ಸಾರಾಂಶ
ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಿ.ಸುಧಾಕರ್ ತಾಕೀತುಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಹಾಗೂ ಹಿರಿಯೂರು ತಾಲೂಕಿನಲ್ಲಿ ಕೈಗೆತ್ತಿಕೊಳ್ಳಲಾದ ಕಾಲುವೆ ನಿರ್ಮಾಣದ ಕಾಮಗಾರಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಭದ್ರ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಚಿತ್ರದುರ್ಗ ಕಾಲುವೆ ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಂದಾಯ ಮತ್ತು ಸರ್ವೇ ಇಲಾಖೆಯವರು ತಮ್ಮಜವಾಬ್ದಾರಿಗಳ ಸಮರ್ಥವಾಗಿ ನಿಭಾಯಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಜಲಸಂಪನ್ಮೂಲ ಇಲಾಖೆಗೆ ಹಸ್ತಾಂತರಿಸಿದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಚುರುಕುಗೊಳಿಸಲು ಸಹಾಯವಾಗುತ್ತದೆ. ಭೂ ಸ್ವಾಧೀನ ನೆನೆಗುದಿಗೆ ಬಿದ್ದರೆ ಯೋಜನೆ ವಿಳಂಬವಾಗುತ್ತದೆ ಎಂದರು.
ಭದ್ರಾ ಮೇಲ್ದಂಡೆ ಈ ಭಾಗದ ಜನರ ಹಲವು ದಿನಗಳ ಕನಸು. ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಸಂಬಂಧ ಎಲ್ಲೆಲ್ಲಿ ಅಡಚಣೆ ಇವೆ ತ್ವರಿತವಾಗಿ ನಿವಾರಿಸಬೇಕು. ಈ ವಿಚಾರದಲ್ಲಿಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿ ಸಬೇಕು.ಬಗೆ ಹರಿಯದ ಏನಾದರೂ ಸಮಸ್ಯೆ ಇದ್ದಲ್ಲಿ ಜಿಲ್ಲಾಡಳಿತ ಇಲ್ಲವೇ ತಮ್ಮ ಗಮನಕ್ಕೆ ತರುವಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್ 10ರ 90 ಕಿಮೀನಿಂದ 104ಕಿಮೀ ವರೆಗಿನ ಕಾಮಗಾರಿಗೆ ಅಲ್ಲಿಲ್ಲಿ ಅಡ್ಡಿಯಾಗಿದೆ. ಆದಷ್ಟು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಭೂ ಸ್ವಾಧೀನ ಪಡೆಸಿಕೊಂಡ ಅವಾರ್ಡ ಮೊತ್ತವನ್ನು ಕೆಲ ರೈತರು ಪಡೆದುಕೊಳ್ಳದ ಕಾರಣ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಕೆಲವು ಕಡೆ ಹಣ ಪಡೆದವರೂ ಕೂಡಾ ತಕರಾರು ಮಾಡುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರಿಂದಲೂ ಆಕ್ಷೇಪಣೆ ಕೇಳಿ ಬಂದಿವೆ ಎಂದು ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಟಿ.ಹರೀಶ್ ಸಭೆ ಗಮನಕ್ಕೆ ತಂದರು.
ಮುಲಾಜಿಲ್ಲದೇ ತೆರವುಗೊಳಿಸಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಫಾರಂ ನಂ 57ರಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಲು ಸಾಧ್ಯವಿಲ್ಲ. ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ. ಕಾರಣಗಳಿಲ್ಲದೇ ಅಡ್ಡಿ ಪಡಿಸುವವರ ನೋಡಿಕೊಂಡು ಕುಳಿತುಕೊಳ್ಳಲು ಆಗಲ್ಲ. ಪರಿಹಾರ ಬಾಕಿ ಇದ್ದಲ್ಲಿ ಕೊಡೋಣ. ಆದರೆ ನೀರಾವರಿ ಯೋಜನೆಗಳಿಗೆ ಅಡ್ಡಿಪಡಿಸಿದರೆ ಬಗರ್ ಹುಕುಂ ಅರ್ಜಿ ವಜಾಗೊಳಿಸಲು ಆಲೋಚಿಸಬೇಕಾಗುತ್ತದೆ. ಅವಾರ್ಡ್ ಮೊತ್ತಸರಿಯಿದ್ದರೆ ಕಾನೂನಾತ್ಮಕ ಕ್ರಮಗಳ ಅನುಸರಿಸಲಿ. ಮೇಲ್ಮನವಿ ಸಲ್ಲಿಸಲಿ. ಕಾಮಗಾರಿಗೆ ಅಡ್ಡಿ ಪಡಿಸುವ ಕಡೆ ಪೊಲೀಸ್ ಭದ್ರತೆ ತೆಗೆದುಕೊಳ್ಳುವಂತೆ ಸೂಚಿಸಿದರು. ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ ಮಾತನಾಡಿ, ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೆಲವು ರೈತರು ಅಡ್ಡಿ ಪಡಿಸುತ್ತಿದ್ದಾರೆ. ಹಾಗಾಗಿ ಗುತ್ತಿಗೆದಾರರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆಂದು ಸಭೆ ಗಮನಕ್ಕೆ ತಂದರು.ಡಿಡಿಎಲ್‌ಆರ್ ರಾಮಾಂಜನೇಯ, ಇಂಜಿನಿಯರ್‌ಗಳಾದ ಎಸ್.ಎಲ್.ವಿವೇಕಾನಂದ, ಚಂದ್ರಪ್ಪ ಬಾರಿಕರ್, ತಹಸೀಲ್ದಾರ್ ಡಾ.ನಾಗವೇಣಿ, ರಾಜೇಶ್, ಬೆಸ್ಕಾಂ ಇಂಜಿನಿಯರ್ ಜಯಣ್ಣ ಸೇರಿದಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.