ಒತ್ತುವರಿ ತೆರವು ಸಂಬಂಧ ಪಾಂಡವಪುರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಅನಧಿಕೃತವಾಗಿ ನಡೆದಿರುವ ಒತ್ತುವರಿಗಳು ಜಲಾಶಯದ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದ್ದು, ಮಳೆಗಾಲದಲ್ಲಿ ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಅಣೆಕಟ್ಟು ಹಿನ್ನೀರಿನ ಪ್ರದೇಶದ ಒತ್ತುವರಿ ತೆರವುಗೊಳಿಸಲು ಕೂಡಲೇ ಸರ್ವೇ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಜಂಟಿಯಾಗಿ ಕೆಆರ್‌ಎಸ್ ಹಿನ್ನೀರು ಪ್ರದೇಶಗಳಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಿಪ್ಪಣಿ ಸಲ್ಲಿಸಿದ್ದರ ಮೇರೆಗೆ ಕೂಡಲೇ ಸರ್ವೇ ನಡೆಸಿ ಒತ್ತುವರಿ ತೆರವು ಮಾಡಿಸಿ ಗಡಿ ಕಲ್ಲುಗಳನ್ನು ನೆಟ್ಟು ವರದಿಯನ್ನು ನೀಡುವಂತೆ ಆದೇಶಿಸಿದರು.
ಒತ್ತುವರಿ ತೆರವು ಸಂಬಂಧ ಪಾಂಡವಪುರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಅನಧಿಕೃತವಾಗಿ ನಡೆದಿರುವ ಒತ್ತುವರಿಗಳು ಜಲಾಶಯದ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದ್ದು, ಮಳೆಗಾಲದಲ್ಲಿ ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತಿದೆ. ಇದರಿಂದ ಸಾರ್ವಜನಿಕ ಆಸ್ತಿ ಹಾನಿಯಾಗುವ ಜೊತೆಗೆ ಪರಿಸರ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ ಎಂದು ನುಡಿದರು.ಆ ಹಿನ್ನೆಲೆಯಲ್ಲಿ ಒತ್ತುವರಿಯಾಗಿರುವ ನಿಖರ ಸ್ಥಳಗಳು, ವ್ಯಾಪ್ತಿ ಹಾಗೂ ಸ್ವರೂಪವನ್ನು ಗುರುತಿಸಲು ತಕ್ಷಣವೇ ಸರ್ವೇ ಕಾರ್ಯ ಪ್ರಾರಂಭಿಸುವುದು ಅತ್ಯಂತ ಅವಶ್ಯಕವಾಗಿರುವುದರಿಂದ ಜಲಸಂಪನ್ಮೂಲ ಇಲಾಖೆ, ಭೂ ದಾಖಲೆ ಇಲಾಖೆಗಳು ಸಮನ್ವಯದೊಂದಿಗೆ ಕೂಡಲೇ ಸರ್ವೇ ಕಾರ್ಯ ಆರಂಭಿಸಬೇಕು. ಸರ್ವೇ ಮೂಲಕ ಭೂಮಿ ಮತ್ತು ಖಾಸಗಿ ಭೂಮಿಯ ಗಡಿ ರೇಖೆಗಳನ್ನು ಸ್ಪಷ್ಟಪಡಿಸುವುದು. ಕಾನೂನುಬಾಹಿರವಾಗಿ ಆಕ್ರಮಿಸಲಾದ ಪ್ರದೇಶಗಳನ್ನು ದಾಖಲಿಸಿ, ನಿಖರತೆಯುಳ್ಳ ವರದಿಯನ್ನು ನೀಡುವಂತೆ ಸೂಚಿಸಿದರು.
ಕೆಆರ್‌ಎಸ್ ಅಣೆಕಟ್ಟಿನ ಹಿನ್ನೀರಿನ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕಾರ್ಯೋನ್ಮುಖರಾಗುವುದು ಅವಶ್ಯಕವಾಗಿದೆ ಎಂದು ನುಡಿದರು.ಸಭೆಯಲ್ಲಿ ಭೂದಾಖಲೆಗಳ ಉಪ ನಿರ್ದೇಶಕರು, ಪಾಂಡವಪುರ ಉಪವಿಭಾಗಾಧಿಕಾರಿ, ಕಾವೇರಿ ನೀರಾವರಿ೦ ನಿಗಮದ ಕಾರ್ಯಪಾಲಕ ಅಭಿಯಂತರರು, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಹಸೀಲ್ದಾರ್ ಅವರು ಹಾಜರಿದ್ದರು.