ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ನೀಡದ ಹಿನ್ನೆಲೆಯಲ್ಲಿ ನೊಂದಿರುವ ಸುಜಾತಾ ಪೋಳ ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್‌ ಮತ್ತು ಕುಲಸಚಿವ ಸಂತೋಷ ಕಾಮಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ತನಗೆ ಪಿಎಚ್‌ಡಿ ಪದವಿ ನೀಡಲಿಲ್ಲ ಎಂದು ನೊಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರ್‌ಸಿಯು ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸುಜಾತಾ ಸಿದ್ದಪ್ಪ ಪೋಳ ಪ್ರಕರಣ ಈಗ ಮತ್ತೆ ತಿರುವು ಪಡೆದುಕೊಂಡಿದೆ.

ಆರ್‌ಸಿಯು ಕುಲಸಚಿವ ಸಂತೋಷ ಕಾಮಗೌಡ ಅವರು ವಿದ್ಯಾರ್ಥಿನಿ ಸುಜಾತಾಗೆ ನಿಮ್ಮ ಪಿಎಚ್‌ಡಿ ಪದವಿ ಪ್ರದಾನ ಮಾಡುವುದನ್ನು ಏಕೆ ತಡೆ ಹಿಡಿಯಬಾರದು? ಮುಂದಿನ ಯಾವುದೇ ಶೈಕ್ಷಣಿಕ ಪ್ರವೇಶಗಳಿಗೆ ನಿರ್ಬಂಧಿಸಬಾರದು ಏಕೆ? ಎಂದು ನೋಟಿಸ್‌ ನೀಡಿರುವುದು ಬೆಳಕಿಗೆ ಬಂದಿದೆ. ಈಗ ಸುಜಾತಾ ಪೋಳ ಅವರು ರಾಜ್ಯಪಾಲರ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

ಆರ್‌ಸಿಯುನ ವಿಜಯಪುರ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಪ್ರೊ.ಕೆ.ಎಲ್‌.ಎನ್‌.ಮೂರ್ತಿ ತಮಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳದ ದೂರು ನೀಡಿದ್ದೀರಿ. ಈ ಕುರಿತು ಆಂತರಿಕ ದೂರು ನಿವಾರಣಾ ಸಮಿತಿ ನಡೆಸಿದ ವಿಚಾರಣೆಯಲ್ಲಿ ನಿಮ್ಮ ದೂರನ್ನು ನೀವು ಸಮರ್ಥಿಸಿದ್ದೀರಿ.. ಈ ವರದಿ ಅನ್ವಯ ಪ್ರೊ.ಕೆ.ಎಲ್‌.ಎನ್‌.ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಬಳಿಕ ನೀವು ನಿಮ್ಮ ದೂರನ್ನು ವಾಪಸ್‌ ಪಡೆದಿದ್ದೀರಿ ಎಂದು ಸುಜಾತಾಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಕುರಿತು ಸಿಂಡಿಕೇಟ್‌ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಸಾಕ್ಷಿ ಸಮೇತವಾಗಿ ನೀವು ದೂರು ಸಲ್ಲಿಸಿದ್ದೀರಿ. ಆ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಶ್ವವಿದ್ಯಾಲಯದ ಆಂತರಿಕ ದೂರು ವಿಚಾರಣಾ ಸಮಿತಿ ಸಾಕಷ್ಟು ಕಾಲಾವಕಾಶದೊಂದಿಗೆ ವಿಚಾರಣೆ ನಡೆಸಿ, ದಾಖಲೆಗಳ ಆಧಾರದಲ್ಲಿ ವರದಿ ನೀಡಿದೆ. ನಿಮ್ಮ ವ್ಯತಿರಿಕ್ತ ಹೇಳಿಕೆ ಮೂಲಕ ನೀವು ವಿಶ್ವವಿದ್ಯಾಲಯದ ನಿಯಮಗಳಿಗೆ ಅಗೌರವ ತೋರಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಪಿಎಚ್‌ಡಿ ಪದವಿ ಪ್ರದಾನ ಮಾಡುವುದನ್ನು ತಡೆ ಹಿಡಿಯಬಾರದು ಏಕೆ? ಮುಂದಿನ ಯಾವುದೇ ಶೈಕ್ಷಣಿಕ ಪ್ರವೇಶಗಳಿಗೆ ನಿರ್ಬಂಧಿಸಬಾರದು ಏಕೆ? ಎಂದು ನೋಟಿಸ್‌ ನೀಡಲಾಗಿದೆ.ರಾಜ್ಯಪಾಲರಿಗೆ ದೂರು: ಸುಜಾತಾ ಪೋಳ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ನೀಡದ ಹಿನ್ನೆಲೆಯಲ್ಲಿ ನೊಂದಿರುವ ಸುಜಾತಾ ಪೋಳ ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್‌ ಮತ್ತು ಕುಲಸಚಿವ ಸಂತೋಷ ಕಾಮಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಹೇಳಿಕೆ ನೀಡಿದ್ದಾರೆ. ಹಿಂದೆ ನಾನು ಗೈಡ್‌ ವಿರುದ್ಧ ಮಾಡಿರುವ ಆಪಾದನೆ ಮುಂದಿಟ್ಟುಕೊಂಡು ನನಗೆ ಪದವಿ ಕೊಟ್ಟಿಲ್ಲ. ಬದಲಾಗಿ ನೋಟಿಸ್‌ ಕೊಟ್ಟಿದ್ದಾರೆ. ಇದ್ಯಾವ ನ್ಯಾಯ? ಘಟಿಕೋತ್ಸವಕ್ಕೆ ಹೋದರೂ ನನಗೆ ಪದವಿ ಪ್ರದಾನ ಮಾಡಲಿಲ್ಲ. ಯಾರೂ ನನಗೆ ಸ್ಪಂದಿಸಲಿಲ್ಲ. ಅಧಿಕಾರ, ದುಡ್ಡು ಇದೆ ಎಂಬ ಕಾರಣಕ್ಕಾಗಿ ನನ್ನ ಮೇಲೆಯೇ ಆರೋಪ ಮಾಡುತ್ತಾರೆ. ಕುಲಪತಿ ಮತ್ತು ಕುಲಸಚಿವರು ನನ್ನನ್ನು ಅಪರಾಧಿಯಂತೆ ನೋಡುತ್ತಿದ್ದಾರೆ. ನಾನು ದಲಿತ ಮಹಿಳೆ ಎಂಬ ಕಾರಣಕ್ಕೆ ನನ್ನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಆರ್‌ಸಿಯುನಲ್ಲಿ ನಡೆದ ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆಯೂ ಆಗ ತಾನೇ ಪಿಎಚ್‌ಡಿ ಪಡೆದ ಅವರ ಜಾತಿಗೆ ಸೇರಿದವರಿಗೆ ಅವಕಾಶ ನೀಡಿದರು. ಇದರಿಂದಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನಾನು ಬೇರೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯೂ ಕೂಡ ನನಗೆ ಕಿರುಕುಳ ನೀಡಲಾಗುತ್ತಿದೆ. ನಾನು ಆರ್‌ಸಿಯುನಲ್ಲಿ ಓದಿರುವ ಹೆಮ್ಮೆ, ಗೌರವವಿದೆ. ಆದರೆ, ಇಂತಹವರಿಂದಲೇ ವಿಶ್ವವಿದ್ಯಾಲಯದ ಹೆಸರು ಹಾಳಾಗುತ್ತಿದೆ. ಇದು ದೊಡ್ಡ ದುರಂತವಾಗಿದೆ. ಐದು ವರ್ಷಗಳ ಕಾಲ ಸತತ ನನ್ನ ಪ್ರಯತ್ನವನ್ನು ಹಾಳು ಮಾಡಿದ್ದಾರೆ. ಇದರಿಂದಾಗಿಯೇ ನಾನು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಮುಂದೆಯೂ ನನ್ನ ಜೀವನಕ್ಕೆ ಏನಾದರೂ ಆದರೆ ಅದಕ್ಕೆ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಮತ್ತು ಕುಲಪತಿ ಸಂತೋಷ ಕಾಮಗೌಡ ಅವರೇ ಕಾರಣರಾಗುತ್ತಾರೆ. ನಾನು ಜೀವನದಲ್ಲಿ ಬಹಳಷ್ಟು ನೊಂದಿದ್ದೇನೆ. ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿಯರಿಗೆ ಗೈಡ್‌ಗಳಿಂದ ಲೈಂಗಿಕ ದೌರ್ಜನ್ಯವಾಗುತ್ತಿದೆ. ಇದನ್ನು ತಡೆಗಟ್ಟಬೇಕಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಉಪನ್ಯಾಸಕರ ನೇಮಕಾತಿಯಲ್ಲಿ ಶೇ.50ರಷ್ಟು ಮಹಿಳೆಯರನ್ನು ನೇಮಕ ಮಾಡಬೇಕು. ಸಂಶೋಧನಾ ವಿದ್ಯಾರ್ಥಿನಿಯರಿಗೆ ಮಹಿಳಾ ಗೈಡ್‌ಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.