ಬಾಗಲಕೋಟೆ ನಗರದಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಮುಖಂಡರಿಗೆ ಪೊಲೀಸರು ನೋಟಿಸ್ ನೀಡಿದ್ದು, ಬಾಗಲಕೋಟೆಯ ಕಿಲ್ಲಾ ಓಣಿಯ 50ಕ್ಕೂ ಅಧಿಕ ಹಿಂದೂ ಕಾರ್ಯಕರ್ತರಿಗೆ ನೊಟೀಸ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ನಗರದಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಮುಖಂಡರಿಗೆ ಪೊಲೀಸರು ನೋಟಿಸ್ ನೀಡಿದ್ದು, ಬಾಗಲಕೋಟೆಯ ಕಿಲ್ಲಾ ಓಣಿಯ 50ಕ್ಕೂ ಅಧಿಕ ಹಿಂದೂ ಕಾರ್ಯಕರ್ತರಿಗೆ ನೊಟೀಸ್ ನೀಡಿದ್ದಾರೆ.ಶಾಂತಿ ಸಾಮರಸ್ಯ ಕದಡುವ ಕೃತ್ಯದಲ್ಲಿ ಭಾಗಿಯಾದರೆ ಕಠಿಣ ಕ್ರಮದ ಕೈಗೊಳ್ಳುವುದಾಗಿ ನೊಟೀಸ್‌ನಲ್ಲಿ ಹೇಳಿದ್ದಾರೆ. ಜೊತೆಗೆ ಡಂಗೂರ ಸಾರುವ ಮೂಲಕವೂ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಜಿಲ್ಲಾದ್ಯಂತ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಒಟ್ಟು 16 ಪ್ರಕರಣಗಳ ದಾಖಲು: ಯಾವುದೇ ಸಮಾಜ ವಿರೋಧಿ ವ್ಯಕ್ತಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ 13 ಪಿಎಆರ್ ಪ್ರಕರಣಗಳು ಮತ್ತು 3 ಎಫ್ಐಆರ್‌ಗಳು ಸೇರಿ ಒಟ್ಟು 16 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಬಾಗಲಕೋಟೆ ಪೊಲೀಸರು ತಿಳಿಸಿದ್ದಾರೆ.ಇಂತಹ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ವಿಷಯಗಳನ್ನು ಹಂಚುವವರು ತಕ್ಷಣವೇ ಇಂತಹ ಕೃತ್ಯಗಳನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಜೊತೆಗೆ, ನಾಗರಿಕರು ಸಾಮಾಜಿಕ ಜಾಲತಾಣ ಹಾಗೂ ಎಲ್ಲ ಕಡೆ ಶಾಂತಿ ಮತ್ತು ಸಮಾಧಾನ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಸಹಜ ಸ್ಥಿತಿಯಿತ್ತ ನಗರ: ಸಹಜ ಸ್ಥಿತಿಯತ್ತ ಸಾಗುತ್ತಿರುವ ಹಳೆ ಬಾಗಲಕೋಟೆ ನಗರದ ಕಿಲ್ಲಾ ಓಣಿ, ಪಂಕಾಮಸೀದಿ ವ್ಯಾಪ್ತಿ, ಎಂಜಿ ರಸ್ತೆ ಸೇರಿದಂತೆ ವಿವಿಧ ಕಡೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಎಲ್ಲವೂ ಸಹಜ ಸ್ಥಿತಿಯತ್ತ ಸಾಗುತ್ತಿದೆ.28ರವರೆಗೆ ನಿಷೇಧಾಜ್ಞೆ ಮುಂದುವರಿಕೆ: ಹಳೆ ಬಾಗಲಕೋಟೆ ನಗರದಲ್ಲಿ ಫೆ.26 ರಂದು ಹಿಂದೂ ಸಂಘಟನೆಗಳಿಂದ ಪ್ರತಿಭಟನೆಗೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಜತೆಗೆ ಸಮಾಜ ವಿರೋಧಿ ಕೃತ್ಯಗಳಿಗೆ ಶಿಕ್ಷೆ ನಿಶ್ಚಿತ ಎಂದು ಎಚ್ಚರಿಸಿದ್ದಾರೆ. ಫೆ.28 ರವರೆಗೆ ಭಾರತೀಯ ನ್ಯಾಯ ಸಂಹಿತೆ ಕಲಂ.163ರ ಅಡಿ ಹಳೆ ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಕೆಯನ್ನು ಸಹ ಮಾಡಿದ್ದಾರೆ.