ಸಾರಾಂಶ
ಬ್ಯಾಡಗಿ: ಆಶ್ರಯ ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ. ಪಟ್ಟಣದಲ್ಲಿ ಇಲ್ಲದೇ ಇರುವಂತವರು, ಈಗಾಗಲೇ ಮನೆ ಹಾಗೂ ಜಾಗ ಹೊಂದಿದವರು, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮೃತಪಟ್ಟವರ ಹೆಸರಲ್ಲಿಯೂ ಸಹ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಆದ್ದರಿಂದ ಅನರ್ಹರ ಹಕ್ಕುಪತ್ರ ರದ್ದು ಮಾಡಿ ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಪುರಸಭೆ ಸದಸ್ಯ ಬಸವರಾಜ ಛತ್ರದ ತಾಕೀತು ಮಾಡಿದ ಘಟನೆ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ನಿವೇಶನ ಹಂಚಿಕೆ ವಿಚಾರದಲ್ಲಿ ನಿಯಮ ಗಾಳಿಗೆ ತೂರಲಾಗಿದೆ, ಅನರ್ಹರಿಗೆ ಹಾಗೂ ಅಲ್ಪ ಸಂಖ್ಯಾತರಿಗೆ ಅತೀ ಹೆಚ್ಚು ನಿವೇಶನ ಹಂಚಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದಲ್ಲಿ ಅಲ್ಪಸಂಖ್ಯಾತರಿಗೆ ನಿವೇಶನ ನೀಡಲಾಗಿದೆ, ಅಂಗವಿಕಲರು, ಮಾಜಿ ಸೈನಿಕರು, ಹಿಂದುಳಿದ ವರ್ಗ ಮತ್ತು ಜಾತಿಗೆ ಅನ್ಯಾಯ ಮಾಡಲಾಗಿದೆ. ಇದಕ್ಕೆಲ್ಲ ಆಶ್ರಯ ಸಮಿತಿ ಅಧ್ಯಕ್ಷ, ಸದಸ್ಯರು ಮಾಡಿದ ಯಡವಟ್ಟು ಆಯ್ಕೆಗಳೆ ಕಾರಣ ಎಂದು ದೂರಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಸಹ ಸಹಮತ ವ್ಯಕ್ತಪಡಿಸಿದರು.
ಮೃತಪಟ್ಟವರಿಗೆ ಹಕ್ಕು ಪತ್ರ: ನಿವೇಶನ ಹಂಚಿಕೆ ಮಾಡುವಲ್ಲಿ ಕುರುಡು ಕಾಂಚಾಣ ಪ್ರಭಾವ ಬೀರಿದೆ. ಪಟ್ಟಣದಲ್ಲಿ ವಿವಿಧ ಬಸವ ವಸತಿ ಯೋಜನೆ, ರಾಜೀವ ಗಾಂಧಿ, ಸ್ಲಂಬೋರ್ಡ್, ಪ್ರಕೃತಿ ವಿಕೋಪ ಸೇರಿದಂತೆ ಈಗಾಗಲೇ ನಿವೇಶನ ಹಾಗೂ ಹೊಲ ಮನೆ ಹೊಂದಿದವರಿಗೂ ಸಹ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಅಲ್ಲದೇ ಈಗಾಗಲೇ ಸತ್ತು ಸ್ವರ್ಗದಲ್ಲಿರುವ ಕೆಲವರ ಹೆಸರಿನಲ್ಲಿಯೂ ಹಕ್ಕುಪತ್ರ ನೀಡಿದ್ದಾರೆ. ನಮ್ಮೂರಿನವರೇ ಅಲ್ಲದ ಶಿಕಾರಿಪುರ, ಹಿರೇಕೆರೂರ ಹಾಗೂ ಇನ್ನಿತರ ಗ್ರಾಮಗಳ ಜನರಿಗೆ ಹಕ್ಕುಪತ್ರ ನೀಡಿದ್ದಾರೆ ಎಂದು ಆರೋಪಿಸಿ ಅಗತ್ಯ ದಾಖಲೆಗಳನ್ನು ತೋರಿಸಿದರು.ಮಾಜಿ ಎಂಎಲ್‌ಎಗೆ ಅವಮಾನ: ಸದಸ್ಯ ವಿನಯ ಹಿರೇಮಠ ಮಾತನಾಡಿ, ಆಯ್ಕೆ ಪಟ್ಟಿ ನೀಡುವಂತೆ ಹಲವು ಬಾರಿ ಕಚೇರಿಗೆ ಬಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಕೇಳಿದರು ಸಹ ನೀಡದೆ ಉದ್ಧಟತನ ತೋರಿದ್ದೀರಿ, ಬಿಜೆಪಿ ಸದಸ್ಯರ ವಿರೋಧ ನಡುವೆಯೂ ಪುರಸಭೆ ಖರ್ಚಿನಲ್ಲಿ ಆಶ್ರಯ ಸಮಿತಿಗೆ ಹೊಸ ಕಚೇರಿ ಸಿದ್ಧ ಮಾಡಿ ಕೊಟ್ಟೀರಿ, ಇದನ್ನು ವಿರೋಧಿಸಿದ ನಮ್ಮನ್ನು ಆಯ್ಕೆ ಸಮಯದಲ್ಲಿ ದೂರವಿಟ್ಟು ಜನರಿಗೆ ಅನ್ಯಾಯವಾಲು ನೀವೇ ಕಾರಣರಾಗಿದ್ದೀರಿ ಎಂದು ಮುಖ್ಯಾಧಿಕಾರಿ ತರಾಟೆಗೆ ತೆಗೆದುಕೊಂಡರು.
ನೀವೇನು ಕಾಂಗ್ರೆಸ್ ಏಜೆಂಟರೇ?: ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಮಾತನಾಡಿ, ಆಶ್ರಯ ಮನೆ ಆಯ್ಕೆ ಪ್ರಕ್ರಿಯೆಯಲ್ಲಿ ಜನರಿಂದ ಚುನಾಯಿತರಾದ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹಕ್ಕುಪತ್ರ ನೀಡಿದ ನಂತರ ರಾತ್ರಿ ನಮ್ಮ ಕೈಗೆ ಆಯ್ಕೆ ಪಟ್ಟಿ ಕೊಟ್ಟಿದ್ದೀರಿ.? ಹಿಂದೆ ಎಷ್ಟು ಬಾರಿ ಕೇಳಿದರು ನಮಗೆ ಆಯ್ಕೆ ಪಟ್ಟಿ ಕೊಡದೇ ಶಾಸಕರು ಹಾಗೂ ಆಶ್ರಯ ಸಮಿತಿ ಸದಸ್ಯರ ಪರವಾಗಿದ್ದೀರಿ, ನೀವೇನು ಮುಖ್ಯಾಧಿಕಾರಿಗಳೆ? ಇಲ್ಲವೇ ಕಾಂಗ್ರೆಸ್ ಏಜೆಂಟರೇ? ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಅವಾಚ್ಯ ಶಬ್ದಗಳ ಬಳಕೆ: ಕೆಲ ಸದಸ್ಯರು ನಿವೇಶನ ಹಂಚಿಕೆಯಲ್ಲಿ ನಮ್ಮನ್ನು ಕಡೆಗಣಿಸಿ ಮೋಸ ಮಾಡಲಾಗಿದೆ ಎಂದು ಸಭೆಯಲ್ಲಿ ಮಾತಿನ ಭರದಲ್ಲಿ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದು ಸಭೆಗೆ ಮುಜುಗರ ತಂದಿತು. ಇದರಿಂದ ಸಭೆಯಲ್ಲಿ ಮಹಿಳಾ ಸದಸ್ಯರು ಸಹ ಮುಜುಗರಕ್ಕೀಡಾಗುವಂತೆ ಮಾಡಿತು. ನಂತರ ಬಸವರಾಜ ಛತ್ರದ ವಾತಾವರಣ ತಿಳಿಗೊಳಿಸಿದರು. ಈ ವೇಳೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.ಹಕ್ಕುಪತ್ರ ರದ್ದಿಗೆ ಠರಾವು ಪಾಸ್: ನಿವೇಶನ ಹಂಚಿಕೆಯಲ್ಲಿ ಬಡವರಿಗೆ ಮೋಸವಾಗಿದೆ. ಆದ್ದರಿಂದ ಇಲ್ಲಿ ಆಯ್ಕೆಯಾದ ಅನರ್ಹ ಫಲಾನುಭವಿಗಳ ಹಕ್ಕುಪತ್ರ ರದ್ದು ಮಾಡಲು ಕೂಡಲೇ ಸಮಿತಿ ರಚನೆ ಮಾಡಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಿರಿ ಎಂದು ಎಲ್ಲ ಸದಸ್ಯರು ಒಮ್ಮತದಿಂದ ಪಟ್ಟು ಹಿಡಿದರು. ಅಲ್ಲದೇ ಸಭೆಯಲ್ಲಿ ಠರಾವು ಸಹ ಪಾಸ್ ಮಾಡಲಾಯಿತು. ಆಶ್ರಯ ಸಮಿತಿ ಅಧ್ಯಕ್ಷರು ತಾವೇ ಕ್ಷೇತ್ರದ ಶಾಸಕರು, ಸಚಿವರು, ಸರ್ವಾಧಿಕಾರಿಯಂತೆ ವರ್ತನೆ ಮಾಡಿ, ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರುಪಾಯಿ ನಷ್ಟ ಮಾಡಿ, ಜನರಿಗೆ ಮೋಸ ಮಾಡಿದ್ದಾರೆ. ಪ್ರಾಮಾಣಿಕವಾಗಿ ಬಡವರಿಗೆ ನಿವೇಶನ ಕೊಡುತ್ತೇವೆ ಎಂದು ಸುಳ್ಳಿನ ನಾಟಕವಾಡಿ ಇದೀಗ ಗೋಲ್ ಮಾಲ್ ಮಾಡಿ ಜನರಿಗೆ ಉತ್ತರ ಕೊಡದೇ ಪಲಾಯನ ಮಾಡಿದ್ದಾರೆ ಎಂದು ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ
ಹೇಳಿದರು.ನನಗೆ ಮೊದಲ ಪೇಜ್ ಅಷ್ಟೇ ತೋರಿಸಿದ್ದಾರೆ: ಸದಸ್ಯರ ಒತ್ತಡಕ್ಕೆ ಮಣಿದು ಮಾತನಾಡಿದ ಮುಖ್ಯಾಧಿಕಾರಿ ವಿನಯಕುಮಾರ, ಕೇವಲ ಮೊದಲ ಪುಟಕ್ಕೆ ನನ್ನ ಸಹಿ ಮಾಡಿಸಿಕೊಂಡಿದ್ದಾರೆ. ಎಲ್ಲಾ ಫಲಾನುಭವಿಗಳ ಮಾಹಿತಿ ಇಲ್ಲ ಎಂದರು.;Resize=(128,128))
;Resize=(128,128))
;Resize=(128,128))
;Resize=(128,128))