ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಒಳಚರಂಡಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಯನ್ನು ತೆರವುಗೊಳಿಸಿ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.ಪಟ್ಟಣದ ಸುಮಾರು 4.5 ಕಿ.ಮೀ. ನದಿ ಉದ್ದಕ್ಕೂ ನದಿಯ ಬದಿಯಲ್ಲಿ ಪೈಪ್ ಹಾಗೂ ಮ್ಯಾನ್ ಹೋಲ್‌ಗಳನ್ನು ಅಳವಡಿಸಲಾಗಿದೆ. ಇವುಗಳು ಪ್ರವಾಹ ಸಂದರ್ಭ ನೀರಿನಲ್ಲಿ ಮುಳುಗಡೆಯಾಗುತ್ತಿದ್ದು ತಕ್ಷಣ ತೆರವುಗೊಳಿಸಿ ಕ್ರಮ ಕೈಗೊಳ್ಳುವಂತೆ ಒಳಚರಂಡಿ ಯೋಜನೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಕುಶಾಲನಗರ ಪುರಸಭೆ ಆವರಣದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ಕುಶಾಲನಗರ ಪುರಸಭೆಯ ಆಡಳಿತ ಅಧಿಕಾರಿ ವಿನಾಯಕ ನರ್ವಡೆ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆ ನಡೆಯಿತು. ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸಭೆಯಲ್ಲಿ ಉಪಸ್ಥಿತರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.ಕಾವೇರಿ ನದಿ ಕಲುಷಿತಗೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಗಮನಹರಿಸಬೇಕು ಎಂದು ಶಾಸಕರು ಹೇಳಿದರು.
ಕಾಮಗಾರಿ ಪೂರ್ಣಕ್ಕೆ ಸೆ.15 ಗಡುವು: ಒಳಚಂಡಿ ಯೋಜನೆಯನ್ನು ಈ ವರ್ಷದ ಸೆಪ್ಟೆಂಬರ್ 15ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಅಂತಿಮ ಗಡುವು ನೀಡಿದರು. ಈ ಸಂಬಂಧ ಮುಂದಿನ ವಾರ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಸಮಗ್ರ ಮಾಹಿತಿ ಒದಗಿಸುವಂತೆ ಒಳಚರಂಡಿ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಅವರಿಗೆ ಸೂಚನೆ ನೀಡಿದರು. ಪುರಸಭೆಗೆ ಒಳಚರಂಡಿ ಯೋಜನೆಯ ಸಮಗ್ರ ಮಾಹಿತಿ ಒದಗಿಸುವಂತೆ ಅವರು ಹೇಳಿದರು.ಕುಶಾಲನಗರ ವಾರದ ಸಂತೆಯನ್ನು ಹಳೆಯ ಮಾರುಕಟ್ಟೆಗೆ ವರ್ಗಾಯಿಸುವಂತೆ ಸಭೆ ಅನುಮೋದನೆ ನೀಡಿದ್ದು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಕುಶಾಲನಗರದಲ್ಲಿ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕಿರುಕುಳ ನೀಡುತ್ತಿರುವುದಾಗಿ ಸಭೆಯಲ್ಲಿ ಚರ್ಚಿಸಿದ ಸದಸ್ಯರಾದ ಅಮೃತರಾಜ್ ಟ್ರಾಫಿಕ್ ಠಾಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ನಿಯಮ ಪಾಲಿಸುವ ಮೂಲಕ ವ್ಯಾಪಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.ವಾಹನಗಳಿಗೆ ದಂಡ ಹಾಕುವ ಕಾರಣ ಯಾವುದೇ ವಾಹನಗಳು ಪಟ್ಟಣದಲ್ಲಿ ನಿಲುಗಡೆಗೊಳ್ಳುತ್ತಿಲ್ಲ .ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಕುಶಾಲನಗರ ಪಟ್ಟಣ ಠಾಣಾಧಿಕಾರಿ ಪ್ರಕಾಶ್ ಪ್ರತಿಕ್ರಿಯಿಸಿ ಸಂಚಾರಿ ಪೊಲೀಸ್ ಠಾಣೆ ರದ್ದುಕೊಂಡರೆ ನಿಯಮ ಪಾಲನೆಗೆ ಹಾಗೂ ಸಮರ್ಪಕ ಸಂಚಾರ ವ್ಯವಸ್ಥೆ ಗಾಗಿ ಸಿವಿಲ್ ಪೊಲೀಸ್ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಪೊಲೀಸ್ ಇಲಾಖೆ ಮೂಲಕ ನಿಯಮ ಕಾನೂನು ಪಾಲಿಸಲೇ ಬೇಕಾಗುತ್ತದೆ. ಬಾಯಿ ಮಾತಿಗೆ ಬಗ್ಗದಿದ್ದಾಗ ನಿಯಮಾನುಸಾರ ದಂಡ ವಿಧಿಸಲೇಬೇಕಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.ಗುಂಡೂರಾವ್ ಬಡಾವಣೆಯಲ್ಲಿ ಅರ್ಧಕ್ಕೆ ನಿರ್ಮಾಣಗೊಂಡಿರುವ ಸಂಚಾರಿ ಪೊಲೀಸ್ ಠಾಣೆ ಕಟ್ಟಡದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಕಟ್ಟಡವನ್ನು ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಕಚೇರಿಗೆ ಬಳಸುವ ನಿಟ್ಟಿನಲ್ಲಿ ಚರ್ಚೆ ನಡೆದು ಪೊಲೀಸ್ ಇಲಾಖೆಗೆ ಬದಲಿ ಜಾಗ ನೀಡುವ ಬಗ್ಗೆ ಕೂಡ ಚರ್ಚಿಸಿದರು.
ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಪುರಸಭೆ ವಾಣಿಜ್ಯ ಸಂಕೀರ್ಣ ಅಪೂರ್ಣಗೊಂಡಿದ್ದು ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಆಗಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಿ ಪುರಸಭೆ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸೆಂಬರ್ ಅಂತ್ಯದಲ್ಲಿ ಪುರಸಭೆ ಸಂಕೀರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಪುರಸಭೆಗೆ ನಾಮನಿರ್ದೇಶನಗೊಂಡ ಸದಸ್ಯರನ್ನು ಸ್ವಾಗತಿಸುವುದರೊಂದಿಗೆ ಅಭಿನಂದಿಸಲಾಯಿತು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಮೋದ್ ಮುತ್ತಪ್ಪ ಅವರನ್ನು ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ಒದಗಿಸಿದರು. ಪುರಸಭೆಯ ಸದಸ್ಯರು ಮತ್ತು ಅಧಿಕಾರಿಗಳು, ಸಿಬ್ಬಂದಿ ಇದ್ದರು.