ಗಜೇಂದ್ರಗಡ ಪುರಸಭೆ 7 ಬಿಜೆಪಿ ಸದಸ್ಯರಿಗೆ ನೋಟಿಸ್

| Published : Dec 22 2024, 01:33 AM IST

ಸಾರಾಂಶ

ನೀವು ಸ್ವತಃ ಇಲ್ಲವೇ ನ್ಯಾಯವಾದಿಗಳ ಮುಖಾಂತರ ಹಾಜರಾಗಿ ತಮ್ಮ ವಾದ ಸೂಕ್ತ ದಾಖಲೆಗಳೊಂದಿಗೆ ಮಂಡಿಸುವಂತೆ ತಿಳಿಸಲಾಗಿದೆ

ಗಜೇಂದ್ರಗಡ: ಪಟ್ಟಣದ ಪುರಸಭೆಯಲ್ಲಿ ಕೊನೆಯ ಅವಧಿಗೆ ನಡೆದ ಚುನಾವಣೆ ವೇಳೆ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷರಾದ ಸದಸ್ಯರು ಸೇರಿದಂತೆ ಇತರ ೬ ಜನ ಗಜೇಂದ್ರಗಡ ಪುರಸಭೆ ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ ಕುರಡಗಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ (ಪಕ್ಷಾಂತರ ನಿಷೇಧ) ಕಾಯ್ದೆ ೧೯೮೭ರ ರ ಕಲಂ ಅಡಿ ಸದಸ್ಯತ್ವ ರದ್ದು ಪಡಿಸುವಂತೆ ಪ್ರಕರಣ ದಾಖಲಿಸಿದ್ದು, ಪುರಸಭೆ ಸದಸ್ಯರಾದ ವಿಜಯಾ ಮಾಳಗಿ, ದ್ರಾಕ್ಷಾಯಿಣಿ ಚೋಳಿನ, ಕೌಶರಬಾನು ಹುನಗುಂದ, ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ, ಶರಣಪ್ಪ ಉಪ್ಪಿನಬೆಟಗೇರಿ, ಲಕ್ಷ್ಮೀ ಮುಧೋಳ ಅವರಿಗೆ ಜ. ೨ರಂದು ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಲಾಗಿದೆ.

ನೀವು ಸ್ವತಃ ಇಲ್ಲವೇ ನ್ಯಾಯವಾದಿಗಳ ಮುಖಾಂತರ ಹಾಜರಾಗಿ ತಮ್ಮ ವಾದ ಸೂಕ್ತ ದಾಖಲೆಗಳೊಂದಿಗೆ ಮಂಡಿಸುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿ ಪಕ್ಷಗಾರರ ಗೈರು ಹಾಜರಿಯಲ್ಲಿ ವಿಚಾರಣೆ ಮಾಡಿ ಅರ್ಹತೆಗಳ ಆಧಾರದ ಮೇಲೆ ಪ್ರಕರಣ ನಿಖಾಲಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಪಟ್ಟಣದ ಪುರಸಭೆಯಲ್ಲಿ ೨೩ ಸದಸ್ಯರನ್ನು ಹೊಂದಿದ್ದು ೧೮ ಬಿಜೆಪಿ ಬೆಂಬಲಿತ ಹಾಗೂ ೫ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಪುರಸಭೆಯ ಕೊನೆಯ ಅವಧಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ೭ ಸದಸ್ಯರು ಕಾಂಗ್ರೆಸ್ ಬೆಂಬಲ ಪಡೆದಿದ್ದರು. ಪರಿಣಾಮ ಬಂಡಾಯವೆದ್ದ ಸದಸ್ಯರ ಪೈಕಿ ಪುರಸಭೆ ಅಧ್ಯಕ್ಷ ಸ್ಥಾನ ಸುಭಾಸ ಮ್ಯಾಗೇರಿಗೆ ಹಾಗೂ ಕಾಂಗ್ರೆಸ್ ಸದಸ್ಯೆ ಸವಿತಾ ಬಿದರಳ್ಳಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಇತ್ತಿಚೆಗೆ ಮುದಿಯಪ್ಪ ಮುಧೋಳ ಸ್ಥಾಯಿ ಸಮಿತಿ ಚೇರಮನರಾಗಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ (ಪಕ್ಷಾಂತರ ನಿಷೇಧ) ಕಾಯ್ದೆ ೧೯೮೭ರ ರ ಕಲಂ ಅಡಿ ೭ ಪುರಸಭೆ ಸದಸ್ಯರಿಗೆ ಬಂದಿರುವ ನೋಟಿಸ್ ಹೊಸ ಚಿಂತೆಗೆ ದೂಡಿದೆ.

ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲ. ಹೀಗಾಗಿ ಬಂದರೆ ನ್ಯಾಯವಾದಿಗಳ ಮೂಲಕ ಭೇಟಿ ನೀಡಿ ವಿಚಾರಣೆ ಎದುರಿಸುತ್ತೇವೆ ಎಂದು ಸ್ಥಾಯಿ ಸಮಿತಿ ಚೇರಮನ್‌ ಮುದಿಯಪ್ಪ ಮುಧೋಳ ತಿಳಿಸಿದ್ದಾರೆ.