ಶುದ್ಧ ಕುಡಿಯುವ ನೀರಿನ ಘಟಕಗಳ ಗ್ರಾಪಂಗೆ ಹಸ್ತಾಂತರಿಸಲು ಸೂಚನೆ

| Published : Jul 26 2024, 01:41 AM IST

ಸಾರಾಂಶ

ಹಾನಗಲ್ಲ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಯಾ ವ್ಯಾಪ್ತಿಯ ಗ್ರಾಪಂಗಳಿಗೆ ಹಸ್ತಾಂತರಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಿ.ಎಸ್. ನೆಗಳೂರ ಅವರಿಗೆ ಸೂಚಿಸಿದರು.

ಹಾನಗಲ್ಲ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಯಾ ವ್ಯಾಪ್ತಿಯ ಗ್ರಾಪಂಗಳಿಗೆ ಹಸ್ತಾಂತರಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಿ.ಎಸ್. ನೆಗಳೂರ ಅವರಿಗೆ ಸೂಚಿಸಿದರು.ಗ್ರಾಮೀಣ ಪ್ರದೇಶದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ಇಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತು ಘಟಕಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರೊಂದಿಗೆ ಅವರು ಸಭೆ ನಡೆಸಿದರು. ಎಷ್ಟು ಘಟಕಗಳು ಸುಸ್ಥಿತಿಯಲ್ಲಿವೆ ಎನ್ನುವ ಕುರಿತು ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಮಾನೆ, ಘಟಕಗಳ ಸ್ಥಿತಿಗತಿ ಕುರಿತು ಹಲವು ಬಾರಿ ಮಾಹಿತಿ ಕೇಳಿದರೂ ಸಮರ್ಪಕವಾಗಿ ನೀಡುತ್ತಿಲ್ಲ. ಈ ಕುರಿತು ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದರೂ ಗಮನ ಹರಿಸಿಲ್ಲ. ವಾಸ್ತವದಲ್ಲಿ ಕೇವಲ ಕೈಬೆರಳೆಣಿಕೆಯಷ್ಟು ಘಟಕಗಳು ಮಾತ್ರ ಸುಸ್ಥಿತಿಯಲ್ಲಿವೆ. ನಿತ್ಯವೂ ಈ ಕುರಿತು ಸಾರ್ವಜನಿಕರು ದೂರು ನೀಡುತ್ತಿದ್ದರೂ, ಏಕೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸುಸ್ಥಿತಿಯಲ್ಲಿರುವ ಘಟಕಗಳ ಕುರಿತು ಮಾಹಿತಿ ನೀಡಿ. ತಾವೂ ಸಹ ಸ್ಥಳೀಯ ಮುಖಂಡರಿಂದ ಕ್ರಾಸ್ ಚೆಕ್ ಮಾಡಿಸುವುದಾಗಿ ತಿಳಿಸಿದ ಶ್ರೀನಿವಾಸ ಮಾನೆ, ದುರಸ್ತಿಗೀಡಾಗಿರುವ ಘಟಕಗಳನ್ನು ಸುಸ್ಥಿತಿಗೆ ತಂದು, ತಾಲೂಕಿನಲ್ಲಿರುವ ಎಲ್ಲ ೧೧೯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸಿ ಎಂದು ಸೂಚಿಸಿದರು. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದೆ. ಘಟಕಗಳನ್ನು ನಿರ್ವಹಿಸುವಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದ್ದು, ಇದರಿಂದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ತೀವ್ರ ಹಿನ್ನಡೆ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸರ್ಕಾರದ ಉದ್ದೇಶ ಈಡೇರದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಲಾಖೆಯ ಲೆಕ್ಕ ಅಧೀಕ್ಷಕ ಎಂ.ಬಿ. ಪಾಟೀಲ ಈ ಸಂದರ್ಭದಲ್ಲಿದ್ದರು.