1651 ಮಹಿಳೆಯರು ಸೇರಿ 4,029 ಜನರಿಗೆ ಆಪ್ತಸಮಾಲೋಚನೆ ನಡೆಸಲಾಗಿದೆ. ನಿಕೋಟಿನ್ ಗಮ್ಸ್ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಅನುಷ್ಠ್ಠಾನದ ಕುರಿತು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಜಿಲ್ಲಾ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಜಗದೀಶ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ವಿವಿಧ ತಾಲೂಕುಗಳ ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.