ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೆ.ಆರ್. ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆ ಆಹಾರ ಸರಬರಾಜು ಹಾಗೂ ಸ್ಪಚ್ಛತೆಯ ಬಗ್ಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.ನಗರದ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಶುದ್ಧ ಕುಡಿಯುವ ನೀರಿಲ್ಲ, ಮೆನು ಪ್ರಕಾರ ಆಹಾರ ವಿತರಣೆ ಮಾಡುತ್ತಿಲ್ಲ, ಅಶುಚಿತ್ವ, ಅನೈರ್ಮಲ್ಯ, ಕಳಪೆ ಗುಣಮಟ್ಟದ ಆಹಾರ ಕಿಟ್ ವಿತರಣೆ ಹಾಗೂ ರೋಗಿಗಳಿಗೆ ದೊರೆಯದ ಗುಣಮಟ್ಟದ ಚಿಕಿತ್ಸೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚಿಸಿದರು.
ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್. ಆಸ್ಪತ್ರೆಯಲ್ಲಿ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಪರಿಶೀಲನೆ ವೇಳೆ ಅನೇಕ ನ್ಯೂನತೆಗಳು ಕಂಡು ಬಂದಿವೆ. ಹೀಗಾಗಿ, ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲು 4 ವಾರಗಳ ಗಡುವು ನೀಡಲಾಗಿದೆ. ಅಲ್ಲದೆ, ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿದೆ ಹೇಳಿದರು.ನೀರು, ಆಹಾರ ಸರಿಯಿಲ್ಲ
ಕೆ.ಆರ್. ಆಸ್ಪತ್ರೆಯಲ್ಲಿ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಶುದ್ಧ ಕುಡಿಯುವ ನೀರಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವ ಯಂತ್ರಗಳು ಕೆಟ್ಟು ನಿಂತಿವೆ. ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಚೆಲುವಾಂಬ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಮೆನು ಪ್ರಕಾರ ಆಹಾರ ನೀಡದಿರುವುದು ಗಮನಕ್ಕೆ ಬಂದಿದೆ. ಈ ದಿನ ಪಲ್ಯ, ಮೊಸರು ನೀಡಿರಲಿಲ್ಲ. ನೋಟಿಸ್ ಕೊಡುವಂತೆ ಸೂಚನೆ ಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಮೆನು ಚಾರ್ಟ್ ಅಳವಡಿಸಬೇಕು ಎಂದರು.
ಗುಣಮಟ್ಟದ ಆಹಾರ ಕೊಡಬೇಕು. ಟೆಂಡರ್ ದಾರ ತನ್ನ ಮನೆಯ ಹಣದಿಂದ ಆಹಾರ ನೀಡುವುದಿಲ್ಲ. ರೋಗಿಗಳ ಕುಟುಂಬದವರು ಅವನ ಹಿಂದೆ ಅಲೆಯಬೇಕಿಲ್ಲ. ಸರ್ಕಾರ ಬಡವರಿಗಾಗಿ ರೂಪಿಸಿರುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕು ಎಂದು ಅವರು ಸೂಚಿಸಿದರು.ಪರಿಶೀಲನೆ ವೇಳೆ ಆಹಾರದ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಇದನ್ನು ಗುಣಮಟ್ಟ ಪರೀಕ್ಷೆಗೆ ಲ್ಯಾಬ್ ಗೆ ಕೊಡಲಾಗುತ್ತದೆ. ಅಲ್ಲಿಂದ ವರದಿ ಬಂದ ಬಳಿಕ ಊಟ ಕೊಡುವ ಟೆಂಡರ್ ದಾರರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಅವರು ಎಚ್ಚರಿಸಿದರು.
ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ. ಚೆಲುವಾಂಬ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಾರ್ಡ್ ನಡುವೆ ತುಂಬಾ ಗಲೀಜು ಇದೆ. ಮೂಗು ಮುಚ್ಚಿಕೊಂಡು ಹೋಗಬೇಕು. 2 ದಿನಗಳಲ್ಲಿ ಶುಚಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ ಎಂದರು.ಇದೇ ಸಂದರ್ಭದಲ್ಲಿ ಶುಶ್ರೂಷಕರ ಮೇಲ್ವಿಚಾರಕಿ ಲೀಲಾವತಿ ಮತ್ತು ಐಎನ್ ಯು ವಿಭಾಗದ ಲಾರೆನ್ಸ್ ಎಂಬವರ ಅಮಾನತಿಗೆ ಸೂಚನೆ ನೀಡಿದರು.
ಅವಲಕ್ಕಿಯಲ್ಲಿ ಹುಳುಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾದ ಅವಲಕ್ಕಿಯಲ್ಲಿ ಹುಳುಗಳು ಇವೆ. ಅವಧಿ ಮೀರಿದ ರವೆಯನ್ನು ನೀಡಲಾಗಿದೆ. ಚೆಲುವಾಂಬ ಆಸ್ಪತ್ರೆಯ ಎನ್‌ಆರ್ ಸಿ ಘಟಕದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ 13 ಮಕ್ಕಳಿದ್ದಾರೆ. ಅವರಿಗೆ ನೀಡಲಾದ ಆಹಾರ ಕಿಟ್ ಕಳಪೆಯಾಗಿದೆ. ಆಹಾರವನ್ನು ಯಾವ ಕಂಪನಿಯಿಂದ ಖರೀದಿಸಲಾಗಿದೆ. ಬಳಸುವ ಅವಧಿ ಯಾವುದೂ ಇಲ್ಲ. ಅಧಿಕಾರಿಗಳು ಹಣ ಉಳಿಸಲು ಕಡಿಮೆ ಗುಣಮಟ್ಟದ ಪದಾರ್ಥಗಳನ್ನು ಖರೀದಿ ಮಾಡಿದ್ದಾರೆ. ಇದು ಕ್ರಿಮಿನಲ್ ಅಪರಾಧ ಎಂದು ಅವರು ತಿಳಿಸಿದರು.
ಗೋದಾಮಿನಲ್ಲಿ ಹೊಸ ಬೆಡ್ಕಿತ್ತು ಹೋಗಿರುವ ಹಳೆಯದಾದ ಬೆಡ್ ನಲ್ಲಿ ರೋಗಿಗಳು ಮಲಗಿದ್ದಾರೆ. ಆದರೆ, ಗೋದಾಮಿನಲ್ಲಿ 250 ಹೊಸ ಬೆಡ್ ಗಳು ತುಂಬಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಕಾರಣ ಹೇಳುತ್ತಾರೆ. ವಾರ್ಡ್ ಗಳಿಂದ ಬೇಡಿಕೆ ಬಂದಿಲ್ಲ ಎನ್ನುತ್ತಾರೆ. 6 ತಿಂಗಳ ಹಿಂದೆ ಬಂದಿರುವ ಬೆಡ್ ಗಳನ್ನು ವಿತರಿಸಲು ಅಧಿಕಾರಿಗಳಿಗೆ ಸಮಯ ಇಲ್ಲವಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಯೋಗದ ಸದಸ್ಯರಾದ ಸುಮಂತರಾವ್, ರೋಹಿಣಿ, ವಿಜಯಲಕ್ಷ್ಮೀ, ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕಿ ಡಾ. ದಾಕ್ಷಾಯಿಣಿ ಮೊದಲಾದವರು ಇದ್ದರು.