ಕನ್ನಡ ನಾಮಫಲಕ ಅಳವಡಿಸದ 2050 ಅಂಗಡಿಗಳಿಗೆ ನೋಟಿಸ್‌

| Published : Jan 13 2024, 01:34 AM IST

ಸಾರಾಂಶ

ರಾಜ್ಯ ಸರ್ಕಾರ ಕನ್ನಡ ನಾಮಫಲಕ ಕಡ್ಡಾಯ ಆದೇಶದ ಬೆನ್ನಲ್ಲೇ ಮಹಾನಗರ ಪಾಲಿಕೆ ಕನ್ನಡ ನಾಮಫಲಕ ಅಳವಡಿಕೆ ಮಾಡದಿರುವ ಅಂಗಡಿಕಾರರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಸರ್ಕಾರ ಕನ್ನಡ ನಾಮಫಲಕ ಕಡ್ಡಾಯ ಆದೇಶದ ಬೆನ್ನಲ್ಲೇ ಮಹಾನಗರ ಪಾಲಿಕೆ ಕನ್ನಡ ನಾಮಫಲಕ ಅಳವಡಿಕೆ ಮಾಡದಿರುವ ಅಂಗಡಿಕಾರರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ.

ಪಾಲಿಕೆಯ ವ್ಯಾಪ್ತಿಯ ಅಂಗಡಿ, ಮುಂಗಟುಗಳು/ವಾಣಿಜ್ಯ ಸಂಕೀರ್ಣಗಳ ಪ್ರತಿದಿನ ವೀಕ್ಷಣೆ ಮಾಡಿ ತಮ್ಮ ತಮ್ಮ ಅಂಗಡಿಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯಗೊಳಿಸಲಾಗಿದೆ. ಕನ್ನಡ ನಾಮಫಲಕ ಅಳವಡಿಸದ 2050 ಅಂಗಡಿಗಳಿಗೆ ನೋಟಿಸ್ ಗಳನ್ನು ಜಾರಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಪ್ರತಿದಿನ ಆರೋಗ್ಯ ಅಧಿಕಾರಿಗಳ ತಂಡವು ಬೆಳಗಾವಿ ನಗರದಲ್ಲಿ ಸಂಚರಿಸಿ ಕನ್ನಡ ಅನುಷ್ಠಾನ ಕುರಿತು ವೀಕ್ಷಣೆ ಮಾಡಿ, ಶೇ.60 ರಷ್ಟು ಕಡ್ಡಾಯವಾಗಿ ಕನ್ನಡ ಹಾಗೂ ಬೆಳಗಾವಿ ಎಂದು ನಾಮಫಲಕದಲ್ಲಿ ಬಳಸಲು ಸೂಚಿಸಿ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ಪಾಲಿಸಿದಿದ್ದರೆ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿ ಅಂಗಡಿಯನ್ನು ಬಂದ/ಸೀಲ್ ಮಾಡಲಾಗುವುದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.